38ನೇ ವಯಸ್ಸಿಗೆ ನಿವೃತ್ತಿ, ಈಗ 300 ಕೋಟಿ ರೂ ಒಡೆಯನಾದ ಇನ್ಫೋಸಿಸ್ ಮಾಜಿ ಉದ್ಯೋಗಿ ಬೆಂಗಳೂರಲ್ಲಿ ಸರಳ ಜೀವನ ನಡೆಸುತ್ತಿದ್ದಾರೆ. ಇನ್ಫೋಸಿಸ್ 90ರ ದಶಕದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಉದ್ಯೋಗಿ ಸಿಂಪಲ್ ಲೈಫ್ ಬೆಳಕಿಗೆ ಬಂದಿದೆ.
ಬೆಂಗಳೂರು (ಅ.22) ಕೆಲಸ ಗಿಟ್ಟಿಸಿಕೊಂಡ 10 ರಿಂದ 15 ವರ್ಷದಲ್ಲಿ ಬಹುತೇಕರು ಉಳಿತಾಯ ಮಾಡಿದ್ದು ಅಷ್ಟಕಷ್ಟೆ. ವಯಸ್ಸು 35 ದಾಟುತ್ತಿದ್ದಂತೆ ಸ್ಯಾಲರಿ ಸಾಕಾಗುತ್ತಿಲ್ಲ, ಹೀಗೇ ಇದ್ದರೆ ಸೆಟ್ಲ್ ಆಗಲು ಇನ್ನು ಹಲವು ವರ್ಷ ಬೇಕು, ಕೆಲಸ ಹೆಚ್ಚು, ಕಿರಿಕಿರಿ ಹೆಚ್ಚು ಸೇರಿದಂತೆ ಹಲವು ಕಾರಣಗಳಿಂದ ಬೇರೆ ಕೆಲಸ ಹುಡುಕುವವರ ಸಂಖ್ಯೆ ಹೆಚ್ಚು. ಆದರೆ ಇನ್ಫೋಸಿಸ್ ಉದ್ಯೋಗಿ ತಮ್ಮ 38ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿ ವಿಶ್ರಾಂತಿ ಜೀವನಕ್ಕೆ ಜಾರಿದ್ದಾರೆ. ಇವರ ಒಟ್ಟು ಆಸ್ತಿ ಸರಿಸುಮಾರು 300 ಕೋಟಿ ರೂಪಾಯಿ. 90ರ ದಶಕದ ಇನ್ಫೋಸಿಸ್ ಉದ್ಯೋಗಿಗಳ ವಿಡಿಯೋ ಒಂದು ಭಾರಿ ವೈರಲ್ ಆಗುತ್ತಿದ್ದಂತೆ ಇದೀಗ ಇನ್ಪೋಸಿಸ್ ಮಾಜಿ ಶ್ರೀಮಂತ ಉದ್ಯೋಗಿಯ ಸಿಂಪಲ್ ಲೈಫ್ ಬೆಳಕಿಗೆ ಬಂದಿದೆ.
90ರ ದಶಕಕದ ಇನ್ಫೋಸಿಸ್ ವಿಡಿಯೋದಿಂದ ಮಾಜಿ ಉದ್ಯೋಗಿಯ ಲೈಫ್ ಬಹಿರಂಗ
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ 90ರ ದಶಕದಲ್ಲಿ ಇನ್ಫೋಸಿಸ್ ಕ್ಯಾಂಟಿನ್‌ನಲ್ಲಿನ ವಿಡಿಯೋ ಒಂದು ಬಾರಿ ವೈರಲ್ ಆಗಿತ್ತು. ಅಂದು ಉದ್ಯೋಗಿಗಳು ಹರಟೆ, ಟೆಕ್ ಕಂಪನಿ, ಅಂದಿನ ಸ್ಥಿತಿಗತಿ ಸೇರಿದಂತೆ ಹಲವು ವಿಚಾರಗಳು ಈ ವಿಡಿಯೋ ಮೂಲಕ ಭಾರಿ ಚರ್ಚೆಯಾಗಿತ್ತು. ಇದೇ ವೇಳೆ ಹಲವರು ತಾವು 90ರ ದಶಕದ ಉದ್ಯೋಗಿ ಎಂದು ಹಳೇ ನೆನಪುುಗಳನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಉದ್ಯೋಗದಲ್ಲಿದ್ದ ಇನ್ಫೋಸಿಸ್ ಉದ್ಯೋಗಿಯ ಪಯಣವನ್ನು ಆವರ ಆಪ್ತರು ಬಹಿರಂಗಪಡಿಸಿದ್ದಾರೆ.
