ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಮಯಂಕ್ ಅಗರ್‌ವಾಲ್ ನಾಯಕತ್ವದ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಎರಡು ವರ್ಷಗಳ ನಂತರ ಕರುಣ್ ನಾಯರ್ ತಂಡಕ್ಕೆ ಮರಳಿದ್ದು, ದೇವದತ್ ಪಡಿಕ್ಕಲ್ ಅಲಭ್ಯರಾಗಿದ್ದಾರೆ. ಕೃತಿಕ್ ಕೃಷ್ಣ ಮತ್ತು ಶಿಖರ್ ಶೆಟ್ಟಿ ಹೊಸ ಮುಖಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯು ಅಕ್ಟೋಬರ್ 15ರಿಂದ 18ರ ವರೆಗೆ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಿಸಲಾಗಿದೆ. ಮಯಂಕ್ ಅಗರ್‌ವಾಲ್ ನಾಯಕತ್ವ ವಹಿಸಲಿದ್ದಾರೆ. 2 ವರ್ಷಗಳ ಹಿಂದೆ ರಾಜ್ಯ ತಂಡ ತೊರೆದು ವಿದರ್ಭ ಪರ ಆಡಿದ್ದ ಕರುಣ್ ನಾಯರ್ ಮತ್ತೆ ಕರ್ನಾಟಕಕ್ಕೆ ಆಗಮಿಸಿದ್ದು, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಹಿರಿಯ ಆಟಗಾರರಾದ ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ, ಅಭಿನವ್ ಮನೋಹರ್, ಯುವ ಬ್ಯಾಟರ್ ಆರ್.ಸ್ಮರಣ್ ಕೂಡಾ ತಂಡದಲ್ಲಿದ್ದಾರೆ. ಕೃತಿಕ್ ಕೃಷ್ಣ ಹಾಗೂ ಶಿಖರ್ ಶೆಟ್ಟಿ ಮೊದಲ ಬಾರಿ ತಂಡಕ್ಕೆ ಅಯ್ಕೆಯಾಗಿದ್ದಾರೆ. ಆದರೆ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಭಾರತ ಟೆಸ್ಟ್ ತಂಡದಲ್ಲಿರುವ ಕಾರಣ ಸೌರಾಷ್ಟ್ರ ವಿರುದ್ಧ ಪಂದ್ಯಕ್ಕೆ ಲಭ್ಯರಿಲ್ಲ.
ಸೌರಾಷ್ಟ್ರ ಎದುರಿನ ಪಂದ್ಯಕ್ಕೆ ಕರ್ನಾಟಕ ಕ್ರಿಕೆಟ್ ತಂಡ:
ಮಯಾಂಕ್ ಅಗರ್‌ವಾಲ್ (ನಾಯಕ), ಕರುಣ್ ನಾಯರ್, ಸ್ಮರಣ್, ಶ್ರೀಜಿತ್ ಕೆ.ಎಲ್., ಶ್ರೇಯಸ್ ಗೋಪಾಲ್, ವೈಶಾಖ್, ವಿದ್ವತ್, ಅಭಿಲಾಶ್ ಶೆಟ್ಟಿ, ಎಂ. ವೆಂಕಟೇಶ್, ನಿಕಿನ್ ಜೋಸ್, ಅಭಿನವ್, ಕೃತಿಕ್ ಕೃಷ್ಣ ಅನೀಶ್ ಕೆ.ವಿ., ಮೊಹಿನ್ ಖಾನ್, ಶಿಖರ್ ಶೆಟ್ಟಿ.
ಸಿ.ಕೆ. ನಾಯ್ಡು ಟ್ರೋಫಿ: ಕರ್ನಾಟಕ ತಂಡದ ನಾಯಕರಾಗಿ ಅನೀಶ್ವರ್ ಗೌತಮ್ ಆಯ್ಕೆ
ಬೆಂಗಳೂರು: ಅ.16ರಿಂದ 19ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಸಿ.ಕೆ. ನಾಯ್ಡು ಟ್ರೋಫಿ ಅಂಡರ್ -23 ಟೂರ್ನಿಯ ರೈಲ್ವೇಸ್ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಅನೀಶ್ವರ್ ಗೌತಮ್ ನಾಯಕತ್ವ ವಹಿಸಲಿದ್ದಾರೆ. ಹಾರ್ದಿಕ್ ರಾಜ್, ಯಶೋವರ್ಧನ್, ಸಮಿತ್ ಡ್ರಾವಿಡ್, ಧ್ರುವ್ ಪ್ರಭಾಕರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತಂಡ: ಪ್ರಖರ್ ಚತುರ್ವೇದಿ, ಕಾರ್ತಿಕ್ ಎಸ್.ಯು., ಜಾಸ್ಪರ್ ಇ.ಜೆ., ಹರ್ಷಿಲ್ ಧರ್ಮಾನಿ, ಕೆ.ಪಿ.ಕಾರ್ತಿಕೇಯ, ಅನೀಶ್ವರ್ ಗೌತಮ್(ನಾಯಕ), ಸಮಿತ್ ದ್ರಾವಿಡ್, ಧ್ರುವ್ ಪ್ರಭಾಕರ್, ಸಂಜಯ್ ಅಶ್ವಿನ್, ಹಾರ್ದಿಕ್ ರಾಜ್, ಯಶೋವರ್ಧನ್, ಶಶಿಕುಮಾರ್ ಕೆ., ಮೋನಿಶ್ ರೆಡ್ಡಿ, ಧನುಶ್ ಗೌಡ, ಫೈಜಾನ್ ಖಾನ್.
