ರಷ್ಯಾದ ಸರಣಿ ಕೊಲೆಗಾರ ಅಲೆಕ್ಸಾಂಡರ್ ಪಿಚುಷ್ಕಿನ್, ಈಗಾಗಲೇ 48 ಕೊಲೆಗಳಲ್ಲಿ ದೋಷಿಯಾಗಿದ್ದು, ಈಗ ಇನ್ನೂ 11 ಕೊಲೆಗಳನ್ನು ಮಾಡಿರುವುದಾಗಿ ಹೇಳಿಕೊಳ್ಳಲು ಸಿದ್ಧನಾಗಿದ್ದಾನೆ.
ಈಗಾಗಲೇ 48 ಕೊಲೆ ಕೇಸ್‌ಗಳಲ್ಲಿ ದೋಷಿಯಾಗಿರುವ ರಷ್ಯಾದ ಸೀರಿಯಲ್ ಕಿಲ್ಲರ್ ಅಲೆಕ್ಸಾಂಡರ್ ಪಿಚುಷ್ಕಿನ್ ತಾನು ಇನ್ನೂ 11 ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಳ್ಳಲು ಸಿದ್ಧನಾಗಿದ್ದಾನೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈತನ ವಿರುದ್ಧದ ಒಟ್ಟು 48 ಕೊಲೆ ಪ್ರಕರಣಗಳಲ್ಲಿ ಈತ ದೋಷಿ ಎಂಬುದು ಸಾಬಿತಾಗಿದ್ದು, 2007ರಿಂದಲೂ ಈತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಚೆಸ್‌ಬೋರ್ಡ್ ಕಿಲ್ಲರ್ ಎಂದೇ ಕುಖ್ಯಾತಿ ಗಳಿಸಿರುವ ಈತ ರಷ್ಯಾದ ಅತ್ಯಂತ ಸರಣಿ ಕೊಲೆಗಾರರಲ್ಲಿ ಒಬ್ಬನಾಗಿದ್ದಾನೆ. ರಷ್ಯನ್ ಪ್ಯಾನಲ್ ಸರ್ವೀಸ್ ಮಾಹಿತಿಯನ್ನು ಆಧರಿಸಿ ರಾಯಿಟರ್ಸ್ ಈ ವರದಿ ಮಾಡಿದೆ. 50 ವರ್ಷ ವಯಸ್ಸಿನ ಈ ಸೀರಿಯಲ್ ಕಿಲ್ಲರ್ ಅಲೆಕ್ಸಾಂಡರ್ ಪಿಚುಷ್ಕಿನ್ ಈಗಾಗಲೇ 18 ವರ್ಷಗಳನ್ನು ರಷ್ಯಾದ ಆರ್ಕ್ಟಿಕ್ ನಾರ್ದರ್ನ್ ಪ್ರದೇಶದ ಪೋಲಾರ್ ಔಲ್ ಜೈಲಿನಲ್ಲಿ ಕಳೆದಿದ್ದಾನೆ. 1992 ರಿಂದ 2006 ರವರೆಗೆ ಈತ ತನಗೆ ಶಿಕ್ಷೆ ಸಿಗಲು ಕಾರಣವಾದ 48 ಕೊಲೆಗಳಲ್ಲದೆ, ಅದಕ್ಕಿಂತ ಹೆಚ್ಚು ಕೊಲೆಗಳನ್ನು ತಾನು ಮಾಡಿದ್ದೇನೆ ಎಂದು ಈಗ ಹೇಳಿಕೊಳ್ಳಲು ಸಿದ್ಧನಾಗಿದ್ದಾನೆ. ಈತ 48ಕ್ಕಿಂತಲೂ ಹೆಚ್ಚು ಕೊಲೆ ಮಾಡಿರಬಹುದು ಎಂಬ ಬಗ್ಗೆ ಅಧಿಕಾರಿಗಳಿಗೆ ಮೊದಲೇ ಅನುಮಾನವಿತ್ತು. ಇದೀಗ ಪಿಚುಷ್ಕಿನ್ 48 ಕೊಲೆಗಳಲ್ಲದೇ ಮತ್ತೆ 11 ಕೊಲೆಗಳನ್ನು ಮಾಡಿದ್ದಾಗಿ ಒಪ್ಪಿಕೊಳ್ಳುತ್ತಿದ್ದಾನೆ ಎಂದು ವರದಿಯಾಗಿದೆ.
1992 ರಲ್ಲಿ ಮೊದಲ ಬಾರಿ ಈತ ಕೊಲೆ ಮಾಡಿದಾಗ ಈತನಿಗೆ ಕೇವಲ 18 ವರ್ಷ ವಯಸ್ಸಾಗಿತ್ತು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಆದರ ಈತನ ಬಂಧನ ಆಗುವ ವೇಳೆಗೆ ಈತನಿಗೆ 33 ವರ್ಷ ವಯಸ್ಸಾಗಿತ್ತು. ಈತ ಒಂದು ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹೆಚ್ಚಾಗಿ ಬಿಟ್ಸೆವ್ಸ್ಕಿ ಪಾರ್ಕ್ ಅಥವಾ ಮನೆಯಲ್ಲಿ ಚೆಸ್ ಆಡಿಕೊಂಡೇ ಕಾಲ ಕಳೆಯುತ್ತಿದ್ದ. ದಕ್ಷಿಣ ಮಾಸ್ಕೋದ ಬಿಟ್ಸೆವ್ಸ್ಕಿ ಪಾರ್ಕ್ ಸುತ್ತಮುತ್ತಲಿನ ವೃದ್ಧರು, ಕುಡುಕರು ಮತ್ತು ನಿರಾಶ್ರಿತರೇ ಈತನ ಟಾರ್ಗೆಟ್ ಆಗಿದ್ದರು.