ಎಕ್ಸ್ ಮೂಲಕ ಇನ್ಫೋಸಿಸ್ ಮಾಜಿ ಉದ್ಯೋಗಿಯ ರೋಚಕ ಪಯಣ ಅನಾವರಣ
ಎಕ್ಸ್ ಬಳಕೆದಾರರೊಬ್ಬರು ಇನ್ಪೋಸಿಸ್ ಆರಂಭಿಕ ಉದ್ಯೋಗಿಯಾಗಿದ್ದ ಅವರ ಆಪ್ತರ ಕತೆಯನ್ನು ಹೇಳಿಕೊಂಡಿದ್ದಾರೆ. ನನಗೆ ಗೊತ್ತಿರುವ ಒಬ್ಬರು, ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿದ್ದರು. ಈಗ ನಿವತ್ತಿ ಜೀವನ ನಡೆಸುತ್ತಿದ್ದಾರೆ. ಇನ್ಪೋಸಿಸ್‌ನ ಆರಂಭಿಕ 5 ಸಾವಿರ ಉದ್ಯೋಗಿಗಳ ಪೈಕಿ ಅವರು ಒಬ್ಬರು. 2006ರಲ್ಲಿ ಅವರು ಇನ್ಪೋಸಿಸ್‌ನಿಂದ ನಿವೃತ್ತಿಯಾಗಿದ್ದಾರೆ. ಆಗ ಅವರ ವಯಸ್ಸು ಕೇವಲ 38, ಇಷ್ಟೇ ಅಲ್ಲ ನಿವೃತ್ತಿಯಾಗುವಾಗ ಅವರ ಬಳಿ 100 ಕೋಟಿ ರೂಪಾಯಿ ಆಸ್ತಿ ಇತ್ತು. ನಿವೃತ್ತಿ ಬಳಿಕ ಅವರು ಎಲ್ಲೂ ಕೆಲಸ ಮಾಡಲಿಲ್ಲ. ಸಂಪೂರ್ಣ ವಿಶ್ರಾಂತಿ ಜೀವನದಲ್ಲಿದ್ದಾರೆ. ಅವರ ಬಳಿಕ ಫ್ಯಾನ್ಸಿ, ಐಷಾರಾಮಿ ಕಾರುಗಳಿಲ್ಲ. ಅವರಲ್ಲೊಂದು ಉತ್ತಮ ಮನೆಯಿದೆ (ಫ್ಲ್ಯಾಟ್). ಆದರೆ ಅವರನ್ನು ಭೇಟಿಯಾದಾಗ ಅವರು ಒಟ್ಟು 200 ರಿಂದ 300 ಕೋಟಿ ರೂಪಾಯಿ ಒಡೆಯ ಎಂದು ಗೊತ್ತಾಗುವುದಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸಿಂಪಲ್ ಲೈಫ್
ಇನ್ಫೋಸಿಸ್ ಉದ್ಯೋಗದಿಂದ ನಿವೃತ್ತಿ ಪಡೆದ ಮೇಲೂ ಬೆಂಗಳೂರಿನಲ್ಲೇ ನೆಲೆಸಿರುವ ಈ ಮಾಜಿ ಉದ್ಯೋಗಿ, ಈಗಲೂ ಸಿಂಪಲ್ ಲೈಫ್ ಲೀಡ್ ಮಾಡುತ್ತಿದ್ದಾರೆ. ಇವರ ಶ್ರೀಮಂತನಾಗಿದ್ದರೂ ಸರಳ ಹಾಗೂ ಎಲ್ಲರ ಜೊತೆ ಬೆರೆತು ಜೀವನ ಸಾಗಿಸುತ್ತಿದ್ದಾರೆ.ಬೆಂಗಳೂರಿನಲ್ಲಿ ಸಿಂಪಲ್ ಲೈಫ್ ಮುನ್ನಡೆಸುತ್ತಿರುವ ಈ ಉದ್ಯೋಗಿಯ ಇತರ ಯಾವುದೇ ಮಾಹಿತಿಯನ್ನು ಆಪ್ತರು ಬಹಿರಂಗಪಡಿಸಿಲ್ಲ.
ಇದು ಅಸಾಧ್ಯ ಎಂದು ನೆಟ್ಟಿಗರು
ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. 2006ರಲ್ಲಿ 100 ಕೋಟಿಯೊಂದಿಗೆ ನಿವೃತ್ತಿ ಎಂದರೆ ಅಸಾಧ್ಯವಾಗಿ ಕಾಣುತ್ತಿದೆ. ಇಲ್ಲವಾದಲ್ಲಿ ಕೋಟಿ ಸಂಖ್ಯೆ ಹೆಚ್ಚು ಮಾಡಿದಂತೆ ಕಾಣುತ್ತಿದೆ ಎಂದು ಕೆಲ ಇನ್ಫೋಸಿಸ್ ಮಾಜಿ ಉದ್ಯೋಗಿಗಳು ಪ್ರತಿಕ್ರಿಯಿಸಿದ್ದಾರೆ. 2006ರಲ್ಲಿ 100 ಕೋಟಿ ಇರಬೇಕು ಎಂದರೆ ಈ ವ್ಯಕ್ತಿ ಇನ್ಫೋಸಿಸ್ ಸಂಸ್ಥಾಪಕರ ಸಾಲಿನಲ್ಲಿರುವವರು ಆಗಿರಬೇಕು. ಕಾರಣ 1990ರಿಂದ 2006ರ ವರೆಗೆ ಉದ್ಯೋಗ ಮಾಡಿದ್ದರೆ, ಸರಿಸುಮಾರು 53 ಲಕ್ಷ ಇನ್ಪೋಸಿಸ್ ಷೇರು ಇದ್ದರೆ ಮಾತ್ರ 100 ಕೋಟಿ ರೂಪಾಯಿ ಆಗಲು ಸಾಧ್ಯ. ಹೀಗಾಗಿ ನಿಮ್ಮ ಅಂಕಿ ಸಂಖ್ಯೆ ಅತೀರೇಖದಂತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
