ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೇವಿಸ್ ಸೆಂಚುರಿ ಬಾರಿಸಿ ಮಿಂಚಿದ್ದಾರೆ. ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಹಲವು ದಾಖಲೆಗಳನ್ನು ಬ್ರೇವಿಸ್ ತಮ್ಮದಾಗಿಸಿಕೊಂಡಿದ್ದಾರೆ.  

ಡಾರ್ವಿನ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೇವಿಸ್ ಸೆಂಚುರಿ ಬಾರಿಸಿದ್ದಾರೆ. ಕೇವಲ 22 ವರ್ಷದ ಬ್ರೇವಿಸ್‌ಗೆ ಇದು ಇಂಟರ್‌ನ್ಯಾಷನಲ್ ಕ್ರಿಕೆಟ್‌ನಲ್ಲಿ ಮೊದಲ ಟಿ20 ಸೆಂಚುರಿ. ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂ ಪಡೆಯನ್ನು ಮನಬಂದಂತೆ ದಂಡಿಸಿದ ಮಿನಿ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೇವಿಸ್ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ.

ಡಾರ್ವಿನ್‌ನ ಮರಾರ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ, ಬ್ರೇವಿಸ್‌ರ ಸೆಂಚುರಿಯ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋತಿತ್ತು. ಎರಡು ಬದಲಾವಣೆಗಳೊಂದಿಗೆ ದಕ್ಷಿಣ ಆಫ್ರಿಕಾ ಕಣಕ್ಕಿಳಿಯಿತು. ಸೆನುರನ್ ಮುತುಸಾಮಿ ಮತ್ತು ಜಾರ್ಜ್ ಲಿಂಡೆ ಬದಲಿಗೆ ರಾಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಕ್ವಾಬಯೋಮ್ಸಿ ಪೀಟರ್ ತಂಡಕ್ಕೆ ಸೇರಿದರು. ಆಸ್ಟ್ರೇಲಿಯಾ ಕೂಡ ಎರಡು ಬದಲಾವಣೆಗಳನ್ನು ಮಾಡಿತು. ಅಲೆಕ್ಸ್ ಕ್ಯಾರಿ ಮತ್ತು ಸೀನ್ ಅಬಾಟ್ ತಂಡ ಕೂಡಿಕೊಂಡಿದ್ದು, ಜೋಶ್ ಇಂಗ್ಲಿಸ್ ಮತ್ತು ನಾಥನ್ ಎಲ್ಲಿಸ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹರಿಣಗಳ ಪಡೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರಿಯಾನ್ ರಿಕೆಲ್ಟನ್ ಕೇವಲ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಏಯ್ಡನ್ ಮಾರ್ಕ್‌ರಮ್ ಬ್ಯಾಟಿಂಗ್ ಕೇವಲ 18 ರನ್‌ಗಳಿಗೆ ಸೀಮಿತವಾಯಿತು. ಲುವಾನ್ ಡ್ರೇ ಪ್ರಿಟೋರಿಯಸ್ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೇವಲ 57 ರನ್ ಗಳಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾದ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

Scroll to load tweet…

ಈ ವೇಳೆ ಮೈದಾನಕ್ಕಿಳಿದ ಡೆವಾಲ್ಡ್ ಬ್ರೇವಿಸ್, ಆಸ್ಟ್ರೇಲಿಯಾ ಬೌಲರ್‌ಗಳನ್ನು ಚೆಂಡಾಡಿದರು. ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಡೆವಾಲ್ಡ್ ಬ್ರೇವಿಸ್ ಕೇವಲ 42 ಎಸೆತಗಳನ್ನು ಎದುರಿಸಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಕೊನೆಯವರೆಗೂ ಅಜೇಯ ಬ್ಯಾಟಿಂಗ್ ನಡೆಸಿದ ಡೆವಾಲ್ಡ್ ಬ್ರೇವಿಸ್ ಕೇವಲ 56 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಆಕರ್ಷಕ 125 ರನ್ ಸಿಡಿಸಿದರು.

ಅಪರೂಪದ ದಾಖಲೆ ಬರೆದ ಡೆವಾಲ್ಡ್ ಬ್ರೇವಿಸ್: ಡೆವಾಲ್ಡ್ ಬ್ರೇವಿಸ್ ಇದೀಗ ಆಸ್ಟ್ರೇಲಿಯಾ ಎದುರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ವೈಯುಕ್ತಿಕ ಸ್ಕೋರ್ ದಾಖಲಿಸಿದ ಸಾಧನೆ ಮಾಡಿದ್ದಾರೆ. ಈ ಮೊದಲು ಭಾರತದ ಋತುರಾಜ್ ಗಾಯಕ್ವಾಡ್ ಅಸೀಸ್ ಎದುರು 2023ರಲ್ಲಿ ಗುವಾಹಟಿಯಲ್ಲಿ ನಡೆದ ಟಿ20 ಪಂದ್ಯದಲ್ಲಿ 123 ರನ್ ಸಿಡಿಸಿದ್ದರು. ಆ ದಾಖಲೆಯನ್ನು ಇದೀಗ ಬ್ರೇವಿಸ್ ಮುರಿದಿದ್ದಾರೆ.

Scroll to load tweet…

ಇನ್ನು ಇದಷ್ಟೇ ಅಲ್ಲದೇ ಬ್ರೇವಿಸ್, ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತಿಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸದ್ಯ ಬ್ರೇವಿಸ್‌ಗೆ 22 ವರ್ಷ 105 ದಿನಗಳಾಗಿವೆ. ಇದಕ್ಕೂ ಮೊದಲು ಹರಿಣಗಳ ಪರ ರಿಚರ್ಡ್ ಲೆವಿ, ಕಿವೀಸ್ ಎದುರು 24 ವರ್ಷ 36 ದಿನವಿದ್ದಾಗ ಶತಕ ಸಿಡಿಸಿದ್ದರು.

ಇದೆಲ್ಲದರ ಜತೆಗೆ ಡೆವಾಲ್ಡ್ ಬ್ರೇವಿಸ್ ಇದೀಗ ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ದಾಖಲಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೊದಲು ಫಾಫ್ ಡು ಪ್ಲೆಸಿಸ್ 2015ರಲ್ಲಿ 119 ರನ್ ಸಿಡಿಸಿದ್ದರು. ಇದೀಗ ಆ ದಾಖಲೆಯನ್ನೂ ಬ್ರೇವಿಸ್ ಬ್ರೇಕ್ ಮಾಡಿದ್ದಾರೆ.