ಚೆಸ್‌ಬೋರ್ಡ್ ಕಿಲ್ಲರ್ ಹೆಸರು ಬಂದಿದ್ದೇಕೆ?
ಈತ 64 ಚೌಕಗಳಿರುವ ಚೆಸ್‌ಬೋರ್ಡ್‌ನ ಪ್ರತಿ ಚೌಕಾದಲ್ಲಿಯೂ ತನ್ನ ಮುಂದಿನ ಟಾರ್ಗೆಟ್ ಯಾರು ಎಂಬುದನ್ನು ಗುರುತಿಸಿ ಇಡುತ್ತಿದ್ದನಂತೆ ಇದೇ ಕಾರಣಕ್ಕೆ ಈತನಿಗೆ ರಷ್ಯಾದ ಮಾಧ್ಯಮಗಳು ಚೆಸ್ ಬೋರ್ಡ್ ಕಿಲ್ಲರ್' ಎಂದು ಹೆಸರಿಟ್ಟವು. ಈತ ಚೆಸ್ ಬೋರ್ಡ್‌ನ ಪ್ರತಿ ಚೌಕದಲ್ಲಿಯೂ ತನ್ನ ಗುರಿಯನ್ನು ಗುರುತಿಸಿ ಇಡುತ್ತಿದ್ದ ಎಂದು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡ ನಂತರ ಮಾಧ್ಯಮಗಳು ಈತನಿಗೆ ಈ ಹೆಸರನ್ನು ನೀಡಿದವು.
ಈತ 63 ಜನರನ್ನು ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಅದರಲ್ಲಿ 48 ಕೊಲೆ ಪ್ರಕರಣಗಳನ್ನು ಮಾತ್ರ ಪ್ರಾಸಿಕ್ಯೂಟರ್‌ಗಳು ದೃಢಪಡಿಸಲು ಸಾಧ್ಯವಾಗಿದೆ.. ಇದರ ಜೊತೆಗೆ 3 ಕೊಲೆ ಯತ್ನಗಳಿಗೂ ಈತನ ವಿರುದ್ಧ ಆರೋಪ ಹೊರಿಸಲಾಗಿದೆ.
ಪ್ರಸ್ತುತ, ರಷ್ಯಾದಲ್ಲಿ ದಾಖಲಾಗಿರುವ ಅತ್ಯಂತ ಅಪಾಯಕಾರಿ ಸರಣಿ ಕೊಲೆಗಾರ ಎಂಬ ಕುಖ್ಯಾತಿ ಮಿಖಾಯಿಲ್ ಪಾಪ್ಕೋವ್ ಎಂಬಾತನಿಗಿದೆ. ಈತ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ. ಈತನ ವಿರುದ್ಧ 78 ಕೊಲೆ ಮಾಡಿದ ಆರೋಪವಿದ್ದು, ಈ ಎಲ್ಲಾ ಪ್ರಕರಣಗಳಲ್ಲಿ ಈತ ದೋಷಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಈತನ ನಂತರದ ಸ್ಥಾನದಲ್ಲಿ ಆಂಡ್ರೇ ಚಿಕಾಟಿಲೋ ಎಂಬ ಸರಣಿ ಹಂತಕ ಇದ್ದು, ಈತ 1992 ರಲ್ಲಿ 52 ಜನರನ್ನು ಕೊಂದು ಅಂಗವಿಕಲಗೊಳಿಸಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾನೆ.
ಗಾರ್ಡಿಯನ್ ವರದಿಯ ಪ್ರಕಾರ ಈ ಚೆಸ್‌ಬೋರ್ಡ್ ಕಿಲ್ಲರ್ ಅಲೆಕ್ಸಾಂಡರ್ ಪಿಚುಷ್ಕಿನ್, ಈಗಾಗಲೇ 52 ಕೊಲೆ ಮಾಡಿದ್ದ ಸರಣಿ ಕೊಲೆಗಾರ ಆಂಡ್ರೇ ಚಿಕಾಟಿಲೋನನ್ನು ಮೀರಿಸುವ ಕನಸು ಕಂಡಿದ್ದ ಎಂದು ವಿಚಾರಣೆಯ ಸಮಯದಲ್ಲಿ ರಷ್ಯಾದ ಪ್ರಾಸಿಕ್ಯೂಟರ್ ಯೂರಿ ಸ್ಯೋಮಿನ್ ಹೇಳಿದ್ದಾರೆ.