ಜಯನಗರದ ಉದ್ಯಮಿಯ ಮನೆಯಲ್ಲಿ 2.5 ಕೆಜಿ ಚಿನ್ನ ಕಳವು ಪ್ರಕರಣದಲ್ಲಿ ಮ್ಯಾನೇಜರ್ ಬಂಧಿತ. ಸ್ಪೈ ಕ್ಯಾಮರಾ ಅಳವಡಿಸಿ ಮಾಲೀಕರು ಕಳ್ಳನನ್ನು ಪತ್ತೆ ಹಚ್ಚಿದ್ದಾರೆ.
ಬೆಂಗಳೂರು (ಆ.12): ಜಯನಗರದ ಟೈಲ್ಸ್ ಉದ್ಯಮಿ ಮನೆಯಲ್ಲಿ ಎರಡೂವರೆ ಕೆಜಿ ಚಿನ್ನ ಕಳವು ಮಾಡಿದ ಆರೋಪದ ಮೇಲೆ ಅವರೇ ನೇಮಿಸಿದ್ದ ಮ್ಯಾನೇಜರ್ ಕಾರ್ತಿಕ್ ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಸ್ಪೈ ಕ್ಯಾಮರಾ ಇಟ್ಟು ಮಾಲೀಕರು ತನ್ನ ಕಳ್ಳ ಮ್ಯಾನೇಜರ್‌ನನ್ನು ಕಂಡುಹಿಡಿದಿದ್ದಾರೆ. ಕಳೆದ 10 ವರ್ಷಗಳಿಂದ ಉದ್ಯಮಿ ಅಗರವಾಲ್ ಅವರ ಮನೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್, ಮಾಲೀಕರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಚಿನ್ನ ಕದ್ದಿದ್ದಾನೆ. ಚಿನ್ನದ ಬಿಸ್ಕೆಟ್‌ಗಳನ್ನು ಲಾಕರ್‌ಗಳಲ್ಲಿ ಇಡುವ ಹವ್ಯಾಸ ಅಗರವಾಲ್ ಅವರಿಗಿತ್ತು. ಇದನ್ನು ತಿಳಿದಿದ್ದ ಕಾರ್ತಿಕ್, ಲಾಕರ್ ಬೀಗವನ್ನು ಕದ್ದು ನಕಲಿ ಕೀ ಮಾಡಿಸಿಕೊಂಡಿದ್ದ.
ಲಾಕರ್‌ಗಳು ಆಗಾಗ ತೆರೆದಿರುವುದನ್ನು ಗಮನಿಸಿದ ಮಾಲೀಕರಿಗೆ ಅನುಮಾನ ಬಂದಿದೆ. ಆದರೆ, ಕಾರ್ತಿಕ್ ಮನೆಯಲ್ಲೇ ಇರುವ ಯಾರೋ ಕಳ್ಳರು ಕೈಚಳಕ ತೋರಿಸಿದ್ದಾರೆ ಎಂದು ಹೇಳಿ ಮಾಲೀಕರನ್ನು ದಿಕ್ಕು ತಪ್ಪಿಸುತ್ತಿದ್ದ. ಇದರಿಂದ, ಅಗರವಾಲ್ ಅವರು ಲಾಕರ್ ಬಳಿ ಸೀಕ್ರೆಟ್ ಕ್ಯಾಮೆರಾ ಅಳವಡಿಸಿದ್ದರು. ಈ ಕ್ಯಾಮೆರಾದಲ್ಲಿ ಕಾರ್ತಿಕ್ ಚಿನ್ನದ ಬಿಸ್ಕೆಟ್ ಕದಿಯುತ್ತಿರುವುದು ಗೊತ್ತಾಗಿದ್ದು ಮಾತ್ರವಲ್ಲದೆ, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕದ್ದ ಚಿನ್ನದ ಬಿಸ್ಕೆಟ್‌ಗಳನ್ನು ಮಾರಾಟ ಮಾಡಿ ಗೋವಾಕ್ಕೆ ಹೋಗಿ ಕ್ಯಾಸಿನೋದಲ್ಲಿ ಹಣ ಪೋಲು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಸ್ತುತ, ಪೊಲೀಸರು ಆರೋಪಿಯಿಂದ ಸುಮಾರು ಒಂದೂವರೆ ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
