ಭಾರತ ವಿಭಜನೆ ದುರಂತ ಕತೆ: 75 ವರ್ಷದ ಬಳಿಕ ಭೇಟಿಯಾದ ಸಹೋದರರು ಮತ್ತೆ ಶಾಶ್ವತವಾಗಿ ದೂರಾದರು..!

By Anusha Kb  |  First Published Jul 10, 2023, 12:34 PM IST

ಭಾರತ ಪಾಕಿಸ್ತಾನ ವಿಭಜನೆಯ ಕಾರಣದಿಂದ ದೂರಾಗಿ ಸುಮಾರು 75 ವರ್ಷಗಳ ನಂತರ ಪರಸ್ಪರ ಭೇಟಿಯಾದ ಸಹೋದರರು ಈಗ ಮತ್ತೆ ದೂರಾಗಿದ್ದಾರೆ. ಸಹೋದರರಲ್ಲಿ ಓರ್ವನ ಸಾವು ಈಗ ಅವರನ್ನು ಮತ್ತೆ ದೂರಾಗುವಂತೆ ಮಾಡಿದೆ.


ನವದೆಹಲಿ: ಭಾರತ ಪಾಕಿಸ್ತಾನ ವಿಭಜನೆಯ ಕಾರಣದಿಂದ ದೂರಾಗಿ ಸುಮಾರು 75 ವರ್ಷಗಳ ನಂತರ ಪರಸ್ಪರ ಭೇಟಿಯಾದ ಸಹೋದರರು ಈಗ ಮತ್ತೆ ದೂರಾಗಿದ್ದಾರೆ. ಸಹೋದರರಲ್ಲಿ ಓರ್ವನ ಸಾವು ಈಗ ಅವರನ್ನು ಮತ್ತೆ ದೂರಾಗುವಂತೆ ಮಾಡಿದೆ. ಪಾಕಿಸ್ತಾನದ ಯುಟ್ಯೂಬರ್ ಒಬ್ಬರ ಸಹಾಯದಿಂದ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪಾಕಿಸ್ತಾನದ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನಲ್ಲಿ ಇಬ್ಬರು ಸಹೋದರರು ಭೇಟಿಯಾಗಿದ್ದರು. 75 ವರ್ಷಗಳ  ನಂತರದ ಇವರ ಭಾವುಕ ಪುನರ್ಮಿಲನದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಅನೇಕರು ಈ ವೀಡಿಯೋ ನೋಡಿ ಭಾವುಕರಾಗಿದ್ದರು. ಆದರೆ ಈಗ ಈ ಸಹೋದರರಲ್ಲಿ ಒಬ್ಬರು ಕಾಲನ ಕರೆಗೆ ಓಗೊಟ್ಟು ಹೊರಟು ಹೋಗಿದ್ದು, ಮತ್ತೆ ಸಹೋದರರು ದೂರಾಗಿದ್ದಾರೆ. 

ಭಾರತ ಹಾಗೂ ಪಾಕಿಸ್ತಾನ ವಿಭಜನೆಯಾಗಿ ಬರೋಬ್ಬರಿ 75 ವರ್ಷಗಳ ನಂತರ ಅಂದು ದೂರಾಗಿದ್ದ ಸಹೋದರರಾದ ಸಾದೀಕ್  ಖಾನ್ (Sadiq Khan) ಹಾಗೂ ಸಿಕ್ಕಾ ಖಾನ್ (Sikka Khan) ಮತ್ತೆ  ಪರಸ್ಪರ ಭೇಟಿಯಾಗಿದ್ದರು. ಕಳೆದ ವರ್ಷ ಜನವರಿ 10 ರಂದು ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ  ( Pakistan’s Kartarpur) ಗುರುದ್ವಾರ್ ದರ್ಬಾರ್ ಸಾಹೀಬ್‌ ( Gurdwara Darbar Sahib)  ಈ ಸಹೋದರರ ಭಾವುಕ ಪುನರ್ಮಿಲನಕ್ಕೆ ಸಾಕ್ಷಿಯಾಗಿತ್ತು.  ಆದರೆ ಈಗ ಇವರಿಬ್ಬರಲ್ಲಿ  ಒಬ್ಬರು ಸಾವಿಗೀಡಾಗಿದ್ದಾರೆ.  ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಫೈಸಲಾಬಾದ್‌ನಲ್ಲಿ ವಾಸವಿದ್ದ ಸಾದೀಕ್ ಖಾನ್ ನಿಧನರಾಗಿದ್ದು, ಅವರಿಗೆ 81 ವರ್ಷ ವಯಸ್ಸಾಗಿತ್ತು. ಇವರ ಸಹೋದರ ಸಿಕ್ಕಾಖಾನ್ ಭಾರತದ ಪಂಜಾಬ್‌ನ ಅಮೃತಸರದಲ್ಲಿ ವಾಸ ಮಾಡುತ್ತಿದ್ದಾರೆ. 

