ಚೀನಾದ ಯುವಕನೋರ್ವ ತನಗೆ ತಿಳಿದ ಕ್ಯಾಲಿಗ್ರಾಫಿ ಕಲೆಯಿಂದ 7 ವರ್ಷದಲ್ಲಿ 23 ಕೋಟಿ ರೂಪಾಯಿ ಸಾಲ ತೀರಿಸಿದ್ದಾನೆ. ಕಲೆ ದುಡ್ಡು ಕೊಡಲ್ಲ ಅಂದವರಿಗೆ ಈತ ಮಾದರಿಯಾಗಿದ್ದಾನೆ.
ಒಂದು ಕೋಟಿ ಬಿಡಿ ಒಂದು ಲಕ್ಷ ಸಾಲ ತೀರಿಸುವುದು ಕೂಡ ಕೆಲ ಸಂದರ್ಭಗಳಲ್ಲಿ ತೀರಾ ಕಷ್ಟವೆನಿಸುತ್ತದೆ. ಆರ್ಥಿಕವಾದ ಯಾವುದೇ ಗಳಿಕೆಗಳಿಲ್ಲದಾಗ ಒಂದೊಂದು ರೂಪಾಯಿಯೂ ಅಮೂಲ್ಯ ಎನಿಸುವುದರ ಜೊತೆಗೆ ಸಣ್ಣ ಸಾಲವೂ ಕೂಡ ದೊಡ್ಡದೆನಿಸುತ್ತದೆ. ಹೀಗಿರುವಾಗ ತನಗೆ ತಿಳಿದ ಸಣ್ಣದೊಂದು ಕಲೆಯಿಂದ 7 ವರ್ಷದಲ್ಲಿ ವ್ಯಕ್ತಿಯೊಬ್ಬ 23 ಕೋಟಿ ರೂಪಾಯಿಯ ಸಾಲವನ್ನು ತೀರಿಸಿದ ಎಂದರೆ ಅದು ಸಣ್ಣ ಸಾಧನೆಯೇನಲ್ಲ. ಹೌದು ಚೀನಾದ ಯುವಕನೋರ್ವ ಈಗ ಭಾರಿ ಮೊತ್ತದ ಸಾಲವನ್ನು ಕಡಿಮೆ ಅವಧಿಯಲ್ಲಿ ತೀರಿಸಿದ ಕಾರಣಕ್ಕೆ ಸುದ್ದಿಯಲ್ಲಿದ್ದಾನೆ.
ತನಗೆ ತಿಳಿದಿದ್ದ ಕ್ಯಾಲಿಗ್ರಾಫಿ ಕಲೆಯನ್ನು ಇತರರಿಗೆ ಬೋಧಿಸುತ್ತಲೇ ಯುವಕನೋರ್ವ ಪೋಷಕರು ಮಾಡಿದ್ದ 23 ಕೋಟಿ ರೂಪಾಯಿ ಸಾಲವನ್ನು 7 ವರ್ಷದಲ್ಲಿ ತೀರಿಸಿದಂತಹ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ವುಹಾನ್ ಪ್ರದೇಶದ ಕ್ಯಾಲಿಗ್ರಾಫಿ ಕಲಾವಿದ 31 ವರ್ಷದ ಚೆನ್ ಝಾವೋ ಅವರೇ ಹೀಗೆ 7 ವರ್ಷದಲ್ಲಿ 23 ಕೋಟಿ ರೂಪಾಯಿ ಸಾಲವನ್ನು ತೀರಿಸಿದವರು. ಸಾಮಾನ್ಯವಾಗಿ ಕಲೆ ಡಾನ್ಸ್ ಎಂದು ಮಕ್ಕಳು ಅವರದೇ ಆಸಕ್ತಿಕರವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸಿದರೆ ಪೋಷಕರು ಅದೆಲ್ಲಾ ನಿಮಗೆ ಊಟ ಕೊಡಲ್ಲ, ಅಂತ ಹೀಗಳೆಯುತ್ತಾ, ಸಂಪ್ರದಾಯಿಕ ಶಿಕ್ಷಣದಲ್ಲಿ ಒಳ್ಳೆಯ ಅಂಕ ಗಳಿಸುವಂತೆ ಮಕ್ಕಳನ್ನು ಬೈಯುತ್ತಿರುತ್ತಾರೆ. ಅದೇ ರೀತಿ ಇಲ್ಲಿ ಚೆನ್ ಝಾವೋ ಅವರ ಪೋಷಕರು ಕೂಡ ಆತನಿಗೆ ಸಿದ್ಧಿಸಿದ್ದ ಈ ಕ್ಯಾಲಿಗ್ರಾಫಿ ಕಲೆಯಿಂದ ಬದುಕು ಕಟ್ಟಿಕೊಳ್ಳಲಾಗದು ಎಂದು ಸದಾ ಟೀಕಿಸುತ್ತಿದ್ದರಂತೆ ಆದರೆ ಅವರ ಮಾತುಗಳನ್ನೆಲ್ಲಾ ಚೆನ್ ಝಾವೋ ಈಗ ಸುಳ್ಳು ಮಾಡಿದ್ದಾನೆ. ಅವರ ಕುಟುಂಬದ ಬಟ್ಟೆ ಉದ್ಯಮದಿಂದ ಸುಮಾರು 23 ಕೋಟಿ ಸಾಲ ಆದಾಗ ಅವರನ್ನು ಸಾಲದಿಂದ ಮೇಲೆತ್ತಲು ಚೆನ್ ಝಾವೋ ಅವರ ಈ ಕ್ಯಾಲಿಗ್ರಾಫಿ ಕಲೆಯೇ ಬೇಕಾಯಿತು.
