ಎಚ್‌ಎಂಟಿ ತನ್ನ ಗಂಡಭೇರುಂಡ ಶೈಲಿಯ ಕನ್ನಡ ಅಂಕಿಗಳ ವಾಚನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ವಾಚ್, ಕ್ಯಾಶುಯಲ್ ಮತ್ತು ಔಪಚಾರಿಕ ಸಂದರ್ಭಗಳಿಗೆ ಸೂಕ್ತವಾಗಿದೆ. ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ.
ಬೆಂಗಳೂರು (ಸೆ.4): ಕನ್ನಡಿಗರ ಹೆಮ್ಮೆ ಎನಿಸಿರುವ ಹಿಂದುಸ್ತಾನ್ ಮಷಿನ್ ಟೂಲ್ಸ್ ಅಂದರೆ ಎಚ್‌ಎಂಟಿ, 1961ರಿಂದ ವಾಚ್ ನಿರ್ಮಾಣದ ಬ್ಯುಸಿನೆಸ್‌ನಲ್ಲಿದೆ. 1980ರ ದಶಕದಲ್ಲಿ ಭಾರತದಲ್ಲಿ ಕೈಗೆ ಕಟ್ಟುವ ಗಡಿಯಾರಗಳ ಅತಿದೊಡ್ಡ ಸಪ್ಲೈಯರ್ ಆಗಿದ್ದ ಎಚ್‌ಎಂಟಿ ವಾಚ್ ಹೊಸ ತಲೆಮಾರಿನ ವಾಚ್‌ಗಳ ನಡುವೆ ತನ್ನ ಪ್ರಭುತ್ವ ಕಳೆದುಕೊಂಡಿತ್ತು. ಜನತಾ ಹಾಗೂ ಪೈಲಟ್ ಅನ್ನೋದು ಎಚ್‌ಎಂಟಿಯ ಜನಪ್ರಿಯ ಬ್ರ್ಯಾಂಡ್‌ಗಳು 2016ರಲ್ಲಿ ಅಧಿಕೃತವಾಗಿ ಈ ಡಿವಿಷಿನ್ ಕ್ಲೋಸ್ ಆದರೂ, ಎಚ್‌ಎಂಟಿಯ ಗಂಡಭೇರುಂಡ ವಾಚ್‌ಗೆ ಈಗಲೂ ಕನ್ನಡಿಗರಿಂದ ಭಾರೀ ಮೆಚ್ಚುಗೆ ಗಳಿಸಿದೆ. ಆದರೆ, ಗಂಡಭೇರುಂಡ ವಾಚ್‌ಗಳನ್ನು ಖರೀದಿ ಮಾಡೋದು ಅಷ್ಟು ಸುಲಭವಲ್ಲ.
ಇದರ ನಡುವೆ ಎಚ್‌ಎಂಟಿ ಲಿಮಿಟೆಡ್ ವೆಬ್‌ಸೈಟ್‌ನಲ್ಲಿ ಗಂಡಭೇರುಂಡ ಸ್ಟೈಲ್‌ನ ಕನ್ನಡ ಅಂಕಿಯನ್ನು ಹೊಂದಿರುವ ವಾಚ್ ಮಾರಾಟಕ್ಕೆ ಬಂದಿದೆ. ಬಿಳಿ ಬಣ್ಣದ ವಾಚ್‌ಗೆ 2025 ರೂಪಾಯಿ ನಿಗದಿ ಮಾಡಲಾಗಿದ್ದು, ಸೋಲ್ಡ್ ಔಟ್ ಆಗುವ ಮುನ್ನ ಖರೀದಿಸಬಹುದು. 3 ರಿಂದ 5 ದಿನಗಳಲ್ಲಿ ಡೆಲಿವರಿಯಾಗಲಿದ್ದು, ಡೆಲಿವರಿ ಚಾರ್ಜ್ ರೂಪದಲ್ಲಿ 80 ರೂಪಾಯಿ ಪಾವತಿ ಮಾಡಬೇಕಿದೆ. ಈ ಗಡಿಯಾರವು ಕ್ಯಾಶುಯಲ್ ಉಡುಗೆ ಮತ್ತು ಔಪಚಾರಿಕ ಸಂದರ್ಭಗಳಲ್ಲಿ ಎರಡಕ್ಕೂ ಸೂಕ್ತವಾಗಿದೆ
ಈ ಉತ್ಪನ್ನವು 1 ವರ್ಷದ ಪ್ರಮಾಣಿತ ಬ್ರಾಂಡ್ ಖಾತರಿಯೊಂದಿಗೆ ಬರುತ್ತದೆ. 1 ವರ್ಷ ಮೂವ್‌ಮೆಂಟ್, ಬ್ಯಾಟರಿ ಹಾಗೂ ಪ್ಲಾಟಿಂಗ್‌ಗೆ ವಾರಂಟಿ ಇರುತ್ತದೆ. ಸಾಮಾನ್ಯ ಸವೆತ ಮತ್ತು ಹರಿದುಹೋಗುವಿಕೆ, ನಿರ್ಲಕ್ಷ್ಯದಿಂದ ಉಂಟಾಗುವ ಆಕಸ್ಮಿಕ ಹಾನಿ, ಅನಧಿಕೃತ ಸರ್ವೀಸ್ ಮಾಡಿಸಿದಲ್ಲಿ ವಾರಂಟಿ ಇರೋದಿಲ್ಲ ಎಂದು ಕಂಪನಿ ತಿಳಿಸಿದೆ.
ಎಚ್‌ಎಂಟಿ ಲಿಮಿಟೆಡ್ ಅಧಿಕೃತ ವೆಬ್‌ಸೈಟ್: ಗಂಡಭೇರುಂಡ ವಾಚ್