Tap to resize

Latest Videos

ದೇಶ ವಿಭಜನೆಯ ಗೋಳು: 74 ವರ್ಷಗಳ ಬಳಿಕ ಮತ್ತೆ ಸಹೋದರರ ಪುನರ್ಮಿಲನ

ಸಹೋದರನ ಸಾವಿನಿಂದ ಭಾರತದಲ್ಲಿರುವ ಸಿಕ್ಕಾ ಖಾನ್ ದುಃಖಿತರಾಗಿದ್ದು,  ನಮ್ಮ ಮನೆಯಲ್ಲಿ ಮದುವೆಗೆ ಸಿದ್ಧತೆ ನಡೆಸಿದ್ದೆವು, ಜೂನ್‌ನಲ್ಲಿ ಸಹೋದರ ಸಾದೀಕ್‌ಗೆವೀಡಿಯೋ ಕರೆ ಮಾಡಿದ್ದೆವು. ಆಗ ಆತ ನೋಡುವುದಕ್ಕೆ ಚೆನ್ನಾಗಿಯೇ ಇದ್ದ, ನಾನು ಆತನನ್ನು ಭಾರತಕ್ಕೆ ಬರುವಂತೆ ಕರೆದೆ. ಈ ವೇಳೆ ಆತ ಬೇಸಿಗೆ ಕಳೆಯಲಿ ನಂತರ ಬರುವುದಾಗಿ ಹೇಳಿದ, ಆದರೆ ಈಗ ಆತ ಹೊರಟು ಹೋಗಿದ್ದಾನೆ. ಅದೇ ನಮ್ಮ ಕೊನೆಯ ಕರೆಯಾಗಿರಬಹುದು ಎಂದು ನಾನು ಯೋಚಿಸಿಯೂ ಇರಲಿಲ್ಲ ಎಂದು ಭಾರತದಲ್ಲಿರುವ 78 ವರ್ಷದ ಸಹೋದರ ಸಿಕ್ಕಾಖಾನ್  ಕಣ್ಣೀರಿಟ್ಟಿದ್ದಾರೆ. 

ಜುಲೈ 4 ರಂದು ಸಾದಿಕ್ ನಿಧನರಾಗಿದ್ದು,  ಸಹೋದರ ಸಿಕ್ಕಾ ಖಾನ್‌ಗೆ ಇನ್ನು ಈ ವಿಚಾರವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ,  1947ರಲ್ಲಿ ಭಾರತ ಪಾಕಿಸ್ತಾನ ವಿಭಜನೆ ವೇಳೆ  ಈ ಸಹೋದರರು ಬೇರ್ಪಟಿದ್ದರು. ಇವರು ನಂತರ ಕಳೆದ ವರ್ಷ ದೇಶ ವಿಭಜನೆಯ 75 ವರ್ಷಗಳ ನಂತರ ಮತ್ತೆ ಭೇಟಿಯಾಗಿದ್ದರು. ಇವರ ಈ ಸ್ಟೋರಿಯನ್ನು ಭಾರತ ಪಾಕಿಸ್ತಾನ ಮಾತ್ರವಲ್ಲದೇ ಜಾಗತಿಕ ಮಟ್ಟದ ಹಲವು ಪ್ರತಿಕೆಗಳು ಪ್ರಕಟಿಸಿದ್ದವು. ಪಾಕಿಸ್ತಾನವನ್ನು ಭಾರತದಿಂದ ಬೇರ್ಪಡಿಸಿದಾಗ ದೂರವಾದ ಪೂರ್ವ ಮತ್ತು ಪಶ್ಚಿಮ ಪಂಜಾಬ್‌ನ ಹಲವು ಕುಟುಂಬಗಳ ದುಃಖವನ್ನು ಈ ಫೋಟೋ ಸಾಂಕೇತಿಸಿತ್ತು. 