ಚೆನ್ ಝಾವೋ ಅವರು ಈ ಕ್ಯಾಲಿಗ್ರಾಫಿ ಕಲೆಯನ್ನು ಕೇವಲ 5 ವರ್ಷ ಪ್ರಾಯವಿದ್ದಾಗ ಆರಂಭಿಸಿದ್ದರು. ಈ ಕಲೆ ಚೆನ್ ಝಾವೋಗೆ ಸುಲಭವಾಗಿ ಸಿದ್ಧಿಸಿದ್ದರೂ ಪೋಷಕರು ಮಾತ್ರ ಆತನಿಗೆ ಬೇರೆ ಸಂಪ್ರದಾಯಿಕ ಶಿಕ್ಷಣದಲ್ಲಿ ತೊಡಗುವಂತೆ ಒತ್ತಾಯಿಸಿದರಂತೆ. ಆದರೂ ಹಠ ಬಿಡದ ಚೆನ್ ವ್ಯವಹಾರಕ್ಕೆ ಸಂಬಂಧಿಸಿದ ಕೋರ್ಸ್ ಮಾಡುವ ಬದಲು ಹುಬೈ ಇನ್ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್‌ನಲ್ಲಿ ಕ್ಯಾಲಿಗ್ರಫಿಯನ್ನು ಅಧ್ಯಯನ ಮಾಡಿದರು.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದಂತೆ, 2016 ರಲ್ಲಿ ಪದವಿ ಪಡೆದ ನಂತರ, ಅವರು ತಮ್ಮ ಕುಟುಂಬದ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಬದಲು ಬೋಧನಾ ಸ್ಟುಡಿಯೋವನ್ನು ತೆರೆದರು. ಅವರ ಮೊದಲ ವಿದ್ಯಾರ್ಥಿ ಎಡಗೈ ಶಾಲಾ ಮಗು, ಇದು ಅವರ ತಾಳ್ಮೆಯನ್ನು ಪರೀಕ್ಷಿಸಿತು. ಆದರೆ ಮಗುವಿನ ಕೈಬರಹ ಸುಧಾರಿಸಿದ ನಂತರ ಈ ಸುದ್ದಿ ಬೇಗನೆ ಹರಡಿ ಚೆನ್‌ಗೆ ಒಳ್ಳೆಯ ಜನಪ್ರಿಯತೆ ಬಂತು. ವರ್ಷದೊಳಗೆ ಸ್ಟುಡಿಯೋ ಬೆಳೆದು ದೊಡ್ಡದಾಯಿತು, ಮತ್ತು ಚೆನ್ ಫ್ರಾನ್ಸ್‌ನಲ್ಲಿ ಒಂದು ಸಣ್ಣ ಬೋಧನಾ ಕಾರ್ಯಕ್ರಮವನ್ನು ಸಹ ತೆಗೆದುಕೊಂಡರು.
2017 ರಲ್ಲಿ ಎಲ್ಲವೂ ಬದಲಾಯಿತು. ಇತ್ತ ಕಳಪೆ ನಿರ್ವಹಣೆಯಿಂದಾಗಿ ಅವರ ಕುಟುಂಬದ ವ್ಯವಹಾರ ಮುಚ್ಚಿಹೋಗಿದ್ದಲ್ಲದೇ, ಇದರಿಂದಾಗಿ ಅವರು ಮರುಪಾವತಿಸಲಾಗದ ಕೋಟ್ಯಾಂತರ ರೂ ಸಾಲಕ್ಕೆ ಹೊಣೆಗಾರರಾಗಬೇಕಾಯಿತು. ಇದು ಅವರ ತಂದೆಯ ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು.
