ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಭಾರತ-ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ಏಕದಿನ XI ತಂಡವನ್ನು ಆಯ್ಕೆ ಮಾಡಿದ್ದಾರೆ. ಆರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಕೈಬಿಟ್ಟು ಚರ್ಚೆಗೆ ಕಾರಣವಾದ ಅವರು, ನಂತರ ತಮ್ಮ ತಪ್ಪನ್ನು ಅರಿತು ತಂಡಕ್ಕೆ ಸೇರಿಸಿಕೊಂಡರು.
ಮೆಲ್ಬೋರ್ನ್: ಆಸ್ಟ್ರೇಲಿಯಾದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಸಾರ್ವಕಾಲಿಕ ಶ್ರೇಷ್ಠ ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರನ್ನೊಳಗೊಂಡ ಏಕದಿನ XI ತಂಡವನ್ನು ಆಯ್ಕೆ ಮಾಡಿದ್ದಾರೆ. ಆದರೆ ಮೊದಲಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಕೈಬಿಟ್ಟು ಆ ಬಳಿಕ ತಂಡ ಸೇರಿಸಿಕೊಂಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೊದಲಿಗೆ ಕ್ರಿಕೆಟ್ ದಂತಕಥೆ ಸಚಿನ್‌ಗಿಲ್ಲ ಸ್ಥಾನ!
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್, ಮ್ಯಾಕ್ಸ್‌ವೆಲ್ ಆಯ್ಕೆ ಮಾಡಿದ ಮೊದಲ ತಂಡದಲ್ಲಿ ಇರಲಿಲ್ಲ. ಸಚಿನ್ ತೆಂಡೂಲ್ಕರ್ ಬದಲಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ಭಾರತದ ರೋಹಿತ್ ಶರ್ಮಾ ಜೊತೆ ಓಪನರ್ ಆಗಿ ಮ್ಯಾಕ್ಸ್‌ವೆಲ್ ಆಯ್ಕೆ ಮಾಡಿದ್ದರು. ಏಕದಿನದಲ್ಲಿ 49 ಶತಕ ಸಹಿತ 18,426 ರನ್ ಗಳಿಸಿರುವ ಸಚಿನ್‌ರನ್ನು ಆಯ್ಕೆ ಮಾಡಬಹುದಿತ್ತು, ಆದರೆ ಎಡಗೈ-ಬಲಗೈ ಆರಂಭಿಕ ಜೋಡಿಯನ್ನು ಉಳಿಸಿಕೊಳ್ಳಲು ಮತ್ತು ಉತ್ತಮ ದಾಖಲೆಯನ್ನು ಪರಿಗಣಿಸಿ ಕೇವಲ 22 ಶತಕಗಳನ್ನು ಗಳಿಸಿರುವ ವಾರ್ನರ್ ಅವರನ್ನು ಆಯ್ಕೆ ಮಾಡಿದ್ದಾಗಿ ಮ್ಯಾಕ್ಸ್‌ವೆಲ್ ವಿವರಿಸಿದ್ದರು.
ರೋಹಿತ್ ಶರ್ಮಾ ಜೊತೆಗೆ ಭಾರತದ ಆಟಗಾರರಾದ ವಿರಾಟ್ ಕೊಹ್ಲಿ, ಎಂ ಎಸ್ ಧೋನಿ, ಅನಿಲ್ ಕುಂಬ್ಳೆ ಮತ್ತು ಜಸ್ಪ್ರೀತ್ ಬುಮ್ರಾ ಮ್ಯಾಕ್ಸ್‌ವೆಲ್ ಅವರ ಸಾರ್ವಕಾಲಿಕ ಶ್ರೇಷ್ಠ ಏಕದಿನ ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರರಾಗಿದ್ದಾರೆ. ವಾರ್ನರ್ ಜೊತೆಗೆ ಆಸ್ಟ್ರೇಲಿಯಾದ ಆಟಗಾರರಾದ ರಿಕಿ ಪಾಂಟಿಂಗ್, ಮೈಕಲ್ ಬೆವನ್, ಶೇನ್ ವ್ಯಾಟ್ಸನ್, ಮತ್ತು ವೇಗಿಗಳಾದ ಗ್ಲೆನ್ ಮೆಕ್‌ಗ್ರಾತ್, ಬ್ರೆಟ್ ಲೀ ಕೂಡ ಮ್ಯಾಕ್ಸ್‌ವೆಲ್ ತಂಡದಲ್ಲಿದ್ದರು.
ದೊಡ್ಡ ಟ್ವಿಸ್ಟ್
ಆದರೆ, ತಂಡವನ್ನು ಆಯ್ಕೆ ಮಾಡಿದ ನಂತರ, ಗರಿಷ್ಠ ಐದು ಆಸ್ಟ್ರೇಲಿಯಾದ ಆಟಗಾರರನ್ನು ಸೇರಿಸಬೇಕೆಂದುಕೊಂಡಿದ್ದ ತಾನು ತಪ್ಪು ಮಾಡಿದ್ದೇನೆ ಮತ್ತು ತಂಡದಲ್ಲಿ ಆರು ಆಸ್ಟ್ರೇಲಿಯಾದ ಆಟಗಾರರಿದ್ದಾರೆ ಎಂದು ಮ್ಯಾಕ್ಸ್‌ವೆಲ್ ಹೇಳಿದರು. ಹಾಗಾಗಿ, ಬೇಸರದಿಂದಲೇ ಡೇವಿಡ್ ವಾರ್ನರ್ ಅವರನ್ನು ಕೈಬಿಡುತ್ತಿರುವುದಾಗಿ ಸ್ಪಷ್ಟಪಡಿಸಿದರು. ಡೇವಿಡ್ ವಾರ್ನರ್ ಬದಲಿಗೆ ಸಚಿನ್ ಅವರನ್ನೇ ಆರಂಭಿಕ ಆಟಗಾರನಾಗಿ ಸೇರಿಸಿಕೊಳ್ಳುವುದಾಗಿ ಮ್ಯಾಕ್ಸ್‌ವೆಲ್ ತಿಳಿಸಿದರು. ಇದರೊಂದಿಗೆ, ಮ್ಯಾಕ್ಸ್‌ವೆಲ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಭಾರತ-ಆಸ್ಟ್ರೇಲಿಯಾ ಏಕದಿನ XI ತಂಡದಲ್ಲಿ ಆರು ಭಾರತೀಯ ಆಟಗಾರರು ಮತ್ತು ಐದು ಆಸೀಸ್ ಆಟಗಾರರು ಮಾತ್ರ ಉಳಿದರು.
ಮ್ಯಾಕ್ಸ್‌ವೆಲ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಭಾರತ-ಆಸ್ಟ್ರೇಲಿಯಾ ಏಕದಿನ XI:
ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್, ಮೈಕಲ್ ಬೆವನ್, ಎಂಎಸ್ ಧೋನಿ, ಶೇನ್ ವ್ಯಾಟ್ಸನ್, ಅನಿಲ್ ಕುಂಬ್ಳೆ, ಜಸ್ಪ್ರೀತ್ ಬುಮ್ರಾ, ಬ್ರೆಟ್ ಲೀ, ಗ್ಲೆನ್ ಮೆಕ್‌ಗ್ರಾತ್.
