ನೈಸರ್ಗಿಕ ಕರೆಗಾಗಿ ಕಾರಿನಿಂದಿಳಿದ ಹೆಂಡ್ತಿಯನ್ನೇ ಬಿಟ್ಟು ಹೋದ ಗಂಡ..!

By Anusha Kb  |  First Published Dec 30, 2022, 5:34 PM IST

ಪ್ರವಾಸದ ವೇಳೆ ದಾರಿ ಮಧ್ಯೆ ಸುಸ್ಸು ಮಾಡಲು ಹೋದ ಪತ್ನಿಯನ್ನು ಪತಿಯೊಬ್ಬ ಬಿಟ್ಟು ಹೋದ ವಿಚಿತ್ರ ಘಟನೆ ಥೈಲ್ಯಾಂಡ್‌ನಿಂದ ವರದಿಯಾಗಿದೆ. ದಂಪತಿಗಳಿಬ್ಬರು ತಮ್ಮ ರಜಾ ದಿನಗಳನ್ನು ಕಳೆಯುವುದಾಗಿ ರಸ್ತೆ ಮೂಲಕ ಕಾರಿನಲ್ಲಿ ಟ್ರಿಪ್ ಹೊರಟಿದ್ದರು


ಥೈಲ್ಯಾಂಡ್: ಮರೆವು ಹಾಗೂ ಮಾನಸಿಕವಾಗಿ ವಾಸ್ತವದಲ್ಲಿ ಇಲ್ಲದಿರುವುದರಿಂದ ಹಲವು ಸಂಕಷ್ಟಗಳು ಎದುರಾಗುತ್ತವೆ. ಏನೋ ಮಾಡಲು ಹಾಲ್‌ನಿಂದ ಅಡುಗೆ ಮನೆಗೆ ಹೋದವರಿಗೆ ಅಲ್ಲಿಗೆ ತಲುಪುವಾಗ ತಾನು ಏಕೆ ಅಲ್ಲಿಗೆ ಹೋದೆ ಎಂಬುದು ಮರೆತು ಹೋಗುತ್ತದೆ. ಮತ್ತೆ ಕೆಲವರು ಕನ್ನಡಕವನ್ನು ಕಣ್ಣಿಗೆ ಸಿಕ್ಕಿಸಿಕೊಂಡು ನನ್ನ ಕನ್ನಡಕ ಎಲ್ಲಿ ಎಂದು ಊರೆಲ್ಲ ಹುಡುಕುತ್ತಾರೆ. ಹಾಗೆಯೇ ಕೆಲವರು ಮೊಬೈಲ್ ಫೋನ್ ಜೋಬಲ್ಲಿ ಇರಿಸಿಕೊಂಡು ಇನ್ನೆಲ್ಲೋ ಹುಡುಕುವುದುಂಟು. ಇದು ಮರೆವಿನ ಸಮಸ್ಯೆ ಅಥವಾ ನಮ್ಮ ಮನಸ್ಸು ವಾಸ್ತವದಲ್ಲಿಲ್ಲದೇ ಇನ್ನೆಲ್ಲೋ ಹೋದಾಗ ಆಗುವ ಸಮಸ್ಯೆ ಇದು. ಇಂತಹ ಅನುಭವ ಅನೇಕರಿಗೆ ಆಗಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಮರೆವಿನ ವಿಚಾರದಲ್ಲಿ ಈತ ಮ್ಯಾಕ್ಸ್ ಪ್ರೋ ಆಗಿದ್ದಾನೋ ಏನೋ ಗೊತ್ತಿಲ್ಲ. ಪತ್ನಿಯನ್ನೇ ದಾರಿಮಧ್ಯೆ ಬಿಟ್ಟು ಬಂದಿದ್ದಾನೆ. ಥೈಲ್ಯಾಂಡ್‌ನಲ್ಲಿ (Thailand) ಈ ವಿಚಿತ್ರ ಘಟನೆ ನಡೆದಿದೆ. 