ರಣಜಿ: ವಿದರ್ಭ ತಂಡಕ್ಕೆ ಕನ್ನಡಿಗ ಸಮರ್ಥ್ ಆಯ್ಕೆ
ನಾಗ್ಪುರ: ನಾಗಲ್ಯಾಂಡ್ ವಿರುದ್ದ ಅ.15ರಿಂದ ನಡೆಯಲಿರುವ ರಣಜಿ ಟ್ರೋಫಿ ಪಂದ್ಯಕ್ಕೆ ವಿದರ್ಭ ತಂಡ ಪ್ರಕಟಿಸಲಾಗಿದೆ. ಅಕ್ಷಯ್ ವಾಡ್ಕರ್ ನಾಯಕತ್ವದ ತಂಡದಲ್ಲಿ ಕರ್ನಾಟಕದ ಆರ್. ಸಮರ್ಥ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರು ಕರುಣ್ ನಾಯರ್‌ರಿಂದ ತೆರವಾಗಿರುವ ಸ್ಥಾನವನ್ನು ತುಂಬಲಿದ್ದಾರೆ.
ಮೈಸೂರಿನ ಸಮರ್ಥ್ 2013ರಿಂದ 2023-24ರ ವರೆಗೆ ಕರ್ನಾಟಕ ತಂಡ ಪ್ರತಿನಿಧಿಸಿದ್ದರು. ಆದರೆ ಕಳೆದ ವರ್ಷ ತವರು ರಾಜ್ಯ ತೊರೆದು ಉತ್ತರಾಖಂಡ ಸೇರ್ಪಡೆಗೊಂಡಿದ್ದರು. ಆ ತಂಡದ ಪರ ತಲಾ 7 ಪ್ರಥಮ ದರ್ಜೆ, ಲಿಸ್ಟ್ ಎ ಹಾಗೂ ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 649, 383 ಹಾಗೂ 184 ರನ್ ಗಳಿಸಿದ್ದರು. ಆದರೆ ಇತ್ತೀಚೆಗೆ ಉತ್ತರಾಖಂಡ ತೊರೆದಿದ್ದ ಅವರು, ವಿದರ್ಭ ಸೇರ್ಪಡೆಗೊಳ್ಳುವುದಾಗಿ ತಿಳಿಸಿದ್ದರು.
ಕಮ್‌ಬ್ಯಾಕ್‌ಗೂ ಮುನ್ನ ಪಂತ್ ರಣಜಿಯಲ್ಲಿ ಕಣಕ್ಕೆ?
ನವದೆಹಲಿ: ಕಳೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ವೇಳೆ ಪಾದ ಗಾಯಕ್ಕೆ ತುತ್ತಾಗಿದ್ದ ಭಾರತದ ತಾರಾ ವಿಕೆಟ್ ಕೀಪರ್ ರಿಷಭ್ ಪಂತ್, ಡೆಲ್ಲಿ ಪರ ರಣಜಿ ಆಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಮೂಲಕ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ. ರಿಷಭ್ ಈಗ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ವಿಂಡೀಸ್ ಸರಣಿಗೆ ಆಯ್ಕೆಯಾಗಿಲ್ಲ. ಈ ವಾರ ಸಂಪೂರ್ಣ ಗುಣಮುಖರಾಗುವ ವಿಶ್ವಾಸವಿದೆ. ಅವರು ಅಕ್ಟೋಬರ್ 25ರಿಂದ ಹಿಮಾಚಲ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಡೆಲ್ಲಿ ತಂಡದ ಆಯ್ಕೆ ಲಭ್ಯವಿರುವ ಬಗ್ಗೆ ಡೆಲ್ಲಿ ಕ್ರಿಕೆಟ್ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
