ರಾಣಿ ಎಲಿಜಬೆತ್ ಶವ ಪೆಟ್ಟಿಗೆ ಮುಂದೆ ಕುಸಿದು ಬಿದ್ದ Royal guard: ವಿಡಿಯೋ ವೈರಲ್

By Anusha KbFirst Published Sep 15, 2022, 1:19 PM IST
Highlights

ರಾಣಿಯ ಶವಪೆಟ್ಟಿಗೆಗೆ ಕಾವಲಾಗಿರುವ ರಾಯಲ್ ಗಾರ್ಡ್ಸ್ ತಂಡದ ಗಾರ್ಡ್ ಒಬ್ಬರು ಕುಸಿದು ಬಿದ್ದ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಇಂಗ್ಲೆಂಡ್ ಅನ್ನು ಬರೋಬ್ಬರಿ 70 ವರ್ಷಗಳ ಸುಧೀರ್ಘ ಕಾಲ ಆಳಿದ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಾಣಿ ಎಲಿಜಬೆತ್ ಅವರು ತೀರಿಕೊಂಡು ವಾರವೇ ಕಳೆದಿದೆ. ಸೆಪ್ಟೆಂಬರ್ 8 ರಂದು ರಾಣಿ ಇಹಲೋಕ ತ್ಯಜಿಸಿದ್ದರು. ಆದರೆ ಮೃತಪಟ್ಟು ಒಂದು ವಾರ ಕಳೆದರೂ ರಾಣಿಯ ಅಂತ್ಯಸಂಸ್ಕಾರ ಇನ್ನೂ ನಡೆದಿಲ್ಲ. ರಾಜಮನೆತನದ ಸಾಲು ಸಾಲು ಸಂಪ್ರದಾಯಗಳು ಇದಕ್ಕೆ ಕಾರಣ. ಈ ನಡುವೆ ರಾಣಿಯ ಶವಪೆಟ್ಟಿಗೆಗೆ ಕಾವಲಾಗಿರುವ ರಾಯಲ್ ಗಾರ್ಡ್ಸ್ ತಂಡದ ಗಾರ್ಡ್ ಒಬ್ಬರು ಕುಸಿದು ಬಿದ್ದ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಅಗಲಿದ ತಮ್ಮ ನೆಚ್ಚಿನ ರಾಣಿ ಎಲಿಜಬೆತ್‌ಗೆ ಅಂತಿಮ ನಮನ ಸಲ್ಲಿಸಲು ಇಂದು ವೆಸ್ಟ್ ಮಿನಿಸ್ಟರ್ ಹಾಲ್ (Westminster Hall) ಮುಂದೆ ನೆರೆದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಇದು ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಗಮನ ಸೆಳೆದಿದ್ದು, ಎಲ್ಲರೂ ಕ್ಷಣಕಾಲ ಆಘಾತಕ್ಕೊಳಗಾಗಿದ್ದಾರೆ. ಬ್ರಿಟಿಷ್ ರಾಜಮನೆತನಕ್ಕೆ ಭದ್ರತೆ ಒದಗಿಸುವ ರಾಯಲ್ ಗಾರ್ಡ್‌ಗಳು ರಾಣಿ ಎಲಿಜಬೆತ್ (Queen Elizabeth) ಶವಪೆಟ್ಟಿಗೆ ಮುಂದೆ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದಾರೆ. ಹೀಗೆ ಭದ್ರತೆಗೆ ನಿಂತಿದ್ದ ರಾಯಲ್ ಗಾರ್ಡ್ ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಇದು ಅಲ್ಲಿ ರಾಣಿಗೆ ಗೌರವ ಸಲ್ಲಿಸುವ ಸಲುವಾಗಿ ನೆರೆದಿದ್ದ ಸಾವಿರಾರು ಜನರನ್ನು ಆಘಾತಕ್ಕೊಳಗಾಗುವಂತೆ ಮಾಡಿದೆ. ಈ ಘಟನೆಯ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

NOW - Royal guard at the Queen's coffin has collapsed.pic.twitter.com/39qduRuX0u

— Disclose.tv (@disclosetv)

 

ವಿಡಿಯೋದಲ್ಲಿ ಕಾಣಿಸುವಂತೆ ರಾಣಿ ಶವಪೆಟ್ಟಿಗೆ ಮುಂದೆ ನಿಂತಿದ್ದ ರಾಯಲ್ ಗಾರ್ಡ್ (Royal guard) ಒಮ್ಮೆಗೆ ಕುಸಿದು ಬಿದ್ದಿದ್ದು, ಅದರ ಕೂಡಲೇ ಅಲ್ಲಿದ್ದ ಇತರ ಗಾರ್ಡ್‌ಗಳು ಆತನ ನೆರವಿಗೆ ಧಾವಿಸುತ್ತಾರೆ. ಪ್ರಜ್ಞೆ ತಪ್ಪಿದ ಗಾರ್ಡ್ ಅವರನ್ನು ಕೂಡಲೇ ಅಲ್ಲಿಂದ ಕರೆದೊಯ್ಯಲಾಗುತ್ತದೆ. ವರದಿಗಳ ಪ್ರಕಾರ ರಾಯಲ್ ಗಾರ್ಡ್‌ಗಳು ಸರದಿ ಪ್ರಕಾರ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.  ಈ ವಿಡಿಯೋ ನೋಡಿದ ಅನೇಕರು ಆಘಾತ ವ್ಯಕ್ತಪಡಿಸಿದ್ದು, ಈ ಬಾಡಿಗಾರ್ಡ್ (Bodyguard) ನಿರಂತರ ಕೆಲಸದಿಂದ ಬಸವಳಿದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ರಾಣಿ ಎಲಿಜಬೆತ್ ಅವರ ಶವವನ್ನು ಕ್ಯಾಟಫಾಲ್ಕ್ (catafalque) ಎಂದು ಕರೆಯುವ ಸ್ಥಳದಲ್ಲಿ ಇರಿಸಲಾಗಿದ್ದು, ಇದನ್ನು ಸಾರ್ವಭೌಮ ಬಾಡಿಗಾರ್ಡ್‌ಗಳು ಕಾಯುತ್ತಿರುತ್ತಾರೆ.

