ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ 10 ಆಟಗಾರರನ್ನು ಬಿಡುಗಡೆ ಮಾಡಲು ಚಿಂತಿಸುತ್ತಿದೆ. ಧೋನಿ ಮತ್ತು ಋತುರಾಜ್ ಗಾಯಕ್ವಾಡ್ ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನೀರಸ ಪ್ರದರ್ಶನ ತೋರುವ ಮೂಲಕ ಗ್ರೂಪ್ ಹಂತದಲ್ಲಿಯೇ ಹೊರಬಿದ್ದು ನಿರಾಸೆ ಅನುಭವಿಸಿತ್ತು. ಹೀಗಾಗಿ 5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಕೆಲವೊಂದು ಕಠಿಣ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಿದೆ.
ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ನ ಹಂಗಾಮಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಹಾಲಿ ನಾಯಕ ಋತುರಾಜ್ ಗಾಯಕ್ವಾಡ್, ಚೆನ್ನೈನಲ್ಲಿ ಒಂದೆಡೆ ಕೂತು ಸಾಕಷ್ಟು ವಿಚಾರಗಳನ್ನು ಸಮಾಲೋಚನೆ ಮಾಡಿದ್ದಾರೆ. ಇನ್ನು ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಬರೋಬ್ಬರಿ 10 ಆಟಗಾರರನ್ನು ರಿಲೀಸ್ ಮಾಡಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಸಿಎಸ್‌ಕೆ ತಂಡದಲ್ಲಿ ಮೇಜರ್ ಚೇಂಜ್?
ಕೆಲ ಮಾಧ್ಯಮಗಳ ವರದಿ ಪ್ರಕಾರ 2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 10 ಆಟಗಾರರನ್ನು ರಿಲೀಸ್ ಮಾಡುವ ಸಾಧ್ಯತೆಯಿದೆ. ಈ ಪೈಕಿ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(9.75 ಕೋಟಿ), ನ್ಯೂಜಿಲೆಂಡ್ ಮೂಲದ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ(6.25 ಕೋಟಿ), ಕಿವೀಸ್ ಮೂಲದ ಮತ್ತೋರ್ವ ಆಲ್ರೌಂಡರ್ ರಚಿನ್ ರವೀಂದ್ರ(4 ಕೋಟಿ), ರಾಹುಲ್ ತ್ರಿಪಾಠಿ(3.4), ಸ್ಯಾಮ್ ಕರ್ರನ್(2.4 ಕೋಟಿ), ಗುರ್ಜಪನೀತ್ ಸಿಂಗ್(2.2 ಕೋಟಿ), ನೇಥನ್ ಎಲ್ಲೀಸ್(2 ಕೋಟಿ ರುಪಾಯಿ), ದೀಪಕ್ ಹೂಡಾ(1.75 ಕೋಟಿ ರುಪಾಯಿ), ಜೇಮಿ ಓವರ್‌ಟನ್(1.5 ಕೋಟಿ ರುಪಾಯಿ) ಹಾಗೂ ವಿಜಯ್ ಶಂಕರ್(1.2 ಕೋಟಿ ರುಪಾಯಿ). ಈ ಹತ್ತು ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಾಕಷ್ಟು ನಿರೀಕ್ಷೆಯಿಟ್ಟು ಖರೀದಿಸಿತ್ತು. ಆದರೆ ಆ ನಿರೀಕ್ಷೆ ಈಡೇರಿಸುವಲ್ಲಿ ಈ ಆಟಗಾರರು ವಿಫಲವಾಗಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 10 ಸೋಲು ಹಾಗೂ ಕೇವಲ 4 ಗೆಲುವುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 2025ರ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎನ್ನುವ ಕುಖ್ಯಾತಿಗೆ ಪಾತ್ರವಾಗಿತ್ತು.
‘ನನ್ನನ್ನು ತಂಡದಿಂದ ಬಿಡುಗಡೆ ಮಾಡಿ’: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರ್.ಅಶ್ವಿನ್ ಮನವಿ
ಚೆನ್ನೈ: ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮುಂಬರುವ ಐಪಿಎಲ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಅಶ್ವಿನ್‌ಗೆ ತಮ್ಮ ಭವಿಷ್ಯದ ಬಗ್ಗೆ ಆತಂಕವಿದೆ. ಇದೇ ಕಾರಣಕ್ಕೆ ಫ್ರಾಂಚೈಸಿ ಜೊತೆ ಅಶ್ವಿನ್ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮನ್ನು ತಂಡದಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ಬಾರಿ ಅವರು ಚೆನ್ನೈ ಪರ 9 ಪಂದ್ಯಗಳನ್ನಾಗಿದ್ದು, ಕೇವಲ 7 ವಿಕೆಟ್ ಪಡೆದಿದ್ದರು. ಹೀಗಾಗಿ ಈ ವರ್ಷ ಅವರಿಗೆ ತಂಡದಲ್ಲಿ ಸೂಕ್ತ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಅಶ್ವಿನ್ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ 5 ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು.
2009ರಿಂದ 2015ರ ವರೆಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಅಶ್ವಿನ್, ಬಳಿಕ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದರು. ಕಳೆದ ಆವೃತ್ತಿ ಐಪಿಎಲ್‌ಗೂ ಮುನ್ನ ಅಶ್ವಿನ್‌ರನ್ನು ಚೆನ್ನೈ ತಂಡ 9.75 ಕೋಟಿ ರು. ನೀಡಿ ಮರಳಿ ತಂಡಕ್ಕೆ ಸೇರಿಸಿಕೊಂಡಿತ್ತು. ಸಾಕಷ್ಟು ನಿರೀಕ್ಷೆಗಳೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಿಕೊಂಡಿದ್ದ ಅಶ್ವಿನ್‌ಗೆ ನಿರಾಸೆ ಎದುರಾಗಿತ್ತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಅಶ್ವಿನ್ ಕಮಾಲ್ ಮಾಡಲು ವಿಫಲವಾಗಿದ್ದರು.
