ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಮಹಿಳೆ ಹಾಗೂ ಆಕೆಯ ಜೊತೆಗಾರ ಪುರುಷ ಕಾರು ಕದಿಯಲು ಪ್ರಯತ್ನಿಸಿದ್ದಾರೆ. ಆದರೆ, ಈ ಸಮಯದಲ್ಲಿ ಕಾರಿನ ಮಾಲೀಕ ಹಿಂತಿರುಗಿದ ಕಾರಣ ಅವರ ಯೋಜನೆ ವಿಫಲವಾಗಿದೆ. ಇನ್ನೊಂದೆಡೆ ಕಾರಿನಲ್ಲಿ ಅಟ್ಟಿಸಿಕೊಂಡು ಬಂದ ಕಾರು ಮಾಲೀಕನಿಂದ ತಪ್ಪಿಸಿಕೊಳ್ಳಲು ಬೈಕ್ ನಲ್ಲಿ ವೇಗವಾಗಿ ಹೋಗುವಾಗ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಹೆಬ್ಬೆರಳಲು ಕಳೆದುಕೊಂಡಿದ್ದಾಳೆ.
ಬ್ರಿಸ್ಬೇನ್ (ಡಿ.30): ಮಾಡಿದ್ದುಣ್ಣೊ ಮಹಾರಾಯ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆಯೊಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ರಾಜ್ಯದ ರಾಜಧಾನಿ ಬ್ರಿಸ್ಬೇನ್ ನಲ್ಲಿ ನಡೆದಿದೆ. ಕಾರು ಕದಿಯಲು ಪ್ರಯತ್ನಿಸಿದ ಮಹಿಳೆಯೊಬ್ಬಳು ಬೆರಳು ಕಳೆದುಕೊಂಡ ಘಟನೆ ನಾರ್ಥನ್ ಗೋಲ್ಡ್ ಕೋಸ್ಟ್ ನಲ್ಲಿ ವರದಿಯಾಗಿದೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ಘಟನೆಯ ಪ್ರತ್ಯಕ್ಷದರ್ಶಿ ಪೂಲ್ ಟೆಕ್ನಿಸಿಯನ್ ಡೇವಿಡ್ ಬ್ರೈನ್ ಎಂಬುವರು ಘಟನೆಯ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಡೇವಿಡ್ ಬ್ರೈನ್ ಕಾರ್ ಅನ್ನು ಪಾರ್ಕ್ ಮಾಡಿ ತನ್ನ ಗ್ರಾಹಕರಿಗೆ ಕೆಲಸ ಮಾಡಿಕೊಡಲು ಹೋಗಿದ್ದರು. ಈ ಸಮಯದಲ್ಲಿ ಅವರ ಕಾರ್ ಕಿಟಕಿ ಗಾಜನ್ನು ಕೆಳಗಿಳಿಸಿ ಹೋಗಿದ್ದರು. ಕೆಲಸ ಮುಗಿಸಿ ಮರಳಿ ಕಾರ್ ಬಳಿ ಬರುತ್ತಿರುವಾಗ ಒಬ್ಬ ವ್ಯಕ್ತಿ ಕಾರಿನೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರೋದನ್ನು ಬ್ರೈನ್ ನೋಡಿದರು. ತುಸು ದೂರದಲ್ಲೇ ಮೋಟಾರ್ ಬೈಕ್ ನಲ್ಲಿ ಮಹಿಳೆಯೊಬ್ಬಳು ಆತನಿಗಾಗಿ ಕಾಯುತ್ತ ನಿಂತಿರೋದನ್ನು ಕೂಡ ಅವರು ಗಮನಿಸುತ್ತಾರೆ. ಬ್ರೈನ್ ಅವರನ್ನು ನೋಡಿ ಕಳ್ಳರಿಬ್ಬರು ಮೋಟಾರ್ ಬೈಕ್ ನಲ್ಲಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿರುವಾಗ ನಡೆದ ಅಪಘಾತದಲ್ಲಿ ಮಹಿಳೆ ತನ್ನ ಹೆಬ್ಬೆರಳನ್ನೇ ಕಳೆದುಕೊಂಡಿದ್ದಾಳೆ. ಇದರ ವಿಡಿಯೋಯನ್ನು ಬ್ರೈನ್ ಸೆರೆ ಹಿಡಿದಿದ್ದಾರೆ.
'ಬಹುಶಃ ಅವರು ನಾನು ಕಾರಿನ ಕಿಟಕಿಯ ಗಾಜನ್ನು ಕೆಳಗಿಳಿಸಿ ಹೋಗಿರೋದನ್ನು ಗಮನಿಸಿದ್ದಾರೆ. ಹೀಗಾಗಿ ಕಾರ್ ನಲ್ಲಿ ಏನಾದರೂ ಸಿಗಬಹುದಾ ಎಂದು ನೋಡಲು ಬಂದಿರಬೇಕು' ಎಂದು ಬ್ರೈನ್ ಹೇಳಿದ್ದಾರೆ. 'ರಸ್ತೆಯುದ್ದಕ್ಕೂ ನಾನು ಅವರನ್ನು ಫಾಲೋ ಮಾಡಿಕೊಂಡು ಹೋದೆ. ನನ್ನ ಕಾರ್ ಕೀ ಹಾಗೂ ಪರ್ಸ್ ಅನ್ನು ಅವರು ಕೊಂಡುಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸಿದ್ದೆ. ಏಕೆಂದ್ರೆ ಆತ ಮರಳಿ ನನ್ನ ಮನೆಗೆ ಬಂದು ಕಳ್ಳತನ ಮಾಡಬಹುದು ಎಂದು ನಾನು ಯೋಚಿಸಿದೆ' ಎಂದು ಬ್ರೈನ್ ತಿಳಿಸಿದ್ದಾರೆ.
