Bengaluru News: ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಟೋಲ್‌ಗೇಟ್ ಬಳಿ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ಸ್ ಸಿಟಿ (Bengaluru Electronics City Toll Gate) ಟೋಲ್‌ಗೇಟ್ ಬಳಿ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಅತಿವೇಗದ ಚಾಲನೆ ಅತ್ಯಧಿಕವಾಗಿ ಕಂಡು ಬರುತ್ತದೆ. ರಾತ್ರಿ ಅತಿವೇಗದ ಚಾಲನೆಯಿಂದ ಹಲವರು ಪ್ರಾಣವನ್ನು ಸಹ ಕಳೆದುಕೊಂಡಿರುವ ಉದಾಹರಣೆಗಳಿವೆ. ಇದೀಗ ಟೋಲ್‌ಗೇಟ್ ಬಳಿ ಚಾಲಕನೋರ್ವ ವಾಹನ ನಿಲ್ಲಿಸದೇ ಹೋಗಿದ್ದಾನೆ. ಟೋಲ್ ಸಿಬ್ಬಂದಿ ವಾಹನ ತಡೆಯಲು ಮುಂದಾದ್ರೂ ನಿಲ್ಲಿಸದೇ ಹೋಗಿದ್ದಾನೆ. ಟಾಟಾ ಏಸ್ ಚಾಲಕನ ಡೆಡ್ಲಿ ರೈಡ್ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಿಬ್ಬಂದಿ ಡೋರ್ ಹಿಡಿದಿದ್ದರೂ ಚಾಲಕ ವಾಹನ ನಿಲ್ಲಿಸಲ್ಲ
ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೆ ಹೊಸೂರು ಮಾರ್ಗವಾಗಿ ಟಾಟಾ ಏಸ್ ವಾಹನ ಬಂದಿದೆ. ಸಿಬ್ಬಂದಿ ಟೋಲ್ ಗೇಟ್ ಕ್ಲೋಸ್ ಮಾಡಿ ಶುಲ್ಕ ಪಾವತಿಸುವಂತೆ ಸೂಚಿಸಿದ್ದಾರೆ. ಆದ್ರೆ ಟಾಟಾ ಏಸ್ ಚಾಲಕ ಮಾತ್ರ ವಾಹನ ನಿಲ್ಲಿಸಲ್ಲ. ಈ ವೇಳೆ ಟೋಲ್ ಸಿಬ್ಬಂದಿಯೊಬ್ಬರು ವಾಹನ ತಡೆಯಲು ಮುಂದಾಗಿದ್ದಾರೆ. ಸಿಬ್ಬಂದಿ ಡೋರ್ ಹಿಡಿದಿದ್ದರೂ ಚಾಲಕ ವಾಹನ ನಿಲ್ಲಿಸಲ್ಲ. ಸುಮಾರು 100 ಮೀಟರ್ ದೂರದ ನಂತರ ಟೋಲ್ ಸಿಬ್ಬಂದಿ ಕೆಳಗೆ ಬಿದ್ದು ಉರುಳಿದ್ದಾರೆ. ಟಾಟಾ ಏಸ್ ಚಾಲಕನ ಅಪಾಯಕಾರಿ ಚಾಲನೆ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಸಾರ್ವಜನಿಕ ವಲಯದಲ್ಲಿ ಆಕ್ರೋಶ
ಟೋಲ್ ಸಿಬ್ಬಂದಿ ನೇತಾಡಿದರೂ ವಾಹನ ನಿಲ್ಲಿಸದ ಚಾಲಕನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಾಲಕ ಯಾರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವೈರಲ್ ಅಗಿರುವ ದೃಶ್ಯದಲ್ಲಿ ವಾಹನದ ಸಂಖ್ಯೆ ಸಹ ಸ್ಪಷ್ಟವಾಗಿ ಕಾಣಿಸಿಲ್ಲ.
