India vs Australia Women's WC Semi-Final ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ನೀಡಿದ 339 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಆರಂಭಿಕ ಆಘಾತದ ಬಳಿಕ ಚೇತರಿಸಿಕೊಂಡಿದೆ. ನಾಯಕಿ ಹರ್ಮಾನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರೋಡ್ರಿಗಸ್ ಅವರ ಅಮೋಘ ಅರ್ಧಶತಕ ಬಾರಿಸಿದ್ದಾರೆ.
ಮುಂಬೈ (ಅ.30): ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೇರುವ ಆಸೆಯಲ್ಲಿರುವ ಭಾರತ ತಂಡ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ನೀಡಿದ ಸವಾಲನ್ನು ದಿಟ್ಟವಾಗಿ ಬೆನ್ನಟ್ಟಲು ಆರಂಭಿಸಿದೆ. 339 ರನ್‌ಗಳ ಚೇಸಿಂಗ್ ವೇಳೆ ಭಾರತ ತನ್ನ ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮಾ (10) ಹಾಗೂ ಅನುಭವಿ ಸ್ಮೃತಿ ಮಂದನಾ (24) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೂ, ನಾಯಕಿ ಹರ್ಮಾನ್‌ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರಿಗಸ್ ಅರ್ಧಶತಕದ ಆಟವಾಡಿದ್ದಲ್ಲದೆ, 3ನೇ ವಿಕೆಟ್‌ಗೆ ಆಕರ್ಷಕ 100 ರನ್ ಜೊತೆಯಾಟವಾಡುವ ಮೂಲಕ ಗೆಲುವಿನ ಭರವಸೆ ಹುಟ್ಟಿಸಿದ್ದಾರೆ.
ಚೇಸಿಂಗ್ ವೇಳೆ ಆರಂಭಿಕರಾಗಿ ಬಂದ ಶೆಫಾಲಿ ವರ್ಮ ಹಾಗೂ ಸ್ಮೃತಿ ಮಂದನಾ ಜೋಡಿ 9ನೇ ಎಸೆತದಲ್ಲೇ ಬೇರ್ಪಟ್ಟಿತು. ಎದುರಿಸಿದ 5 ಎಸೆತಗಳಲ್ಲಿ 2 ಬೌಂಡರಿಗಳಿದ್ದ 10 ರನ್ ಬಾರಿಸಿದ ಶೆಫಾಲಿ, ಕಿಮ್ ಗ್ರಾಥ್‌ಗೆ ಎಲ್‌ಬಿಯಾಗಿ ಹೊರನಡೆದರೆ, ನಂತರ ಬಂದ ಜೇಮಿಮಾ ಜೊತೆ ಸ್ಮೃತಿ ಮಂದನಾ 46 ರನ್‌ಗಳ ಜೊತೆಯಾಟವಾಡಿದರು.
ಈ ಹಂತದಲ್ಲಿ ಲಯ ಕಂಡುಕೊಳ್ಳುತ್ತಿದ್ದ ಸ್ಮೃತಿ ಮಂದನಾ, ಕಿಮ್ ಗ್ರಾಥ್ ಎಸೆತದಲ್ಲಿ ವಿಕೆಟ್ ಕೀಪರ್ ಅಲೀಸಾ ಹೀಲಿಗೆ ಕ್ಯಾಚ್ ನೀಡಿ ಹೊರನಡೆದರು. ಅದಕ್ಕೂ ಮುನ್ನ 24 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್ ಇದ್ದ 24 ರನ್ ಬಾರಿಸಿದ್ದರು. ನಂತರ ಜೊತೆಯಾದ ಜೇಮಿಮಾ ರೋಡ್ರಿಗಸ್ (80*ರನ್, 82 ಎಸೆತ, 10 ಬೌಂಡರಿ) ಹಾಗೂ ಹರ್ಮಾನ್ ಪ್ರೀತ್ ಕೌರ್ (57ರನ್, 68 ಎಸೆತ, 6 ಬೌಂಡರಿ, 1 ಸಿಕ್ಸರ್) 3ನೇ ವಿಕೆಟ್‌ಗೆ 106 ರನ್ ಜೊತೆಯಾಟವಾಡಿದ್ದು, ತಂಡಕ್ಕೆ ಗೆಲುವು ನೀಡುವ ಭರವಸೆಯಲ್ಲಿದ್ದಾರೆ.
ಪೋಬ್ ಲಿಚ್‌ಫೀಲ್ಡ್ ಭರ್ಜರಿ ಶತಕ
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.5 ಓವರ್‌ಗಳಲ್ಲಿ 338 ರನ್‌ಗೆ ಆಲೌಟ್ ಆಯಿತು. ಆರಂಭಿಕ ಆಟಗಾರ್ತಿ ಫೋಬ್ ಲಿಚ್‌ಫೀಲ್ಡ್ 93 ಎಸೆತಗಳಲ್ಲಿ 17 ಬೌಂಡರಿ, 3 ಸಿಕ್ಸರ್ ಇದ್ದ 119 ರನ್ ಬಾರಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. ಅನುಭವಿ ಆಟಗಾರ್ತಿ ಎಲ್ಲೀಸ್ ಪೆರ್ರಿ 88 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್ ಇದ್ದ 77 ರನ್ ಬಾರಿಸಿದರೆ, ಆಶ್ಲೇ ಗಾರ್ಡ್‌ನರ್ 45 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಇದ್ದ 63 ರನ್ ಬಾರಿಸಿದರು.
ಉಳಿದಂತೆ ಯಾವ ಆಸೀಸ್ ಬ್ಯಾಟರ್‌ಗಳಿಂದಲೂ ದೊಡ್ಡ ಮೊತ್ತದ ಕಾಣಿಕೆ ಬರಲಿಲ್ಲ. ಭಾರತದ ಪರವಾಗಿ ಬೌಲಿಂಗ್‌ನಲ್ಲಿ ಶ್ರೀಚರಾನಿ ಹಾಗೂ ದೀಪ್ತಿ ಶರ್ಮ ತಲಾ 2 ವಿಕೆಟ್ ಉರುಳಿಸಿದರೆ, ಕ್ರಾಂತಿಗೌಡ್, ಅಮನ್‌ಜೋತ್ ಕೌರ್ ಹಾಗೂ ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