ಹಿಮ ಸರೋವರದ ಮೇಲೆ ಫೋಟೋ ತೆಗೆಯಲು ಹೋಗಿ ಮೂವರು NRIಗಳು ಸಾವು
'ನಾನು ಅವರಿಬ್ಬರನ್ನು ಹಿಡಿಯಬೇಕು ಎಂದು ಪ್ರಯತ್ನಿಸುತ್ತಿದೆ. ಕೀ ಮತ್ತು ಪರ್ಸ್ ಹಿಂಪಡೆಯಬೇಕು ಎಂದು ಬಯಸಿದ್ದೆ. ಪುಣ್ಯಕ್ಕೆ ಅವೆರಡೂ ಅವರ ಬಳಿ ಇರಲಿಲ್ಲ. ಇನ್ನು ಬೈಕ್ ಹಿಂದೆ ಕುಳಿತಿದ್ದ ಮಹಿಳೆ ನನಗೆ ಬೈಯುತ್ತಿದ್ದಳು. ಆ ವ್ಯಕ್ತಿಗಿಂತ ಮಹಿಳೆಯದ್ದೇ ನನಗೆ ದೊಡ್ಡ ಚಿಂತೆಯಾಗಿತ್ತು' ಎಂದು ಬ್ರೈನ್ ಹೇಳಿದ್ದಾರೆ. ಅವರಿಬ್ಬರೊಂದಿಗೆ ನಡೆದ ವಾಗ್ವಾದವನ್ನು ಬ್ರೈನ್ ವಿಡಿಯೋ ಮಾಡಲು ಬ್ರೈನ್ ನಿರ್ಧರಿಸಿದರು.
ಬ್ರೈನ್ ಚಿತ್ರೀಕರಿಸಿರುವ ವಿಡಿಯೋದಲ್ಲಿ ಮಹಿಳೆ ಮತ್ತು ಪುರುಷ ಬ್ರೈನ್ ಜೊತೆಗೆ ಮಾತಿನ ಚಕಮಕಿ ನಡೆಸಿ ಬೈಕ್ ನಲ್ಲಿ ವೇಗವಾಗಿ ತೆರಳುವಾಗ ಮರದ ಬೇಲಿಗೆ ಡಿಕ್ಕಿ ಹೊಡೆದು ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯ ಹೆಬ್ಬೆರಳು ತುಂಡಾಗಿದೆ. ಆದರೆ, ಅವರಿಬ್ಬರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, 29 ವರ್ಷದ ಆ ಮಹಿಳೆ ನಂತರ ಹೆದ್ದಾರಿಯಲ್ಲಿ ಸಿಕ್ಕಿದ್ದು, ಸದ್ಯ ಪ್ರಿನ್ಸೆಸ್ ಅಲೆಕ್ಸಾಂಡರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬೈಕಲ್ಲೇ ಬೃಹದಾಕಾರದ ಕಲ್ಲಿನ ಬೆಟ್ಟವೇರಿ ಬೈಕರ್ ಸಾಹಸ : ವಿಡಿಯೋ ವೈರಲ್
'ಆಕೆಯ ಹೆಬ್ಬೆರಳಲ್ಲಿ ಏನೂ ಉಳಿದಿಲ್ಲ. ತುಂಡಾಗಿರುವ ಹೆಬ್ಬೆರಳು ಹುಡುಕಿದರೂ ನಮಗೆ ಸಿಗಲಿಲ್ಲ' ಎಂದು ಬ್ರೈನ್ ತಿಳಿಸಿದ್ದಾರೆ. ಆಕೆಯ ಜೊತೆಗಾರ ಪುರುಷನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬ್ರೈನ್ ಪ್ರಕಾರ ಆತನಿಗೆ ಕೂಡ ಗಾಯಗಳಾಗಿವೆ. ಆದರೆ, ಡೇವಿಡ್ ಬ್ರೈನ್ ಮಾತ್ರ ಅವರಿಬ್ಬರ ವಿರುದ್ಧ ಯಾವುದೇ ಪೊಲೀಸ್ ದೂರು ದಾಖಲಿಸುವುದಿಲ್ಲ ಎಂದು ತಿಳಿಸಿದ್ದಾರೆ. 'ಅವರಿಬ್ಬರಿಗೆ ಈಗಾಗಲೇ ತಕ್ಕ ಶಿಕ್ಷೆ ದೊರಕಿದೆ' ಎಂದು ಬ್ರೈನ್ ಹೇಳಿದ್ದಾರೆ. ಒಟ್ಟಾರೆ ಕಾರು ಕದಿಯಲು ಹೋದ ಕಳ್ಳಿ ಹೆಬ್ಬೆರಳು ಕಳೆದುಕೊಂಡಿದ್ದಾಳೆ.