ಬೆಂಗಳೂರಿನ ಲಾಲ್ ಬಾಗ್ ಕೆರೆಯಲ್ಲಿ ಪತ್ತೆಯಾದ ಅಪರಿಚಿತ ಮಹಿಳೆಯ ಶವದ ಗುರುತು ಪತ್ತೆಯಾಗಿದೆ. ನೇಪಾಳದ ಮೂಲದ ಸರ್ಜಾಪುರ ನಿವಾಸಿ ಜೇನಿ ಶಾ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು (ಆ.24) ನಗರದ ಸಸ್ಯತೋಟ ಲಾಲ್ ಬಾಗ್‌ನಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ ಪ್ರಕರಣ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಮಹಿಳೆ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿತ್ತು. ಇದೀಗ ಲಾಲ್ ಬಾಗ್‌ನಲ್ಲಿ ಪತ್ತೆಯಾದ ಅಪರಿಚಿತ ಮಹಿಳೆ ಶವದ ಗುರುತು ಪತ್ತೆಯಾಗಿದೆ. ಬೆಂಗಳೂರಿನ ಸರ್ಜಾಪುರ ನಿವಾಸಿ ಜೇನಿ ಶಾ ಎಂದು ಗುರುತು ಪತ್ತೆ ಮಾಡಲಾಗಿದೆ. ನೇಪಾಳ ಮೂಲದ ಜೇನಿಶಾ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ವರದಿಯಾಗಿದೆ. ಇನ್ನು ಘಟನೆ ಹಿಂದಿನ ಕಾರಣಗಳನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.

ನಾಲ್ಕು ದಿನದ ಹಿಂದಷ್ಟೇ ಗಂಡು ಮಗುವಿನ ಜನ್ಮ ನೀಡಿದ ಮಹಿಳೆ

ನಾಲ್ಕು ದಿನದ ಹಿಂದೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಜೇನಿ ಶಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವಿನ ಆರೋಗ್ಯ ಸರಿಯಿಲ್ಲದ ಕಾರಣ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣದಿಂದ ಬದುಕು ಅಂತ್ಯಗೊಳಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕರಣ ಆತ್ಮ*ತ್ಯೆ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆ ನಾಪತ್ತೆ ಕುರಿತು ಪೊಲೀಸರಿಗೆ ದೂರು ನೀಡಿದ್ದ ಪತಿ

ವಾಣಿವಿಲಾಸ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದ ಜೇನಿ ಶಾ ಮಗುವಿನ ಆರೋಗ್ಯದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದರ ನಡುವೆ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ಪತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ವೇಳೆ ಅಪರಿಚಿತ ಮಹಿಳೆ ಮೃತದೇಹವನ್ನು ವ್ಯಕ್ತಿಗೆ ತೋರಿಸಿದ್ದಾರೆ. ಜೇನಿ ಶಾ ಗುರುತು ಪತ್ತೆ ಮಾಡಿದ ಪತಿ ಘಟನೆ ಬಿಚ್ಚಿಟ್ಟಿದ್ದಾರೆ.

ನಿನ್ನೆ (ಆ.23) ಬೆಳಗಿನ ಜಾವ ಲಾಲ್ ಬಾಗ್ ಕೆರೆಗೆ ಹಾರಿರುವ ಸಾಧ್ಯತೆ ಇದೆ. ಲಾಲ್ ಬಾಗ್ ಸೆಕ್ಯೂರಿಟಿ ಗಾರ್ಡ್ ಮಹಿಳೆ ಮೃತದೇಹ ಪತ್ತೆಯಾದ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ನೇಪಾಳ ಮೂಲದ ಜೇನಿ ಶಾ ಇಲ್ಲೇ ಮದುವೆಯಾಗಿದ್ದರು. ಆದರೆ ಇದೀಗ ದುರಂತ ಅಂತ್ಯಕಂಡಿದ್ದಾಳೆ.