
ಅಮೆರಿಕಾದಲ್ಲಿ ಟ್ರಂಪ್ ಆತ್ಮೀಯ ಮಿತ್ರ ಬಲಪಂಥೀಯ ನಾಯಕ ಚಾರ್ಲಿ ಕಿರ್ಕ್ ಹತ್ಯೆ ಅಲ್ಲಿನ ಸ್ಥಳೀಯರನ್ನು ದೇಶಪ್ರೇಮಿಗಳನ್ನು ದಿಗ್ಬ್ರಾಂತಿಗೆ ತಳ್ಳಿದೆ. ಅನೇಕರು ಈ ದುರಂತದಿಂದ ಇನ್ನು ಹೊರಬಂದಿಲ್ಲ, ದೇಶದ ಜನರು ದೇಶದ ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ ದೇಶಪ್ರೇಮ ಹೊಂದಿದ್ದ ಈ ಚಾರ್ಲಿ ಕಿರ್ಕ್, ವಲಸಿಗರಿಗಿಂತ ಸ್ಥಳೀಯರಿಗೆ ದೇಶದಲ್ಲಿ ಉದ್ಯೋಗವಕಾಶಗಳು ಹೆಚ್ಚಾಗಬೇಕು ಎಂದು ಹೇಳಿದ್ದರು. ಜೊತೆಗೆ ಟ್ರಂಪ್ ಅವರ ನೀತಿಗಳನ್ನು ಬಲವಾಗಿ ಸಮರ್ಥಿಸಿಕೊಂಡು ಬಂದಿದ್ದ. ಇಂತಹ ನಾಯಕ ಅಮೆರಿಕಾದ ಉತಾಹ್‌ನ ವಿಶ್ವ ವಿದ್ಯಾನಿಲಯದಲ್ಲಿ ಆತ ಭಾಷಣ ಮಾಡುತ್ತಿದ್ದಾಗಲೇ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದ. ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಸಂಬಂಧಗಳ ಬಗ್ಗೆ ತನ್ನದೇ ಆದ ವಿಚಾರಧಾರೆಯನ್ನು ಹೊಂದಿದ್ದ 31 ವರ್ಷದ ಚಾರ್ಲಿ ಕಿರ್ಕ್ ಪಾಕಿಸ್ತಾನದ ವಿರುದ್ಧ ಭಾರತದ ಆಪರೇಷನ್ ಸಿಂದೂರ್ ಬಗ್ಗೆ ಏನು ಹೇಳಿದ್ದ ಎಂಬುದು ಗೊತ್ತಾ?
ಆಪರೇಷನ್ ಸಿಂದೂರ್ ಭಾರತ ಪಾಕಿಸ್ತಾನ ಸಂಬಂಧದ ಬಗ್ಗೆ ಚಾರ್ಲಿ ಕಿರ್ಕ್ ಅಭಿಪ್ರಾಯ ಏನಿತ್ತು?
ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ಕೃತ್ಯದ ನಂತರ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆಯೂ ತಮ್ಮ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದರು. ಭಾರತದಲ್ಲಿ ಏನು ನಡೆಯುತ್ತಿದೆ ಎರಡು ದೇಶಗಳು ಯುದ್ಧದ ಅಂಚಿನಲ್ಲಿವೆ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಕರೆದ ಅವರು ಪಾಕಿಸ್ಥಾನವನ್ನು ಕುತಂತ್ರಿ ಎಂದು ಕರೆದಿದ್ದರು. ಅಲ್ಲದೇ ಭಾರತವನ್ನು ಅವರು, ಪಾಕಿಸ್ತಾನದ ಈ ವರ್ತನೆಯಿಂದ ಕೋಪ ಗೊಂಡಿರುವ ಹಿಂದೂ ಬಹುಸಂಖ್ಯಾತ ದೇಶ ಎಂದು ಕರೆದಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ಪ್ರತೀಕಾರದ ದಾಳಿಗಳಾದ ಆಪರೇಷನ್ ಸಿಂಧೂರ್ ನಂತರದ ಉದ್ವಿಗ್ನತೆಯನ್ನು ಉಲ್ಲೇಖಿಸಿ ಚಾರ್ಲಿ ಕಿರ್ಕ್ ಭಾರತದಲ್ಲಿ ಏನು ನಡೆಯುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಮೇ ತಿಂಗಳಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಎರಡೂ ದೇಶಗಳು ಯುದ್ಧದ ಅಂಚಿನಲ್ಲಿವೆ ಎಂದು ಹೇಳಿದರು. ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರಣ್ ಹುಲ್ಲುಗಾವಲಿನಲ್ಲಿ ನಡೆದ ಈ ಭಯೋತ್ಪಾದಕ ದಾಳಿಯಲ್ಲಿ ಜಮ್ಮುಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋಗಿದ್ದ 26 ಭಾರತೀಯರು ಸಾವನ್ನಪ್ಪಿದ್ದರು.