ಪ್ರವಾಸದ ವೇಳೆ ದಾರಿ ಮಧ್ಯೆ ಸುಸ್ಸು ಮಾಡಲು ಹೋದ ಪತ್ನಿಯನ್ನು ಪತಿಯೊಬ್ಬ ಬಿಟ್ಟು ಹೋದ ವಿಚಿತ್ರ ಘಟನೆ ಥೈಲ್ಯಾಂಡ್‌ನಿಂದ ವರದಿಯಾಗಿದೆ. ದಂಪತಿಗಳಿಬ್ಬರು ತಮ್ಮ ರಜಾ ದಿನಗಳನ್ನು ಕಳೆಯುವುದಾಗಿ ರಸ್ತೆ ಮೂಲಕ ಕಾರಿನಲ್ಲಿ ಟ್ರಿಪ್ ಹೊರಟಿದ್ದರು. ಈ ವೇಳೆ ಮಧ್ಯರಾತ್ರಿ ದಾರಿಮಧ್ಯೆ ಪತಿ ನೇಚರ್‌ ಕಾಲ್‌ಗಾಗಿ ಕಾರು ನಿಲ್ಲಿಸಿ ಹೊರಗಿಳಿದು ಪಕ್ಕದ ಪೊದೆಯತ್ತ ಹೋಗಿದ್ದಾನೆ. ಈ ವೇಳೆ ಪತ್ನಿಯೂ ಇಳಿದು ಸುಸ್ಸು ಮಾಡಲು ಹೋಗಿದ್ದಾಳೆ. ಆದರೆ ನಡುರಾತ್ರಿ ನಿದ್ದೆಗಣ್ಣಿನಲ್ಲಿದ್ದ ಕಾರಣಕ್ಕೊ ಪತ್ನಿ ಹೊರ ಹೋಗಿದ್ದಾಳೆ ಎಂಬ ಗೋಚರವಿಲ್ಲದೆಯೋ ಏನೋ ತಿಳಿಯದು ಈತ ಪತ್ನಿಯನ್ನು ಬಿಟ್ಟು ಸೀದಾ ಕಾರು ಚಾಲನೆ ಮಾಡಿಕೊಂಡು 20 ಕಿಲೋಮೀಟರ್ ದೂರ ಹೋಗಿದ್ದಾನೆ. 

Tap to resize

Latest Videos

ಅಯ್ಯೋ ಅರ್ಜೆಂಟ್ ಅಂತ ಓಡೋಗಿ ಕೂರೋ ಮುನ್ನ ಜೋಪಾನ: ಬೇಸಿನ್ ಅಲ್ಲಿ ಬುಸ್‌ ಬುಸ್‌

ಈತ ನೈಸರ್ಗಿಕ ಕರೆಗಾಗಿ (Nature call) ಕಾರಿನಿಂದ ಇಳಿದ ಮಹಿಳೆ ತನ್ನ ಕೆಲಸ ಮುಗಿಸಿಕೊಂಡು ಕಾರು ನಿಲ್ಲಿಸಿದಲ್ಲಿಗೆ ಬಂದು ನೋಡಿದರೆ ಅಲ್ಲಿ ಕಾರೂ ಇಲ್ಲ. ಅತ್ತ ಗಂಡನೂ ಇಲ್ಲ. ನಡುರಾತ್ರಿ ಬೇರೆ ಹೊರಗೆಲ್ಲಾ ಕರಾಳವಾದ ಕತ್ತಲು. ಸಮಯ ಬೇರೆ ಮಧ್ಯರಾತ್ರಿ  ಮೂರು ಗಂಟೆ, ಇತ್ತ ತನ್ನ ಗಂಡ ತನ್ನನ್ನು ಬಿಟ್ಟು ಹೊರಟು ಹೋಗಿರುವುದು ಖಚಿತವಾದಂತೆ ಆಕೆಗೆ ಭಯ ಶುರುವಾಗಿದೆ. ಗಂಡನನ್ನು ಕರೆ ಮಾಡಿ ಸಂಪರ್ಕಿಸೋಣವೆಂದರೆ ಫೋನ್ ಕೂಡ ಕಾರಿನಲ್ಲೇ ಇದೆ. ಪರಿಣಾಮ ಏನು ಮಾಡಲು ತೋಚದ ಆಕೆ ಇದ್ದಬದ್ಧ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ನಡುರಾತ್ರಿಯಲ್ಲೇ ರಸ್ತೆಯುದ್ಧಕ್ಕೂ ಬರೋಬ್ಬರಿ 20 ಕಿಲೋ ಮೀಟರ್ ದೂರ ನಡೆದಿದ್ದಾಳೆ. 

