ಜೋಶ್ ಹೇಜಲ್‌ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ಭಾರತದ ಅಗ್ರ ಕ್ರಮಾಂಕ ಕುಸಿದರೂ, ಅಭಿಷೇಕ್ ಶರ್ಮಾ ಅವರ ಕೆಚ್ಚೆದೆಯ ಅರ್ಧಶತಕ (68) ಮತ್ತು ಹರ್ಷಿತ್ ರಾಣಾ (35) ಅವರ ಬೆಂಬಲದಿಂದ ಟೀಂ ಇಂಡಿಯಾ 125 ರನ್ ಗಳಿಸಿ ಆಸ್ಟ್ರೇಲಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿತು.

ಮೆಲ್ಬರ್ನ್: ಜೋಶ್ ಹೇಜಲ್‌ವುಡ್ ಮಾರಕ ದಾಳಿಯ ಹೊರತಾಗಿಯೂ, ಅಭಿಷೇಕ್ ಶರ್ಮಾ ಬಾರಿಸಿದ ಕೆಚ್ಚೆದೆಯ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 125 ರನ್ ಗಳಿಸಿ ಸರ್ವಪತನ ಕಂಡಿದೆ. ಈ ಮೂಲಕ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ.

ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಜೋಶ್ ಹೇಜಲ್‌ವುಡ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಭಾರತ ತಂಡವು ಕೇವಲ 32 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ಕು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಶುಭ್‌ಮನ್ ಗಿಲ್ 5 ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ 2, ಸೂರ್ಯಕುಮಾರ್ ಯಾದವ್ 1 ಹಾಗೂ ತಿಲಕ್ ವರ್ಮಾ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದರು. ಪವರ್‌ ಪ್ಲೇನೊಳಗೆ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು.

ಇನ್ನು ಅಕ್ಷರ್ ಪಟೇಲ್ ಇಲ್ಲದ ರನ್ ಕದಿಯಲು ಹೋಗಿ ಕೇವಲ 7 ರನ್ ಗಳಿಸಿ ರನೌಟ್ ಆದರು. ಈ ವೇಳೆಗೆ ಭಾರತ 7.3 ಓವರ್‌ಗಳಲ್ಲಿ 49 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Scroll to load tweet…

ಅಭಿಷೇಕ್ ಶರ್ಮಾ ಕೆಚ್ಚೆದೆಯ ಹೋರಾಟ:

ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಆರಂಭಿಸಿದ ಅಭಿಷೇಕ್ ಶರ್ಮಾ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ, ವೃತ್ತಿಜೀವನದ ಆರನೇ ಟಿ20 ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅಭಿಷೇಕ್ ಶರ್ಮಾ 37 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 68 ರನ್ ಬಾರಿಸಿ ಒಂಬತ್ತನೆಯವರಾಗಿ ವಿಕೆಟ್ ಒಪ್ಪಿಸಿದರು.

ಆಸರೆಯಾದ ಹರ್ಷಿತ್ ರಾಣಾ-ಅಭಿಷೇಕ್ ಜೋಡಿ:

ಕೇವಲ 49 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ ಆರನೇ ವಿಕೆಟ್‌ಗೆ ಹರ್ಷಿತ್ ರಾಣಾ ಹಾಗೂ ಅಭಿಷೇಕ್ ಶರ್ಮಾ ಜೋಡಿ 56 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಜವಬ್ದಾರಿಯುತ ಬ್ಯಾಟಿಂಗ್ ನಡೆಸಿದ ಹರ್ಷಿತ್ ರಾಣಾ 33 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 35 ರನ್ ಸಿಡಿಸಿದರು. ಅಭಿಷೇಕ್ ಶರ್ಮಾ ಹಾಗೂ ಹರ್ಷಿತ್ ರಾಣಾ ಹೊರತುಪಡಿಸಿ ಭಾರತದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಲಿಲ್ಲ.

ಆಸ್ಟ್ರೇಲಿಯಾ ಮಾರಕ ದಾಳಿ

ಇನ್ನು ಆಸ್ಟ್ರೇಲಿಯಾ ಪರ ಶಿಸ್ತು ಬದ್ದ ದಾಳಿ ನಡೆಸಿದ ಜೋಶ್ ಹೇಜಲ್‌ವುಡ್ 4 ಓವರ್‌ನಲ್ಲಿ ಕೇವಲ 13 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದರೆ, ಕ್ಸೇವಿಯರ್ ಬಾರ್ಲೆಟ್‌ ಹಾಗೂ ನೇಥನ್ ಎಲ್ಲಿಸ್ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ಮಾರ್ಕಸ್ ಸ್ಟೋನಿಸ್ ಒಂದು ವಿಕೆಟ್ ಪಡೆದರು.