ಈ ಯುದ್ಧ ಅಮೆರಿಕಾದಲ್ಲ, ನೈತಿಕ ಬೆಂಬಲಕ್ಕಿಂತ ಹೆಚ್ಚಿನದನ್ನು ಅಮೆರಿಕಾ ನೀಡಬಾರದು:
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಿರ್ಕ್, ಭಾರತ ಹಾಗೂ ಪಾಕಿಸ್ತಾನದ ನಡುವಣ ವಿವಾದದಲ್ಲಿ ಅಮೆರಿಕಾ ಭಾಗಿಯಾಗಲು ಬಯಸಿರಲಿಲ್ಲ. ಆದರೆ ಭಾರತವೂ ಇಸ್ಲಾಮಿಕ್ ಭಯೋತ್ಪಾದನೆಗೆ ಪ್ರತೀಕಾರ ತೀರಿಸಿಕೊಳ್ಳುತ್ತಿರುವುದರಿಂದ ನಾವು ಭಾರತದ ಕಡೆಗೆ ಸ್ವಲ್ಪ ಒಲವು ತೋರಬಹುದು, ಆದರೆ ಅದು ನೈತಿಕ ಬೆಂಬಲಕ್ಕಿಂತ ಹೆಚ್ಚಿನದನ್ನು ನೀಡಬಾರದು. ಅಷ್ಟೇ. ಇದು ನಮ್ಮ ಯುದ್ಧವಲ್ಲ... ತೊಡಗಿಸಿಕೊಳ್ಳಲು ನಮ್ಮ ಸಂಘರ್ಷವಲ್ಲ ಎಂದು ಅವರು ಹೇಳಿದರು.
ಉತಾಹ್ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಚಾರ್ಲಿ ಕಿರ್ಕ್ ಅವರ ಹತ್ಯೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅಮೆರಿಕಾ ಅಧ್ಯಕ್ಷ ದೇಶದಲ್ಲಿ ಶೋಕಾಚರಣೆ ಘೋಷಿಸಿದ್ದು, ಚಾರ್ಲಿ ಕಿರ್ಕ್ ಗೌರವಾರ್ಥ ಮೂರು ದಿನಗಳ ಕಾಲ ದೇಶದ ರಾಷ್ಟ್ರಧ್ವಜವನ್ನು ಅರ್ಧಕ್ಕಿಳಿಸಿ ಹಾರಿಸುವುದಕ್ಕೆ ಸೂಚನೆ ನೀಡಿದ್ದರು. ಇತ್ತ ಹಂತಕನ ಪತ್ತೆಗೆ ಶೋಧ ತೀವ್ರಗೊಳಿಸಲಾಗಿದ್ದು, ಹಂತಕನ ರೇಖಾಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ. ಚಾರ್ಲಿ ಕಿರ್ಕ್ ಕುಳಿತಿದ್ದ ಡೇರೆಯ ಮೇಲ್ಭಾಗದಿಂದ ಗುಂಡು ಹಾರಿ ಬಂದಿದ್ದು, ಈ ಗುಂಡು ಚಾರ್ಲಿ ಕಿರ್ಕ್ ಕತ್ತು ಸೀಳಿತ್ತು. ಕಿರ್ಕ್ ಸಾಮೂಹಿಕ ಗುಂಡಿನ ದಾಳಿ ಮತ್ತು ಬಂದೂಕು ಹಿಂಸಾಚಾರದ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದಾಗಲೇ ಅವರ ಕತ್ತಿಗೆ ಗುಂಡು ಹಾರಿಸಲಾಗಿತ್ತು. ಹಂತಕನ ಫೋಟೋವನ್ನು ಅಮೆರಿಕಾದ ತನಿಖಾ ಸಂಸ್ಥೆ ಬಿಡುಗಡೆ ಮಾಡಿದ್ದು, ಹಂತಕ ಕ್ಯಾಪ್, ಸನ್ಗ್ಲಾಸ್ ಮತ್ತು ಉದ್ದ ತೋಳಿನ ಕಪ್ಪು ಶರ್ಟ್ ಧರಿಸಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಕ್ಕಳ ಆಟಿಕೆ ಜೀಪನ್ನು ರಸ್ತೆಯಲ್ಲಿ ಓಡಿಸಿದವನನ್ನು ಬಂಧಿಸಿದ ಪೊಲೀಸರು
ಇದನ್ನೂ ಓದಿ: ನ್ಯಾನೋ ಬನಾನಾ ಟ್ರೆಂಡ್: ವೈರಲ್ ಆಗ್ತಿದೆ ಗೂಗಲ್ ಜೆಮಿನಿಯ ಹೊಸ ಟ್ರೆಂಡ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