ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 309 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಪಥುಂ ನಿಸ್ಸಾಂಕ ಎರಡನೇ ಸ್ಥಾನದಲ್ಲಿದ್ದಾರೆ.
ದುಬೈ: ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಯಾರು ಎಂಬ ಬಗ್ಗೆ ಇನ್ನು ಯಾವುದೇ ಚರ್ಚೆ ಬೇಡ. ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಆ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದಾರೆ. ಆರು ಪಂದ್ಯಗಳನ್ನಾಡಿರುವ ಅಭಿಷೇಕ್ ಇದುವರೆಗೆ 309 ರನ್ ಗಳಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯ ಬಾಕಿ ಉಳಿದಿದ್ದು, ಅವರು ಇನ್ನೆಷ್ಟು ರನ್ ಗಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಭಿಷೇಕ್ 51.50ರ ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದಾರೆ. 204.64 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಮೂರು ಅರ್ಧಶತಕಗಳನ್ನು ಗಳಿಸಿರುವ ಅಭಿಷೇಕ್ ಅವರ ಗರಿಷ್ಠ ಸ್ಕೋರ್ 75 ರನ್ ಆಗಿದೆ. ಅಭಿಷೇಕ್ 19 ಸಿಕ್ಸರ್ ಮತ್ತು 31 ಬೌಂಡರಿಗಳನ್ನು ಬಾರಿಸಿದ್ದಾರೆ.
ನಿಸ್ಸಾಂಕಗೆ ಎರಡನೇ ಸ್ಥಾನ
ರನ್ ಗಳಿಸಿದವರಲ್ಲಿ ಶ್ರೀಲಂಕಾದ ಆರಂಭಿಕ ಆಟಗಾರ ಪಥುಂ ನಿಸ್ಸಾಂಕ ಎರಡನೇ ಸ್ಥಾನದಲ್ಲಿದ್ದಾರೆ. ನಿಸ್ಸಾಂಕ ಆರು ಪಂದ್ಯಗಳಲ್ಲಿ 261 ರನ್ ಗಳಿಸಿದ್ದಾರೆ. ಸೂಪರ್ ಫೋರ್‌ನ ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ಗಳಿಸಿದ 107 ರನ್‌ಗಳು ಅವರ ಗರಿಷ್ಠ ಸ್ಕೋರ್ ಆಗಿದೆ. ಇದು ಟೂರ್ನಿಯ ಮೊದಲು ಹಾಗೂ ಏಕೈಕ ಶತಕವೂ ಹೌದು. ಅಭಿಷೇಕ್‌ಗೆ ಸ್ವಲ್ಪವಾದರೂ ಸವಾಲು ಒಡ್ಡಬಲ್ಲ ಆಟಗಾರ ನಿಸ್ಸಾಂಕ ಆಗಿದ್ದರು. ಆದರೆ, ಏಷ್ಯಾಕಪ್‌ನಲ್ಲಿ ಶ್ರೀಲಂಕಾಕ್ಕೆ ಇನ್ನು ಪಂದ್ಯಗಳಿಲ್ಲದ ಕಾರಣ ಅಭಿಷೇಕ್‌ನನ್ನು ಹಿಂದಿಕ್ಕಲು ಸಾಧ್ಯವಿಲ್ಲ. 178 ರನ್ ಗಳಿಸಿರುವ ಬಾಂಗ್ಲಾದೇಶದ ಸೈಫ್ ಹಸನ್ ಮೂರನೇ ಸ್ಥಾನದಲ್ಲಿದ್ದಾರೆ. ಸೈಫ್ ಕೇವಲ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಎರಡು ಅರ್ಧಶತಕಗಳನ್ನು ಗಳಿಸಿರುವ ಸೈಫ್ ಅವರ ಗರಿಷ್ಠ ಸ್ಕೋರ್ 69 ರನ್ ಆಗಿದೆ. ಬಾಂಗ್ಲಾದೇಶಕ್ಕೂ ಇನ್ನು ಯಾವುದೇ ಪಂದ್ಯಗಳು ಉಳಿದಿಲ್ಲ.
