ಸರ್ಕಾರಿ ನೌಕರರಿಗೆ ಯುಪಿಎಸ್ ಆಯ್ಕೆಗೆ ಕೊನೆ ದಿನ: ಕೇಂದ್ರ ಸರ್ಕಾರಿ ನೌಕರರಿಗೆ ಯುಪಿಎಸ್ (ಯುನಿಫೈಡ್‌ ಪೆನ್ಶನ್‌ ಸ್ಕೀಮ್‌) ಆಯ್ಕೆ ಮಾಡುವ ಕೊನೆಯ ದಿನಾಂಕವನ್ನು ಸೆ. 30ರವರೆಗೆ ವಿಸ್ತರಿಸಲಾಗಿದೆ.

1. ರಿಜಿಸ್ಟರ್ಡ್‌ ಪೋಸ್ಟ್‌ಗೆ ಗುಡ್‌ಬೈ: ಈ ತಿಂಗಳಿನಿಂದ ನೀವು ಅಂಚೆ ಕಚೇರಿಯಲ್ಲಿ ರಿಜಿಸ್ಟರ್ಡ್‌ ಪೋಸ್ಟ್‌ ಮಾಡಲು ಹೊರಟರೆ ಆ ಸೌಲಭ್ಯ ನಿಮಗೆ ಸಿಗೋದಿಲ್ಲ. ಕಾರಣ ಈಗ ರಿಜಿಸ್ಟರ್ಡ್‌ ಪೋಸ್ಟ್‌ ಸ್ಪೀಡ್‌ ಪೋಸ್ಟ್‌ನೊಂದಿಗೆ ವಿಲೀನವಾಗಿದೆ. ಸೆಪ್ಟೆಂಬರ್ 1ರಿಂದ ದೇಶದೊಳಗೆ ಸ್ಪೀಡ್‌ ಪೋಸ್ಟ್‌ ಮಾತ್ರ ಕಳುಹಿಸಬಹುದು.

2. ಐಟಿಆರ್‌ ಫೈಲಿಂಗ್‌ಗೆ ಅಂತಿಮ ಗಡುವು: ಆದಾಯ ತೆರಿಗೆ ಇಲಾಖೆ, ಐಟಿಆರ್ ಅಂದರೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ ಸಲ್ಲಿಕೆಗೆ ಇರುವ ಗಡುವನ್ನು ಜುಲೈ 31 ರಿಂದ ಸೆಪ್ಟೆಂಬರ್ 15ರವರೆಗೆ ವಿಸ್ತರಿಸಿದೆ. ಸಾಮಾನ್ಯವಾಗಿ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿರುತ್ತದೆ, ಆದರೆ ಈ ವರ್ಷ ಟ್ಯಾಕ್ಸ್‌ ಕಟ್ಟುವವರಿಗೆ ಹೆಚ್ಚುವರಿಯಾಗಿ 46 ದಿನಗಳನ್ನು ನೀಡಲಾಗಿದೆ. ಅದು ಈ ತಿಂಗಳು ಕೊನೆಗೊಳ್ಳಲಿದೆ.

3. ಸರ್ಕಾರಿ ನೌಕರರಿಗೆ ಯುಪಿಎಸ್ ಆಯ್ಕೆಗೆ ಕೊನೆ ದಿನ: ಕೇಂದ್ರ ಸರ್ಕಾರಿ ನೌಕರರಿಗೆ ಯುಪಿಎಸ್ (ಯುನಿಫೈಡ್‌ ಪೆನ್ಶನ್‌ ಸ್ಕೀಮ್‌) ಆಯ್ಕೆ ಮಾಡುವ ಕೊನೆಯ ದಿನಾಂಕವನ್ನು ಸೆ. 30ರವರೆಗೆ ವಿಸ್ತರಿಸಲಾಗಿದೆ. ಎನ್‌ಪಿಎಸ್‌ (ನ್ಯಾಶನಲ್‌ ಪೆನ್ಶನ್‌ ಸಿಸ್ಟಮ್‌) ಸೌಲಭ್ಯ ಪಡೆಯೋದಾ ಅಥವಾ ಯುಪಿಎಸ್ ಅನ್ನು ಆಯ್ಕೆ ಮಾಡಿಕೊಳ್ಳೋದಾ ಅನ್ನೋದನ್ನು ಸೆ.30ರೊಳಗೆ ನಿರ್ಧರಿಸಿ ಸಂಬಂಧಪಟ್ಟ ಪ್ರಕ್ರಿಯೆ ಮುಗಿಸೋದು ಉತ್ತಮ.

4. ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ನಿಯಮ ಬದಲಾವಣೆ: ಎಸ್‌ಬಿಐ ಈ ತಿಂಗಳಿನಿಂದ ತನ್ನ ಕ್ರೆಡಿಟ್‌ ಕಾರ್ಡ್‌ಗಳ ನಿಯಮಗಳನ್ನು ಬದಲಾಯಿಸಿದೆ. ಈಗ ಗೇಮಿಂಗ್ ಬಳಕೆಗೆ, ವ್ಯಾಪಾರ ವಹಿವಾಟುಗಳಿಗೆ ಮತ್ತು ಸರ್ಕಾರಿ ವಹಿವಾಟು ನಡೆಸಿದರೆ ಆಯ್ದ ಕಾರ್ಡ್‌ಗಳಲ್ಲಿ ರಿವಾರ್ಡ್ ಪಾಯಿಂಟ್‌ಗಳು ಸಿಗುವುದಿಲ್ಲ. ಇನ್ನೊಂದು ಅಂಶವೆಂದರೆ ಕಾರ್ಡ್ ಪ್ರೊಟೆಕ್ಷನ್ ಪ್ಲಾನ್ (ಸಿಪಿಪಿ) ಹೊಂದಿರುವ ಗ್ರಾಹಕರು ಸೆಪ್ಟೆಂಬರ್ 16 ರಿಂದ ಆಟೋಮ್ಯಾಟಿಕ್ ಆಗಿ ಹೊಸ ವಿಭಾಗಕ್ಕೆ ಶಿಫ್ಟ್‌ ಆಗುತ್ತಾರೆ. ಇದರಲ್ಲಿ ಮೂರು ವಿಭಾಗವಿದ್ದು, ಕ್ಲಾಸಿಕ್‌ ವಿಭಾಗಕ್ಕೆ ರು. 999, ಪ್ರೀಮಿಯಂಗೆ ರು. 1,499 ಮತ್ತು ಪ್ಲಾಟಿನಂಗೆ ರು. 1,999 ನವೀಕರಣ ಶುಲ್ಕ ಇರುತ್ತದೆ.

5. ಎಫ್‌ಡಿ ಸ್ಪೆಷಲ್‌ ಆಫರ್‌ ಪಡೆಯಲು ಲಾಸ್ಟ್‌ ಚಾನ್ಸ್: ಎಫ್‌ಡಿ ಅಂದರೆ ಫಿಕ್ಸ್‌ಡ್‌ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ನೀವೀಗ ಚುರುಕಾಗಬೇಕು. ಇಂಡಿಯನ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ಗಳ ವಿಶೇಷ ಅವಧಿಯ ಎಫ್‌ಡಿ ಪ್ಲಾನ್‌ಗಳ ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನಾಂಕ. ಆಸಕ್ತರು ಈ ಗಡುವಿನೊಳಗೆ ಇಂಡಿಯನ್ ಬ್ಯಾಂಕಿನ 444 ದಿನಗಳು ಮತ್ತು 555 ದಿನಗಳ ಎಫ್‌ಡಿ ಯೋಜನೆ ಮತ್ತು ಐಡಿಬಿಐ ಬ್ಯಾಂಕಿನ 444, 555 ಮತ್ತು 700 ದಿನಗಳ ಎಫ್‌ಡಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.