ರಿಷಭ್ ಪಂತ್ ನಾಯಕನಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ 4 ದಿನಗಳ ಪಂದ್ಯದಲ್ಲಿ, ಭಾರತ 'ಎ' ತಂಡವು ಮೊದಲ ದಿನವೇ ಮೇಲುಗೈ ಸಾಧಿಸಿದೆ. ಸ್ಪಿನ್ನರ್‌ಗಳಾದ ತನುಶ್ ಕೋಟ್ಯಾನ್ ಹಾಗೂ ಮಾನವ ಸುಥಾರ್ ಅವರ ಪರಿಣಾಮಕಾರಿ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ 'ಎ' ತಂಡ.
ಬೆಂಗಳೂರು: ಸ್ಪಿನ್ನರ್‌ಗಳಾದ ತನುಶ್ ಕೋಟ್ಯಾನ್ ಹಾಗೂ ಮಾನವ ಸುಥಾರ್ ಮಾರಕ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಗುರುವಾರ ಆರಂಭಗೊಂಡ 4 ದಿನಗಳ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಭಾರತ 'ಎ' ಮೊದಲ ದಿನ ಮೇಲುಗೈ ಸಾಧಿಸಿದೆ. ದಿನದಾಟದ ಅಂತ್ಯಕ್ಕೆ ಪ್ರವಾಸಿ ತಂಡ 9 ವಿಕೆಟ್ ನಷ್ಟದಲ್ಲಿ 299 ರನ್ ಕಲೆಹಾಕಿದೆ.
ಟಾಸ್ ಗೆದ್ದ ಭಾರತದ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. 6 ರನ್‌ಗೇ ಮೊದಲ ವಿಕೆಟ್ ಬಿದ್ದರೂ, 2ನೇ ವಿಕೆಟ್‌ಗೆ ಜುಬೈರ್ ಹಂಝ(66) ಹಾಗೂ ಜೋರ್ಡನ್ ಹೆರ್ಮಾನ್ (71) ಜೋಡಿ 130 ರನ್ ಜೊತೆಯಾಟವಾಡಿತು. ಹಂಝ ನಿರ್ಗಮನದ ಬಳಿಕ ತಂಡ ಮತ್ತೆ ಕುಸಿಯಿತು. ಒಂದೆಡೆ ಸತತ ವಿಕೆಟ್ ಉರುಳುತ್ತಿದ್ದರೂ ರುಬಿನ್ ಹೆರ್ಮಾನ್ (54) ಹಾಗೂ ಟಿಯಾನ್ ವ್ಯಾನ್ ವುರೆನ್ (46) ತಂಡವನ್ನು ಮೇಲೆತ್ತಿದರು. ಭಾರತದ ಪರ ತನುಶ್ ಕೋಟ್ಯಾನ್ 4, ಮಾನವ್ 2, ಖಲೀಲ್ ಅಹ್ಮದ್, ಅನ್ಸೂಲ್ ಕಂಬೋಜ್, ಗುರ್ನೂರ್ ಬ್ರಾರ್ ತಲಾ 1 ವಿಕೆಟ್ ಪಡೆದರು.
ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಪಂತ್:
ಇನ್ನು ಇಂಗ್ಲೆಂಡ್ ಪ್ರವಾಸದ ವೇಳೆ ಪಾದಾದ ಗಾಯಕ್ಕೆ ಒಳಗಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿದಿದ್ದ ರಿಷಭ್ ಪಂತ್, ಇದೀಗ ಭಾರತ 'ಎ' ಪರ ನಾಯಕನಾಗಿ ಕಣಕ್ಕಿಳಿಯುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಾಸ್ಸಾಗಿದ್ದಾರೆ. ಮೊದಲಿಗೆ ದಕ್ಷಿಣ ಆಫ್ರಿಕಾ 'ಎ' ತಂಡದ ಎದುರು ಟಾಸ್ ಗೆದ್ದ ಪಂತ್ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು.
ಭಾರತ - ದ.ಆಫ್ರಿಕಾ ಟೆಸ್ಟ್: ಊಟಕ್ಕೆ ಮುನ್ನ ಟೀ ಬ್ರೇಕ್!
ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನ.22ರಿಂದ ಗುವಾಹಟಿಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯ ನಿಗದಿತ ಸಮಯ(ಬೆಳಗ್ಗೆ 9.30) ಬದಲು ಅರ್ಧಗಂಟೆ ಮೊದಲೇ ಆರಂಭ ವಾಗಲಿದ್ದು, ಸಂಜೆ 4ಕ್ಕೆ ದಿನದ ಆಟ ಮುಕ್ತಾಯಗೊಳ್ಳಲಿದೆ.
ಈಶಾನ್ಯ ಭಾರತದಲ್ಲಿ ಈ ಅವಧಿಯಲ್ಲಿ ಸುರ್ಯೋದಯ ಮತ್ತು ಸೂರ್ಯಾಸ್ತ ಬೇಗನೇ ಸಂಭವಿಸಲಿದೆ. ಹಾಗಾಗಿ 2ನೇ ಟೆಸ್ಟ್ ಪಂದ್ಯದ ವೇಳೆ ಕೆಲ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ. ಆ ಪ್ರಕಾರ ಬೆಳಿಗ್ಗೆ 9.30ರ ಬದಲು 9ಕ್ಕೆ ಪಂದ್ಯ ಆರಂಭವಾಗಲಿದೆ. ಸಾಮಾನ್ಯವಾಗಿ ಮೊದಲ ಅವಧಿ ಬಳಿಕ ಊಟ, 2ನೇ ಅವಧಿ ವೇಳೆ ಟೀ ವಿರಾಮ ಇರುತ್ತದೆ. ಆದರೆ ಈ ಟೆಸ್ಟ್‌ನಲ್ಲಿ ಮೊದಲ ಅವಧಿ ಬಳಿಕ ಟೀ, 2ನೇ ಅವಧಿ ಮೇಲೆ ಮಧ್ಯಾಹ್ನ 1.20 ರಿಂದ 40 ನಿಮಿಷಗಳ ಊಟದ ವಿರಾಮ ಇರಲಿದೆ. ಬಳಿಕ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೂ ಕೊನೆ ಅವಧಿ ನಡೆಯಲಿದೆ.
ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ: ಶ್ರೇಯಸ್ ಅಯ್ಯರ್ ಟ್ವೀಟ್
ಸಿಡ್ನಿ: ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿ ಸಿಡ್ನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟೀಂ ಇಂಡಿಯಾ ತಾರಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ತಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೇಯಸ್ ಅಯ್ಯರ್ ನಾನೀಗ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, 'ನಾನು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ. ನೀವೆಲ್ಲರೂ ನೀಡಿದ ಪ್ರೀತಿ, ಬೆಂಬಲ ಹಾಗೂ ಹಾರೈಕೆಗಳಿಗೆ ನಾನು ಋಣಿ. ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಮುಂಬೈ ಮೂಲದ ಬ್ಯಾಟರ್ ಕೃತಜ್ಞತೆ ಸಲ್ಲಿಸಿದ್ದಾರೆ.