ಅಭಿಷೇಕ್‌ಗೆ ಫರ್ಹಾನ್ ಚಾಲೆಂಜ್?
ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫರ್ಹಾನ್ ಆರು ಪಂದ್ಯಗಳಲ್ಲಿ 160 ರನ್ ಗಳಿಸಿದ್ದಾರೆ. ಅಭಿಷೇಕ್‌ನನ್ನು ಹಿಂದಿಕ್ಕಬೇಕಾದರೆ, ಫರ್ಹಾನ್ ಭಾರತ ವಿರುದ್ಧದ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಬೇಕಾಗುತ್ತದೆ. ಸದ್ಯ ಇಬ್ಬರ ನಡುವಿನ ವ್ಯತ್ಯಾಸ 149 ರನ್ ಆಗಿದೆ. ಶ್ರೀಲಂಕಾದ ಕುಸಾಲ್ ಪೆರೆರಾ ಐದನೇ ಸ್ಥಾನದಲ್ಲಿದ್ದಾರೆ. ಆರು ಪಂದ್ಯಗಳಿಂದ 146 ರನ್ ಗಳಿಸಿದ್ದಾರೆ. ಭಾರತದ ಆಟಗಾರ ತಿಲಕ್ ವರ್ಮಾ ಆರನೇ ಸ್ಥಾನದಲ್ಲಿದ್ದಾರೆ. ಆರು ಪಂದ್ಯಗಳಲ್ಲಿ 144 ರನ್ ಗಳಿಸಿದ್ದಾರೆ. ಆರು ಪಂದ್ಯಗಳಲ್ಲಿ 115 ರನ್ ಗಳಿಸಿರುವ ಭಾರತದ ಉಪನಾಯಕ ಶುಭಮನ್ ಗಿಲ್ 12ನೇ ಸ್ಥಾನದಲ್ಲಿದ್ದಾರೆ. 47 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ.
ಭಾರತದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಸದ್ಯ 14ನೇ ಸ್ಥಾನದಲ್ಲಿದ್ದಾರೆ. ಆರು ಪಂದ್ಯಗಳಲ್ಲಿ ಕೇವಲ ಮೂರು ಇನ್ನಿಂಗ್ಸ್‌ಗಳನ್ನು ಆಡಿರುವ ಸಂಜು 108 ರನ್ ಗಳಿಸಿದ್ದಾರೆ. ಒಮಾನ್ ವಿರುದ್ಧ ಗಳಿಸಿದ 56 ರನ್‌ಗಳು ಅವರ ಗರಿಷ್ಠ ಸ್ಕೋರ್ ಆಗಿದೆ. 36ರ ಸರಾಸರಿ ಮತ್ತು 171.42ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಆಟಗಾರ ಕುಲ್ದೀಪ್ ಯಾದವ್ ಅಗ್ರಸ್ಥಾನದಲ್ಲಿದ್ದಾರೆ. ಆರು ಪಂದ್ಯಗಳಿಂದ 13 ವಿಕೆಟ್ ಪಡೆದಿದ್ದಾರೆ. ಒಂಬತ್ತು ವಿಕೆಟ್ ಪಡೆದಿರುವ ಪಾಕಿಸ್ತಾನದ ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಸವಾಲು ಒಡ್ಡಬಲ್ಲ ಇತರ ಆಟಗಾರರಾಗಿದ್ದಾರೆ. ಫೈನಲ್‌ನಲ್ಲಿ ಐದು ವಿಕೆಟ್ ಪಡೆದರೆ ಮಾತ್ರ ಅವರು ಕುಲ್ದೀಪ್ ಯಾದವ್ ಅವರನ್ನು ಹಿಂದಿಕ್ಕಲು ಸಾಧ್ಯ. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಹಾಗೂ ಮುಸ್ತಾಫಿಜುರ್ ರೆಹಮಾನ್ ತಲಾ 9 ವಿಕೆಟ್ ಕಬಳಿಸಿದ್ದಾರೆ.
