Superwoman : ಧೈರ್ಯ ಮಾಡಿ ಮುನ್ನುಗ್ಗಿದ್ರೆ ಗುರಿ ತಲುಪಬಹುದು. ಅದಕ್ಕೆ ಈ ಮಹಿಳೆ ಉತ್ತಮ ನಿದರ್ಶನ. ಎಷ್ಟೇ ಕಷ್ಟ ಬಂದ್ರೂ ಎದುರಿಸಿ ಛಲ ಬಿಡದೆ ವ್ಯಾಪಾರ ಮಾಡ್ತಿರುವ ಮಹಿಳೆ ಐದು ಭಾಷೆ ಬಲ್ಲಳು.
ಮಹಿಳೆ ಎಂಥ ಕೆಲ್ಸವನ್ನೂ ನಗ್ತಾ ಮಾಡಬಲ್ಲಳು. ಅವಳು ಬರೀ ಅಡುಗೆ ಮನೆಗೆ ಸೀಮಿತ ಅಲ್ವೇ ಅಲ್ಲ. ಮನೆ ಒಳಗೆ, ಹೊರಗೆ ಎಲ್ಲೆಡೆ ಅದೆಷ್ಟೇ ವಿರೋಧ ಬಂದ್ರೂ ಅದನ್ನು ಎದುರಿಸಿ ನಿಲ್ಲಬಲ್ಲ ತಾಕತ್ತು ಮಹಿಳೆಗಿದೆ. ಸಮಾಜದ ಕೆಂಗಣ್ಣು, ಊರವರ ಮಾತಿಗೆ ಬಗ್ಗದೆ 11 ವರ್ಷಗಳಿಂದ ಒಂದೇ ಜಾಗದಲ್ಲಿ ಒಂದೇ ಆಹಾರವನ್ನು ಒಬ್ಬಳೇ ಮಹಿಳೆ ಮಾರಾಟ ಮಾಡೋದು ಸುಲಭದ ಕೆಲ್ಸ ಅಲ್ವೇ ಅಲ್ಲ. ಆದ್ರೆ ಅದನ್ನು ಮುಂಬೈ ಮಹಿಳೆಯೊಬ್ಬರು ಮಾಡಿ ತೋರಿಸಿದ್ದಾರೆ. ಬರುವ ಕಸ್ಟಮರ್ ಗೆ ನಿರಾಸೆಯಾಗ್ಬಾರದು ಎನ್ನುವ ಕಾರಣಕ್ಕೆ ಅವರ ಭಾಷೆಯಲ್ಲಿಯೇ ಮಾತನಾಡುವ ಈ ಮಹಿಳೆ ಶ್ರಮಕ್ಕೆ ಶಹಬ್ಬಾಸ್ ಹೇಳ್ಲೇಬೇಕು.
ಮುಂಬೈನ ಬಿಎಂಸಿ ಆಸ್ಪತ್ರೆ ಬಳಿ ಕಳೆದ 11 ವರ್ಷಗಳಿಂದ ವಡಾ ಪಾವ್ (Vada Pav) ಮಾರಾಟ ಮಾಡ್ತಿರುವ ಮಹಿಳೆ ಎಲ್ಲರಿಗೆ ಸ್ಪೂರ್ತಿ. ಇಶಿಕಾ ಧನ್ಮೆಹರ್, ಲಿಂಕ್ಡ್ ಇನ್ (linked in) ನಲ್ಲಿ ತಮ್ಮ ತಾಯಿ ಕೆಲ್ಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಇಶಿಕಾ ತಾಯಿ ವಡಾಪಾವ್ ಅಂಗಡಿ ಶುರು ಮಾಡಿದಾಗ ಯಾವ್ದೂ ಸುಲಭ ಆಗಿರಲಿಲ್ಲ. ಅಂಗಡಿಯನ್ನು ಅನೇಕ ಬಾರಿ ಕೆಡವಿ ಹಾಕಿದ್ರು. ಆಸ್ಪತ್ರೆ ಸಿಬ್ಬಂದಿ, ವಡಾ ಪಾವ್ ಮಾರಾಟ ತಡೆಯಲು ನಾನಾ ಪ್ರಯತ್ನ ನಡೆಸಿದ್ದರು. ಅನೇಕ ಬಾರಿ, ಅಂಗಡಿ ವಸ್ತುಗಳು ಕಳುವಾಗಿದ್ದವು. ನೆರೆ ಹೊರೆಯವರಿಂದ ಸಾಕಷ್ಟು ಸವಾಲುಗಳನ್ನು ಅವರು ಎದುರಿಸಿದ್ರು. ಒಬ್ಬ ಮಹಿಳೆ, ವಡಾ ಪಾವ್ ಮಾರಾಟ ಮಾಡೋಕೇ ಸಾಧ್ಯವಾ ಎಂಬ ಅನುಮಾನ ಅವ್ರ ಮನಸ್ಸಿನಲ್ಲಿತ್ತು. ಆದ್ರೆ ಇಶಿಕಾ ತಾಯಿಗೆ ಇದ್ಯಾವುದೂ ಸಮಸ್ಯೆ ಎಲ್ಲಿಸಲೇ ಇಲ್ಲ. ಮಹಿಳೆ ಗುರಿ ಒಂದೇ ಆಗಿದ್ರಿಂದ ಎಲ್ಲ ಕಷ್ಟವನ್ನು ಧೈರ್ಯವಾಗಿ ಮೆಟ್ಟಿ ನಿಲ್ಲಲು ಸಾಧ್ಯವಾಯ್ತು.