ಹೀಗಾಗಿ ವ್ಯರ್ಥ ಮಾಡಲು ಸಮಯವಿಲ್ಲದೆ, ಚೆನ್ ಚೀನಾಕ್ಕೆ ಹಿಂತಿರುಗಿ ಅತಿಯಾದ ಕೆಲಸದಲ್ಲಿ ತೊಡಗಿಕೊಂಡರು. ಅವನು ತನ್ನ ಕ್ಯಾಲಿಗ್ರಾಫ್ ತರಗತಿಯ ಗಾತ್ರವನ್ನು ದ್ವಿಗುಣಗೊಳಿಸಿದನು, ಶುಲ್ಕವನ್ನು ಹೆಚ್ಚಿಸಿದರು. ಮತ್ತು ಎಲ್ಲಾ ಬೋಧನಾ ಕರ್ತವ್ಯಗಳನ್ನು ಸ್ವತಃ ನಿರ್ವಹಿಸಿದರು. ಶೀಘ್ರದಲ್ಲೇ ಇವರ ಸಂಸ್ಥೆಗೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 300 ದಾಟಿತು. ಅವರು ಬೆಳಗ್ಗೆ 8 ರಿಂದ ರಾತ್ರಿ 9 ರವರೆಗೆ 13 ಗಂಟೆಗಳ ಕಾಲ ಕೆಲಸ ಮಾಡಿದರು. ಅಲ್ಲದೇ ಹೆಚ್ಚಿನ ಹಣವನ್ನು ಗಳಿಸಲು, ಅವರು ಕ್ಯಾಲಿಗ್ರಫಿ ಸಾಮಗ್ರಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದರು ಜೊತೆಗೆ ಚಹಾ ಶಾಪ್‌ಗಳನ್ನು ಕೂಡ ತೆರೆದರು.
ಅವನ ದಣಿವಿಲ್ಲದ ಈ ನಿರಂತರ ದುಡಿಮೆಯಿಂದ ಚೆನ್ ತುಂಬಾ ದಣಿದಿದ್ದು, ಅವನ ಸ್ನೇಹಿತರು ಅವನ ಬಗ್ಗೆ ಚಿಂತಿತರಾಗಿದ್ದರು. ನಾವು ಭೇಟಿಯಾದಾಗಲೆಲ್ಲಾ ಅವನು ದಣಿದು ಬಿಳಿಚಿಕೊಂಡಿದ್ದನ್ನು ನಾವು ನೋಡಿದ್ದೇವೆ. ಸ್ವಲ್ಪ ಸಮಾಧಾನ ಮಾಡಿಕೊಳ್ಳುವಂತೆ ನಾವು ಅವನನ್ನು ಬೇಡಿಕೊಂಡೆವು ಎಂದು ಲಿಯಾಂಗ್ ಎಂಬ ಆಪ್ತ ಸ್ನೇಹಿತ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ಗೆ ತಿಳಿಸಿದ್ದಾರೆ. ಆದರೆ ನಿಖರ ಗುರಿ ಇಟ್ಟಿದ್ದ ಚೆನ್ ದಣಿವರಿದೇ ಕೆಲಸ ಮಾಡಿದ್ದು, ಕಳೆದ ಸೆಪ್ಟೆಂಬರ್ ವೇಳೆಗೆ ಕುಟುಂಬದ ಎಲ್ಲಾ ಸಾಲವನ್ನು ತೀರಿಸಿದರು. ಸಾಲ ತೀರಿಸುವುದಕ್ಕಿಂತಲೂ ತಮ್ಮ ಕುಟುಂಬ ಸೋಲಿನಿಂದ ಹೊರಬರುವುದನ್ನು ನೋಡುವುದು ತನ್ನ ನಿಜವಾದ ಗುರಿಯಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಜೊತೆಗೆ ನನ್ನ ಹೆತ್ತವರು ಈಗ ಕ್ಯಾಲಿಗ್ರಫಿಯಿಂದ ಹಣ ಗಳಿಸಬಹುದು ಎಂದು ನಂಬಿದ್ದಾರೆ. ಅದು ನನಗೆ ಎಲ್ಲಕ್ಕಿಂತ ಹೆಚ್ಚು ಸಂತೋಷವನ್ನು ನೀಡುತ್ತದೆ. ಇದರಲ್ಲಿ ಮುಂದುವರಿಯಲು ನನಗೆ ಎಲ್ಲಾ ಕಾರಣಗಳಿವೆ. ಜೊತೆಗೆ ಸಾಲವೂ ತೀರಿತು. ಉತ್ಸಾಹ ದೃಢವಾಯಿತು. ಮತ್ತು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿದರೆ ಕಲೆಯು ನಮ್ಮ ಬದುಕು ಕಟ್ಟಿಕೊಡಬಹುದು ಎಂಬುದನ್ನು ಇವರು ಸಾಧಿಸಿ ತೋರಿಸಿದ್ದಾರೆ. ಒಟ್ಟಿನಲ್ಲಿ ಧೃಡಸಂಕಲ್ಪ, ಕಠಿಣ ಪರಿಶ್ರಮ ಇದ್ದರೆ ಯಾವ ಸಾಲ ತೀರಿಸುವುದೂ ಕೂಡ ದೊಡ್ಡದಲ್ಲ ಎಂಬುದನ್ನು ಚೆನ್ ತೋರಿಸಿಕೊಟ್ಟಿದ್ದಾರೆ.