ಪತ್ರದಲ್ಲೇನಿದೆ: ರಾಣಿ ಬರೆದ ರಹಸ್ಯ ಪತ್ರ ಓದಲು ಕಾಯಬೇಕು ಇನ್ನೂ 63 ವರ್ಷ
ಬ್ರಿಟನ್‌ ರಾಣಿ ಎಲಿಜಬೆತ್‌-2 ಅವರ ಅಂತ್ಯಸಂಸ್ಕಾರ ಸೋಮವಾರ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ನಡೆಯಲಿದ್ದು, ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ವಿವಿಧ ದೇಶಗಳ ರಾಷ್ಟ್ರಪತಿ, ಪ್ರಧಾನಿ, ರಾಜ, ರಾಣಿಯರು ಸೇರಿ 500ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಭಾರತವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿನಿಧಿಸಲಿದ್ದಾರೆ. ಈ ನಿಟ್ಟಿನಲ್ಲಿ ದ್ರೌಪದಿ ಮುರ್ಮು ಅವರು 3 ದಿನಗಳ ಕಾಲ ಬ್ರಿಟನ್‌ಗೆ ಭೇಟಿ ನೀಡಲಿದ್ದಾರೆ. ಅಗಮಿತ ಗಣ್ಯರಿಗಾಗಿ ಕಿಂಗ್‌ ಚಾರ್ಲ್ಸ್ ಸೆಪ್ಟೆಂಬರ್‌ 18ರಂದು ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸೆಪ್ಟೆಂಬರ್‌ 19ರಂದು ಬೆಳಗ್ಗೆ 11 ಗಂಟೆಗೆ ರಾಣಿಯ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯಲಿದೆ. 57 ವರ್ಷದ ಬಳಿಕ ಮೊದಲ ಬಾರಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತಿದೆ. 1965ರಲ್ಲಿ ಬ್ರಿಟನ್‌ ಯುದ್ಧದ ಸಮಯದಲ್ಲಿ ಪ್ರಧಾನಿಯಾಗಿದ್ದ ವಿನ್‌ಸ್ಟನ್‌ ಚರ್ಚಿಲ್‌ ಅವರಿಗೆ ಸರ್ಕಾರಿ ಅಂತ್ಯಕ್ರಿಯೆಯನ್ನು ಮಾಡಲಾಗಿತ್ತು. 

ರಾಣಿ ಅಗಲಿಕೆಯಿಂದ ಅನಾಥವಾದ ಕೊರ್ಗಿ ಶ್ವಾನಗಳು...

ರಾಣಿ ಎಲಿಜಬೆತ್‌ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಿರುವವರಿಗೆ ಬ್ರಿಟನ್‌ ಸರ್ಕಾರ ಕೆಲವು ಸಲಹೆಗಳನ್ನು ರವಾನಿಸಿದೆ. ಅಂತ್ಯಕ್ರಿಯೆಗೆ ಆಗಮಿಸುವ ಜಾಗತಿಕ ನಾಯಕರುಗಳಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಖಾಸಗಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸದಂತೆ ಸೂಚಿಸಲಾಗಿದೆ. ರಾಣಿಯ ಅಂತ್ಯಕ್ರಿಯೆ ಸೆ.19ರಂದು ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ನಡೆಯಲಿದೆ. ಇಲ್ಲಿಗೆ ಆಗಮಿಸಲು ಪಶ್ಚಿಮ ಲಂಡನ್‌ನಿಂದ ಬಸ್‌ ವ್ಯವಸ್ಥೆ ಇದೆ. ಅಲ್ಲದೇ ವಿದೇಶಗಳಿಂದ ಆಗಮಿಸುವವರು ವಾಣಿಜ್ಯ ವಿಮಾನಗಳಲ್ಲಿ ಆಗಮಿಸುವಂತೆ ಕೋರಲಾಗಿದೆ. ಅಲ್ಲದೇ ಸ್ವಂತದ ಕಾರುಗಳನ್ನು ಸಹ ಬಳಸದೇ ಸಾರ್ವಜನಿಕ ಸಾರಿಗೆ ಬಳಸುವಂತೆಯೂ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 

click me!