ಯಾವುದಕ್ಕೂ ಹೆದರದೆ, ಕೆಲ್ಸ ಬಿಡದೆ, ಶ್ರದ್ಧೆಯಿಂದ ಮಾಡಿ ಗ್ರಾಹಕರ ಮನಸ್ಸು ಗೆದ್ರು ಇಶಿಕಾ ತಾಯಿ. ತನ್ನ ಕೆಲ್ಸದ ಮೇಲೆ ಇಶಿಕಾ ತಾಯಿಗೆ ಭರವಸೆ ಇತ್ತು. ನಾನು ಶುದ್ಧವಾದ ಆಹಾರ ಬಡಿಸಬೇಕು ಎನ್ನುವ ದೃಢ ಸಂಕಲ್ಪ ಇತ್ತು. ಮನೆಯಿಂದ ತನ್ನ ಕೈನಲ್ಲಿ ಮಾಡಿದ ವಡಾ ಪಾವನ್ನು ಇಲ್ಲಿ ಬಂದು ನೀಡ್ತಿದ್ದರು ಇಶಿಕಾ ಅಮ್ಮ. ಆರಂಭದಲ್ಲಿ ಅನುಮಾನಿಸಿದ ಜನರು, ಇಶಿಕಾ ಅಮ್ಮನ ವಡಾ ಪಾವ್ ರುಚಿಗೆ ಮಾರು ಹೋಗಿದ್ದರು. ಒಬ್ಬೊಬ್ಬರಾಗಿ ಗ್ರಾಹಕರು ಅವರ ಅಂಗಡಿಗೆ ಬರಲು ಶುರು ಮಾಡಿದ್ರು.
ಗ್ರಾಹಕರ ಜೊತೆ ಮಾತನಾಡಲು ಅವರ ಓದು ಅಡ್ಡಿಯಾಗ್ಲಿಲ್ಲ. ಸರಿಯಾದ ಕಲಿಕೆ ಇಲ್ದೆ ವ್ಯವಹಾರಕ್ಕೆ ಇಳಿದ ಇಶಿಕಾ ಅಮ್ಮ, ಐದು ಭಾಷೆಗಳನ್ನು ಸರಾಗವಾಗಿ ಮಾತನಾಡಬಲ್ಲರು. ಅವರು ಮರಾಠಿ, ಹಿಂದಿ, ಗುಜರಾತಿ, ತೆಲುಗು ಮತ್ತು ಅಲ್ಪ ಸ್ವಲ್ಪ ಇಂಗ್ಲಿಷ್ ಮಾತನಾಡ್ತಾರೆ. ಅಂಗಡಿಗೆ ಬಂದ ಯಾರನ್ನೂ ಹೊರಗಿನವರಂತೆ ಕಾಣಬಾರದು ಎನ್ನುವ ಕಾರಣಕ್ಕೆ ಇಶಿಕಾ ತಾಯಿ, ತಮಗೆ ಸಾಧ್ಯವಾದಷ್ಟು ಭಾಷೆಯನ್ನು ಕಲಿತಿದ್ದಾರೆ.
ಇಶಿಕಾ ಪ್ರಕಾರ ಅವರ ತಾಯಿ ತುಂಬಾ ಚುರುಕು. ಸದಾ ನಗುವ ಅವರು ತಮ್ಮ ಕೆಲ್ಸವನ್ನು ಪ್ರೀತಿಸ್ತಾರೆ. ಅಂಗಡಿಗೆ ಬರುವ ಪ್ರತಿಯೊಬ್ಬರನ್ನು ಅರ್ಥ ಮಾಡಿಕೊಂಡು, ಅವರಿಗೆ ವಡಾ ಪಾವ್ ನೀಡ್ತಾರೆ. ಗ್ರಾಹಕರು, ಅವರನ್ನು ಹಳೆ ಸ್ನೇಹಿತೆಯಂತೆ ನೋಡ್ತಾರೆಯೇ ಹೊರತು ವ್ಯಾಪಾರಸ್ಥೆಯಾಗಿ ಅಲ್ಲ ಅಂತಾರೆ ಇಶಿಕಾ.
ಇಶಿಕಾ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ತಮ್ಮ ಅಮ್ಮಂದಿರನ್ನು ನೆನಪು ಮಾಡ್ಕೊಳ್ತಿದ್ದಾರೆ. ಇಂಥ ಮಹಿಳೆಯರು ಎಲ್ಲರಿಗೂ ಸ್ಪೂರ್ತಿ ಎನ್ನುವ ಕಮೆಂಟ್ ಬಂದಿದೆ. ಕಠಿಣ ಪರಿಶ್ರಮ ಎಂದಿಗೂ ನಿರಾಶೆ ಮಾಡೋದಿಲ್ಲ. ಡಿಗ್ರಿ, ಓದು ಮುಖ್ಯವಲ್ಲ, ವ್ಯಕ್ತಿತ್ವ ಮತ್ತು ದಯೆ ಮುಖ್ಯ ಎಂದು ಜನರು ಇಶಿಕಾ ಅಮ್ಮನ ಕೆಲ್ಸವನ್ನು ಹೊಗಳಿದ್ದಾರೆ.