20 ಕಿಲೋ ಮೀಟರ್ ನಡೆದ ನಂತರ ಆಕೆ ಸಮೀಪದ ಕಬಿನ್ ಬುರಿ (Kabin Buri) ಎಂಬ ಜಿಲ್ಲೆಯನ್ನು ತಲುಪಿದ್ದಾಳೆ. ಅಲ್ಲಿ ಆಕೆ ಸ್ಥಳೀಯ ಪೊಲೀಸರ ಸಹಾಯ ಯಾಚಿಸಿದ್ದು, ತನ್ನ ಗಂಡನನ್ನು ಸಂಪರ್ಕಿಸುವಂತೆ ಕೇಳಿದ್ದಾಳೆ. ಆದರೆ ಈಕೆಗೆ ತನ್ನ ಪತಿಯ ದೂರವಾಣಿ ಸಂಖ್ಯೆಯೂ ನೆನಪಿಲ್ಲ. ಇದಾದ ಬಳಿಕ ಆಕೆ ತನ್ನದೇ ನಂಬರ್ ಗೆ ಕನಿಷ್ಟ 20 ಬಾರಿ ಕರೆ ಮಾಡಿದ್ದಾಳೆ. ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.  ಇದಾಗಿ ಬೆಳಗ್ಗೆ 8 ಗಂಟೆ ಸುಮಾರಿಗೆ ಆಕೆ ಆಕೆಯ ಗಂಡನನ್ನು ಪೊಲೀಸರ ಸಹಾಯದಿಂದ ಸಂಪರ್ಕಿಸಲು ಸಾಧ್ಯವಾಗಿದೆ. ಆದರೆ ಇತ್ತ ಪತಿಗೆ ಮಾತ್ರ ಅಲ್ಲಿವರೆಗೂ ಹೆಂಡ್ತಿ ತನ್ನ ಕಾರಿನಲ್ಲಿ ಇಲ್ಲ ಎಂಬ ವಿಚಾರ ತಿಳಿದಿಲ್ಲ. ಆಕೆ ಹಿಂಬದಿ ಸೀಟಿನಲ್ಲಿ ನಿದ್ದೆಗೆ ಜಾರಿದ್ದಾಳೆ ಎಂದೇ ಆತ ಭಾವಿಸಿದ್ದ. ಹೆಂಡತಿ ಇಲ್ಲದೆಯೇ ಆತ ಕೊರಾಟ್ ಪ್ರದೇಶವನ್ನು (Korat province) ಅಂದರೆ ಸುಮಾರು 159 ಕಿಲೋ ಮೀಟರ್ ದೂರವನ್ನು ಕ್ರಮಿಸಿದ್ದ ಎಂದು ಥೈಲ್ಯಾಂಡ್ ನ್ಯೂಸ್ ವೆಬ್‌ಸೈಟೊಂದು ವರದಿ ಮಾಡಿದೆ. 

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಪ್ರಪಂಚದ 7 ಅದ್ಭುತ ರಸ್ತೆಗಳಿವು!

ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, 55 ವರ್ಷದ ಬೂನ್ಟೊಮ್ ಚೈಮೂನ್ (Boontom Chaimoon) ಎಂಬಾತನೇ ಹೆಂಡತಿಯನ್ನು ಬಿಟ್ಟು ಹೊರಟು ಹೋದ ವ್ಯಕ್ತಿ. ಈತ ಪತ್ನಿ 49 ವರ್ಷ ಅಮ್ನುಯ್ ಚೈಮೂನ್ (Amnuay Chaimoon) ಜೊತೆ ರಜಾ ದಿನಗಳನ್ನು ಕಳೆಯಲು ರಸ್ತೆ ಮೂಲಕ ಕಾರಿನಲ್ಲಿ ತಮ್ಮ ಹುಟ್ಟೂರಾದ ಮಹಾ ಸರ್ಕಾಮ್ ಪ್ರಾಂತ್ಯಕ್ಕೆ (Maha Sarakham Province) ತೆರಳಿದ್ದರು. ಇತ್ತ ಪತ್ನಿ ಕಾರಿನಲ್ಲಿ ಇಲ್ಲ ಎಂಬುದನ್ನು ಅರಿತ ಆತ ಕೂಡಲೇ ಸಂಗಾತಿಯನ್ನು ಕರೆದುಕೊಂಡು ಬರಲು ಹೋದ ದಾರಿಯಲ್ಲೇ ಮರಳಿ ಬಂದಿದ್ದು, ಪತ್ನಿ ಬಳಿ ಕ್ಷಮೆ ಕೇಳಿದ್ದಾನೆ ಎಂದು ತಿಳಿದು ಬಂದಿದೆ. ಈ ದಂಪತಿಗೆ ಕಳೆದ 27 ವರ್ಷಗಳ ಹಿಂದೆ ವಿವಾಹವಾಗಿದ್ದು, 26 ವರ್ಷದ ಮಗನಿದ್ದಾನೆ ಎಂದು ತಿಳಿದು ಬಂದಿದೆ.


 

click me!