ತಿಂಗಳ ಸ್ಯಾಲರಿ ₹1.9 ಲಕ್ಷ ಇದ್ರೂ ಬೆಂಗಳೂರಲ್ಲಿ ಮನೆ ಖರೀದಿಸಲು ಆಗುತ್ತಿಲ್ಲ, ನೋವು ತೋಡಿಕೊಂಡ ಟೆಕ್ಕಿ, ಇದೀಗ ಬೆಂಗಳೂರಲ್ಲಿ ಮನೆ ಖರೀದಿಗೆ ಎಷ್ಟು ಸ್ಯಾಲರಿ ಇರಬೇಕು ಅನ್ನೋ ಚರ್ಚೆ ಶುರುವಾಗಿದೆ.
ಬೆಂಗಳೂರು (ಅ.19) ಬೆಂಗಳೂರಲ್ಲಿ ಮನೆ ಖರೀದಿ ಅಸಾಧ್ಯವಾಗುತ್ತಿದೆಯಾ? ತಿಂಗಳ ವೇತನ ಲಕ್ಷ ಲಕ್ಷ ರೂಪಾಯಿ ಇದ್ದರೂ, ಎಲ್ಲಾ ಖರ್ಚು ಮುಗಿದು ಲಕ್ಷ ರೂಪಾಯಿ ಉಳಿತಾಯವಾಗುತ್ತಿದ್ದರೂ ಬೆಂಗಳೂರಲ್ಲಿ ಮನೆ ಖರೀದಿ ಕೈಗೆಟುಕದ ವಸ್ತುವಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಲೇ ಇದೀಗ ಈ ಮಾತಿಗೆ ಪುಷ್ಠಿ ನೀಡುವಂತೆ ಬೆಂಗಳೂರಿನ ಟೆಕ್ಕಿ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಿಂಗಳಿಗೆ 1.9 ಲಕ್ಷ ರೂಪಾಯಿ ವೇತನ ಪಡೆಯುತ್ತಿರುವ ಟೆಕ್ಕಿ, ನನಗೆ ಬೆಂಗಳೂರು ಮನೆ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಟೆಕ್ಕಿ ಪೋಸ್ಟ್ ಬೆನ್ನಲ್ಲೇ ಬೆಂಗಳೂರಲ್ಲಿ ಮನೆ ಖರೀದಿಗೆ ಎಷ್ಟು ವೇತನ ಇರಬೇಕು, ಬ್ಯಾಂಕ್‌ನಲ್ಲಿ ಎಷ್ಟು ದುಡ್ಡಿರಬೇಕು ಅನ್ನೋ ಚರರ್ಚೆಗಳು ಶುರುವಾಗಿದೆ.
ಮನೆ ಖರೀದಿ ಸಾಧ್ಯವಾಗುತ್ತಿಲ್ಲ
ಬೆಂಗಳೂರು ಟೆಕ್ಕಿ ರೆಡ್ಡಿಟ್ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ. ನಾನು 27 ವರ್ಷದ ಯುವಕ, ಮದುವೆಯಾಗಿಲ್ಲ. ಆದರೆ ಬೆಂಗಳೂರಲ್ಲಿ ಮನೆ ಖರೀದಿ ಮಾತ್ರ ನನಗೆ ಅಸಾಧ್ಯವೆನಿಸುತ್ತಿದೆ. 3 ಬಿಹೆಚ್‌ಕೆ ಮನೆ ಬೆಂಗಳೂರಲ್ಲಿ 1.8 ಕೋಟಿ ರೂಪಾಯಿಯಿಂದ 2.2 ಕೋಟಿ ರೂಪಾಯಿವರೆಗಿದೆ. ಆದರೆ ಇಷ್ಟು ಮೊತ್ತದ ಮನೆ ನಾನು ಹೇಗೆ ಖರೀದಿಸಲಿ ಅನ್ನೋದೇ ಚಿಂತೆಯಾಗಿದೆ.ನನ್ನ ತಿಂಗಳ 1.9 ಲಕ್ಷ ರೂಪಾಯಿ ಸ್ಯಾಲರಿಯಲ್ಲಿ ತಿಂಗಳ ಖರ್ಚು ವೆಚ್ಚ 30 ರಿಂದ 40 ಸಾವಿರ ರೂಪಾಯಿ ಹೋಗುತ್ತಿದೆ. ಪ್ರತಿ ತಿಂಗಳು ನಾನು 1.5 ಲಕ್ಷ ರೂಪಾಯಿ ಉಳಿತಾಯ ಮಾಡುತ್ತಿದ್ದೇನೆ. ಇದರ ನಡುವೆ ಪೋಷಕರ ಆರೋಗ್ಯ, ವಿಮೆ, ಮದುವೆ ಪ್ರಸ್ತಾಪಗಳು ಸೇರಿದಂತೆ ಹೊಸ ಹೊಸ ಜವಾಬ್ದಾರಿಗಳು ಸವಾಲುಗಳು ಬರುತ್ತಿದೆ. ನಾನು 1.5 ಲಕ್ಷ ರೂಪಾಯಿ ಪ್ರತಿ ತಿಂಗಳು ಉಳಿತಾಯ ಮಾಡಿದರೂ ಬೆಂಗಳೂರಲ್ಲಿ 3 ಬೆಡ್ ರೂಂ ಮನೆ ಖರೀದಿಸಲು 12 ವರ್ಷ ಬೇಕಾಗಲಿದೆ. ಅಂದರೆ ನನ್ನ ವೇತನ ಹೀಗೆ ಉತ್ತಮವಾಗಿದ್ದರೆ ಮಾತ್ರ, ಹೀಗೆ ಉಳಿತಾಯ ಮಾಡಿದರೆ ಮಾತ್ರ. ಆದರೆ ಪ್ರತಿ ವರ್ಷ ಕಳೆದಂತೆ ಬೆಲೆ ಹೆಚ್ಚಾಗಿರುತ್ತದೆ. ಸವಾಲುಗಳು, ಸಂಕಷ್ಟಗಳು ಹೆಚ್ಚಾಗುತ್ತದೆ. ಹೀಗಾಗಿ ನಾನು ಹೇಗೆ ಈ ನಗರದಲ್ಲಿ ಮನೆ ಖರೀದಿಸಲಿ? ಮನೆ ಖರೀದಿಸಿದರೆ ನನ್ನ ಇಡೀ ಜೀವನದ ವೇತನದಲ್ಲಿ ಮನೆ ಸಾಲ ಕಟ್ಟುತ್ತಾ ಇರಬೇಕು, ಒಂದು ಮನೆಗಾಗಿ ನಾನು ಜೀವನವನ್ನೇ ಸವೆಸಬೇಕು ಎಂದು ಟೆಕ್ಕಿ ರೆಡ್ಡಿಟ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾನೆ.
ಬೆಂಗಳೂರು ಟೆಕ್ಕಿಗೆ ಹಲವರ ಸಲಹೆ
ಮನೆ ಖರೀದಿ ಕುರಿತು ಪೋಸ್ಟ್ ಮಾಡಿದ ಟೆಕ್ಕಿಗೆ ಹಲವರು ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮನೆ ಖರೀದಿ ಉತ್ತಮ ನಿರ್ಧಾವಲ್ಲ. ಇದು ಹೂಡಿಕೆ ಮಾಡಲು ಉತ್ತಮ ಸಮಯ. ಮದುವೆ ಬಳಿಕ ಜೀವನದ ಸವಾಲು, ಸಂಗಾತಿಯ ಅವಶ್ಯಕತೆ, ಅವರಿಗಾಗಿ ಬೇರೆ ನಗರಕ್ಕೆ ತೆರಳಿದರೂ ಅಚ್ಚರಿಯಿಲ್ಲ. ಹೀಗಾಗಿ ಈಗ ಸರಿಯಾದ ಕಡೆ ಹೂಡಿಕೆ ಮಾಡಿದರೆ ಉತ್ತಮ ಆದಾಯಗಳಿಸಬಹುದು. ಬಳಿಕ ಮನೆ ಕುರಿತು ಚಿಂತಿಸಬಹುದು ಎಂದು ಹಲವರು ಸಲಹೆ ನೀಡಿದ್ದಾರೆ.
ಮನೆ ಖರೀದಿಗೆ ಆತುರ ಬೇಡ. ಆದಾಯದ ಮೂಲ ಹೆಚ್ಚಾಗಬೇಕು. ಇದಕ್ಕಾಗಿ ವೇತನವನ್ನು ಸರಿಯಾಗಿ ಹೂಡಿಕೆ, ರಿಟರ್ನ್ಸ್ ಬರುವ ಕಡೆ ಹಾಕಬೇಕು. ಹೀಗಾಗಿ ಒಂದಿಷ್ಟು ವರ್ಷಗಳಲ್ಲಿ ಜೀವನ ಹೇಗಿರಬೇಕು ಅನ್ನೋದು ನಿರ್ಧರಿಸಬಹುದು. ಮನೆ ಖರೀದಿ ಎಲ್ಲರ ಕನಸು. ಆದರೆ ಖರೀದಿಸಿಲ್ಲ ಎಂದರೆ ತಪ್ಪೇನಿಲ್ಲ. ಹೀಗಾಗಿ ಪ್ರತಿ ಹೆಜ್ಜೆ ಎಚ್ಚರಿಕೆಯಿಂದ ಇಟ್ಟರೆ ಭವಿಷ್ಯದಲ್ಲಿ ಉದ್ಯೋದ ಭದ್ರತೆ ಇಲ್ಲದಿದ್ದರೂ ಜೀವನ ಸುಗಮವಾಗಿ ಸಾಗಲಿದೆ ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ನಿಮ್ಮ ವೇತನ 5 ಲಕ್ಷ ರೂಪಾಯಿ ಇದ್ದರೂ ಬೆಂಗಳೂರಲ್ಲಿ ಮನೆ ಖರೀದಿ ಸುಲಭವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
