ಐಸಿಸಿ ಮಹಿಳಾ ವಿಶ್ವಕಪ್ 2025ರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಈಗ ನಾಲ್ಕನೇ ಸ್ಥಾನಕ್ಕಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಭಾರತದ ಸೆಮಿಫೈನಲ್ ಹಾದಿ ನಿರ್ಣಾಯಕ ಘಟ್ಟ ತಲುಪಿದೆ.

ಬೆಂಗಳೂರು: ಐಸಿಸಿ ಮಹಿಳಾ ವಿಶ್ವಕಪ್ 2025 ಈಗ ತನ್ನ ನಿರ್ಣಾಯಕ ಹಂತವನ್ನು ತಲುಪುತ್ತಿದೆ. ಸೆಮಿಫೈನಲ್‌ಗೆ ಮೂರು ತಂಡಗಳು ಅರ್ಹತೆ ಪಡೆದಿವೆ, ಈಗ ನಾಲ್ಕನೇ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ಆರಂಭದಲ್ಲಿ ಉತ್ತಮ ಲಯದಲ್ಲಿದ್ದ ಭಾರತ ತಂಡ, ಸತತ ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಭಾನುವಾರ ಇಂಗ್ಲೆಂಡ್ ಮಹಿಳಾ ತಂಡದೊಂದಿಗಿನ ರೋಚಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಭಾರತ ತಂಡ ನಾಲ್ಕು ರನ್‌ಗಳಿಂದ ಸೋತು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ಆದರೂ, ಸೆಮಿಫೈನಲ್ ತಲುಪುವ ಹಾದಿ ಅಷ್ಟು ಸುಲಭವಲ್ಲ, ಏಕೆಂದರೆ ನ್ಯೂಜಿಲೆಂಡ್ ತಂಡವೂ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು.

ಈಗಾಗಲೇ ಮೂರು ತಂಡಗಳ ಸೆಮೀಸ್ ಟಿಕೆಟ್ ಕನ್ಫರ್ಮ್!

ಐಸಿಸಿ ಮಹಿಳಾ ವಿಶ್ವಕಪ್ 2025ರಲ್ಲಿ ಮೂರು ಮಹಿಳಾ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದೆ. ಅದು 5 ರಲ್ಲಿ 4 ಪಂದ್ಯಗಳನ್ನು ಗೆದ್ದು 9 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡವಿದ್ದು, ಐದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಒಂದು ಪಂದ್ಯ ಡ್ರಾ ಆಗಿದೆ. ದಕ್ಷಿಣ ಆಫ್ರಿಕಾ ತಂಡವೂ ಐದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಒಂದರಲ್ಲಿ ಸೋತಿದೆ. 8 ಅಂಕಗಳೊಂದಿಗೆ ಅದು ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಈಗ ನಾಲ್ಕನೇ ಸ್ಥಾನಕ್ಕಾಗಿ ಹೋರಾಟ, ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಕೊನೆಯ ತಂಡ ಯಾವುದು ಎನ್ನುವ ಕುತೂಹಲ ಜೋರಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ತೀವ್ರ ಪೈಪೋಟಿ

ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂದಿನ ಪಂದ್ಯವು ಪ್ರೀ-ಕ್ವಾರ್ಟರ್ ಫೈನಲ್ ಆಗಲಿದೆ, ಈ ಪಂದ್ಯವನ್ನು ಗೆದ್ದ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗುತ್ತದೆ. ಭಾರತ ಮತ್ತು ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವೆ ಅಕ್ಟೋಬರ್ 23 ರಂದು ನವಿ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ವಿಶ್ವಕಪ್‌ನ 24ನೇ ಪಂದ್ಯ ನಡೆಯಲಿದೆ. ಈ ಪಂದ್ಯವು ಸೆಮಿಫೈನಲ್‌ಗೆ ಯಾವ ತಂಡ ತಲುಪುತ್ತದೆ ಎಂಬುದನ್ನು ನಿರ್ಧರಿಸುತ್ತದೆ.

ಭಾರತ ಸೆಮಿಫೈನಲ್ ತಲುಪಲು ಹೀಗೆ ಮಾಡಬೇಕು

ಭಾರತೀಯ ಮಹಿಳಾ ತಂಡ ಸೆಮಿಫೈನಲ್ ಟಿಕೆಟ್ ಪಡೆಯಬೇಕಾದರೆ, ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಬೇಕು. ಇದಲ್ಲದೆ, ಅಕ್ಟೋಬರ್ 26 ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವೆ ಪಂದ್ಯವಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲಬೇಕು. ಅದೇ ದಿನ, ಬಾಂಗ್ಲಾದೇಶ ಮತ್ತು ಭಾರತದ ನಡುವೆಯೂ ಪಂದ್ಯವಿದೆ. ಭಾರತ ಈ ಪಂದ್ಯವನ್ನು ಗೆದ್ದು, ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಸೋತರೆ, ಭಾರತಕ್ಕೆ ಸೆಮಿಫೈನಲ್ ಟಿಕೆಟ್ ಸಿಗುತ್ತದೆ.