Partition: ಸ್ನೇಹಿತರನ್ನು 7 ದಶಕದ ಬಳಿಕ ಒಂದುಗೂಡಿಸಿದ Kartarpur Corridor!

ಪಾಕಿಸ್ತಾನದ ಫೈಸಲಾಬಾದ್‌ನ (Faisalabad) ಹೊರವಲಯದಲ್ಲಿರುವ ಬೋಗ್ರಾ (Bogra) ನಿವಾಸಿಯಾದ 81 ವರ್ಷದ ಸಾದೀಕ್ 1947ರ ಬೇಸಿಗೆಯಲ್ಲಿ ತಾವು 10 ವರ್ಷದವರಿರುವಾಗ ತಮ್ಮ ತಂದೆಯೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದರು.  ಈ ವೇಳೆ ಇವರ ಕಿರಿತ ಸಹೋದರ ಸಿಕ್ಕಾ ಖಾನ್ ಹಾಗೂ ತಾಯಿ ಭಾರತದ ಪಂಜಾಬ್‌ನಲ್ಲೇ ಉಳಿದರು. ಸಾಧಿಕ್ ಅವರ ತಂದೆ ನಂತರ ಪಾಕಿಸ್ತಾನದಲ್ಲಿ ನಡೆದ ದಂಗೆಯಲ್ಲಿ ಸಾವನ್ನಪ್ಪಿದ್ದರು. ಹೀಗಾಗಿ ಸಾದೀಕ್ ಅವರನ್ನು ಅವರ ಚಿಕ್ಕಪ್ಪ ಸಲಹಿದ್ದರು ಎಂದು ಈ ಹಿಂದೆ ಯೂಟ್ಯೂಬರ್‌ಗೆ ನೀಡಿದ ಸಂದರ್ಶನದಲ್ಲಿ ಸಾಧಿಕ್ ಹೇಳಿದ್ದರು, ಸಾಧಿಕ್ ಅಲ್ಲಿ ಮದುವೆಯಾಗಿದ್ದು ಅವರಿಗೆ ಮಕ್ಕಳು ಮೊಮ್ಮಕ್ಕಳಿದ್ದಾರೆ. 

ಆದರೆ ಭಾರತದಲ್ಲೇ ಉಳಿದ ಸಿಕ್ಕಾ ಖಾನ್ ಅವರ ತಾಯಿ ಭಾರತ ವಿಭಜನೆಯಾದ ಕೆಲ ವರ್ಷಗಳ ನಂತರ ಸಾವಿಗೆ ಶರಣಾಗಿದ್ದರು. ಇತ್ತ ಸಿಕ್ಕಾ ಖಾನ್ ಮದುವೆಯೂ ಆಗದೇ ಅವಿವಾಹಿತರಾಗಿಯೇ ಉಳಿದಿದ್ದಾರೆ.   ಪಾಕಿಸ್ತಾನದ ಯೂಟ್ಯೂಬ್ ನಾಸೀರ್ ಧಿಲ್ಲನ್ ಅವರು 2019ರಲ್ಲಿ ಈ ಸಹೋದರರ ಕತೆಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಜಗತ್ತಿನ ಮುನ್ನೆಲೆಗೆ ಬಂದಿತ್ತು. 

ಮತ್ತೊಮ್ಮೆ ನಮ್ಮ ಮಧ್ಯೆ ಗಡಿ ಅಡ್ಡ ನಿಂತಿದೆ. ನನಗೆ ಆತನ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದಿರುವ ಸಿಕ್ಕಾ, ಮುಂದಿನ ವಾರ ಸಹೋದರನಿಗೆ ಸಲ್ಲಿಸುವ ಅಂತಿಮ ನಮನದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಸಿಕ್ಕಾಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪಾಕಿಸ್ತಾನ್ ಹೈ ಕಮೀಷನರ್ ವೀಸಾ ನೀಡಿದೆ ಎಂದು ಯೂಟ್ಯೂಬರ್ ದಿಲ್ಲನ್ ಖಚಿತಪಡಿಸಿದ್ದಾರೆ. 

 

click me!