26/11 ಮುಂಬೈ ಭಯೋತ್ಪಾದಕ ದಾಳಿಯ ರೂವಾರಿಗಳಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ಕೆನಡಾದ ಉಗ್ರ ತಹಾವ್ವುರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕದ ಮೇಲ್ಮನವಿ ನ್ಯಾಯಾಲಯ ಒಪ್ಪಿಗೆ ನೀಡಿದೆ.
ವಾಷಿಂಗ್ಟನ್ (ಆ.18): 26/11 ಮುಂಬೈ ಭಯೋತ್ಪಾದಕ ದಾಳಿಯ ರೂವಾರಿಗಳಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ಕೆನಡಾದ ಉಗ್ರ ತಹಾವ್ವುರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕದ ಮೇಲ್ಮನವಿ ನ್ಯಾಯಾಲಯ ಒಪ್ಪಿಗೆ ನೀಡಿದೆ. ಹೀಗಾಗಿ ಭಾರತದ ತನಿಖಾ ಸಂಸ್ಥೆಗಳಿಗೆ ದೊಡ್ಡ ಜಯ ಲಭಿಸಿದಂತಾಗಿದೆ. ಆದರೂ, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಣಾಗೆ ಅವಕಾಶ ಇರುವುದರಿಂದ ಆತ ಸದ್ಯಕ್ಕೆ ಭಾರತದ ತನಿಖಾ ಏಜೆನ್ಸಿಗಳ ಕೈಗೆ ಸಿಗುವುದು ಅನುಮಾನವಾಗಿದೆ.
166 ಜನರನ್ನು ಬಲಿ ಪಡೆದ 2008ರ ಮುಂಬೈ ದಾಳಿಯಲ್ಲಿ ಕೆಲ ಅಮೆರಿಕನ್ನರು ಸಂತ್ರಸ್ತರಾಗಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ತನಿಖಾ ಏಜೆನ್ಸಿಗಳು ಈಗಾಗಲೇ ಈತನನ್ನು ಬಂಧಿಸಿ, ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಿವೆ. ಆ ಶಿಕ್ಷೆ ಮುಗಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ರಾಣಾನನ್ನು ತನಗೆ ನೀಡಬೇಕೆಂದು ಅಮೆರಿಕವನ್ನು ಕೋರಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳನ್ನು ನೀಡಿ ರಾಣಾ ತನ್ನನ್ನು ಗಡೀಪಾರು ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕದಲ್ಲಿ ಕೋರ್ಟ್‌ಗೆ ಹೋಗಿದ್ದ.
undefined
ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ: ಆಸ್ಪತ್ರೆಗಳಿಗೂ ವಿಮಾನ ನಿಲ್ದಾಣ ರೀತಿ ಸುರಕ್ಷತೆ ವಹಿಸುವಂತೆ ಬೇಡಿಕೆ
ವಿಚಾರಣಾ ನ್ಯಾಯಾಲಯವು ಆತನ ಗಡೀಪಾರಿಗೆ ಒಪ್ಪಿ ತೀರ್ಪು ನೀಡಿತ್ತು. ಅದನ್ನು ಆತ ಮೇಲ್ಮನವಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಮೇಲ್ಮನವಿ ನ್ಯಾಯಾಲಯ ಕೂಡ ಇದೀಗ, ‘ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಭಾರತ-ಅಮೆರಿಕ ನಡುವಿನ ಒಪ್ಪಂದದಲ್ಲಿ ಅವಕಾಶವಿದೆ. ಭಾರತದ ತನಿಖಾ ಸಂಸ್ಥೆಗಳ ಬಳಿ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ರಾಣಾನ ಪಾತ್ರವಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಗಳಿವೆ’ ಎಂದು ತೀರ್ಪು ನೀಡಿದೆ.
ಹೆಡ್ಲಿ ಜೊತೆ ತಹವ್ವುರ್ ರಾಣಾ ನಿಕಟ ಸಂಪರ್ಕ: ಸದ್ಯ ತಹವ್ವುರ್ ರಾಣಾ ಲಾಸ್ ಏಂಜಲೀಸ್ ಜೈಲಿನಲ್ಲಿದ್ದು, ಮುಂಬೈನ ದಾಳಿ ಸಂಚಿನ ಪ್ರಮುಖರಲ್ಲಿ ಈತನು ಒಬ್ಬ ಎಂಬ ಆರೋಪ ಈತನ ಮೇಲಿದೆ. ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಜೊತೆಯಲ್ಲಿ ತಹವ್ವುರ್ ರಾಣಾ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ತಹವ್ವುರ್ ರಾಣಾ ಹಲವು ಬಾರಿ ಭೇಟಿಯಾಗಿದ್ದರು. ಭೇಟಿಯಾಗಿರುವ ಬಗ್ಗೆ ಹೆಡ್ಲಿ ಸಹ ತನ್ನ ಹೇಳಿಕೆಯಲ್ಲಿ ದಾಖಲಿಸಿದ್ದಾನೆ.
ದೇಶಾದ್ಯಂತ ವೈದ್ಯರು ಮುಷ್ಕರ ನಡೆಸುತ್ತಿರುವುದೇಕೆ?: ಕೋಲ್ಕತಾ ಆಸ್ಪತ್ರೆಯಲ್ಲಿ ಆ.9 ರಂದು ಆಗಿದ್ದೇನು?
2008ರಲ್ಲಿ ಮುಂಬೈನ ವಿವಿಧ ಪ್ರದೇಶಗಳಲ್ಲಿ ನಡೆದ ದಾಳಿ ವೇಳೆ 166 ಮಂದಿ ಸಾವನ್ನಪ್ಪಿದ್ದು, 239 ಮಂದಿ ಗಾಯಗೊಂಡಿದ್ದರು. ಮೃತರಲ್ಲಿ ಆರು ಅಮೆರಿಕನ್ ಪ್ರಜೆಗಳು ಸೇರಿದ್ದರು. ಮುಂಬೈನ ತಾಜ್ ಹೋಟೆಲ್, ಆಸ್ಪತ್ರೆ, ಚಾಬಾದ್ ಹೌಸ್, ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ ಮೇಲೆ ದಾಳಿ ನಡೆಸಲಾಗಿತ್ತು. 10 ಉಗ್ರರ ಪೈಕಿ ಅಜ್ಮಲ್ ಕಸಬ್ ಎಂಬಾತ ಜೀವಂತವಾಗಿ ಸೆರೆ ಸಿಕ್ಕಿದ್ದನು. ಆನಂತರ ಈತನನ್ನು ಗಲ್ಲಿಗೇರಿಸಲಾಗಿತ್ತು. ಅಜ್ಮಲ್ ಕಸಬ್ ತನ್ನನ್ನು ಪಾಕಿಸ್ತಾನಿ ಎಂದು ಹೇಳಿಕೊಂಡಿದ್ದನು.