Pakistan cop gets Rs 10 crore: ಪಾಕಿಸ್ತಾನದ ಕರಾಚಿಯ ಪೊಲೀಸ್ ಅಧಿಕಾರಿಯ ಖಾತೆಗೆ ಇದ್ದಕ್ಕಿದ್ದಂತೆ 10 ಕೋಟಿ ರೂಪಾಯಿ ಜಮೆಯಾಗಿವೆ. ಇಷ್ಟು ದೊಡ್ಡ ಮೊತ್ತವನ್ನು ಯಾರು ಹಾಕಿದ್ದಾರೆ ಎಂಬುದನ್ನು ತಿಳಿಯಲು ವಿಚಾರಣೆ ಅರಂಭವಾಗಿದೆ.
ನವದೆಹಲಿ: ಪ್ಯಾಂಟ್ ಅಥವಾ ಶರ್ಟ್ ಜೇಬೊಳಗಳೋ ಅಥವಾ ತರಕಾರಿ ಬ್ಯಾಗಿನಲ್ಲೋ ಎಂದೋ ಮರೆತು ಹೋದ 50 - 100 ರೂಪಾಯಿ ಇನ್ನೊಂದು ದಿನ ಸಿಕ್ಕಾಗ ಆಹಾ ಎಂಬ ಸಂತಸವಾಗುತ್ತದೆ. ಏನೋ ದೊಡ್ಡ ಲಾಟರಿ ಗೆದ್ದಷ್ಟೇ ಖುಷಿಯ ಅನುಭವವಾಗುತ್ತದೆ. ಅಂತದ್ದರಲ್ಲಿ ಇದ್ದಕ್ಕಿದ್ದಂತೆ 10 ಕೋಟಿ ರೂಪಾಯಿ ನಿಮ್ಮ ಖಾತೆಗೆ ಜಮೆಯಾದರೆ ಕಥೆ ಹೇಗಿರಬಹುದು. ಹೌದು ಇದು ನಿಜಕ್ಕೂ ಪಾಕಿಸ್ತಾನದಲ್ಲಿ ನಡೆದಿರುವ ಘಟನೆ. ಪೊಲೀಸ್ ಇಲಾಖೆಯ ಸಂಬಳ ಭಾರತದಂತೆಯೇ ಪಾಕಿಸ್ತಾನದಲ್ಲೂ ಕಡಿಮೆಯೇ. ಅಷ್ಟೋ ಇಷ್ಟೋ ಸಾವಿರ ರೂಪಾಯಿಗಳ ಸಂಬಳ ಪಡೆಯುವ ಅಧಿಕಾರಿಯೊಬ್ಬರಿಗೆ ಇದ್ದಕ್ಕಿದ್ದಂತೆ 10 ಕೋಟಿ ಸಿಕ್ಕಿದೆ. ಇದರಿಂದ ಅವರು ಆಶ್ಚರ್ಯಚಕಿತರಾಗಿದ್ದಾರೆ. ಆದರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ನಾಣ್ಣುಡಿಯಂತೆ ಬ್ಯಾಂಕ್‌ನವರು ಖಾತೆಯನ್ನು ಫ್ರೀಜ್ ಮಾಡಿದ್ದಾರೆ. ಈ ಹಣ ಎಲ್ಲಿಂದ ಬಂತು, ಯಾಕೆ ಬಂತು ಎಂಬುದು ಪೊಲೀಸ್ ಅಧಿಕಾರಿಗೂ ತಿಳಿದಿಲ್ಲ, ಬ್ಯಾಂಕ್‌ನವರಿಗೂ ತಿಳಿದಿಲ್ಲ.
ಆಮಿರ್ ಗೋಪಾಂಗ್ ಎಂಬ ಪೊಲೀಸ್ ಅಧಿಕಾರಿಗೆ ಅವರ ಬ್ಯಾಂಕ್‌ನಿಂದ ಕರೆ ಬಂದಿದೆ. ನಿಮ್ಮ ಖಾತೆಗೆ 10 ಕೋಟಿ ರೂಪಾಯಿ ಜಮೆಯಾಗಿದೆ. ಅದರ ಮೂಲವೇನು. ಯಾರು ಕಳಿಸಿದ್ದಾರೆ ಅಷ್ಟೊಂದು ದೊಡ್ಡ ಮೊತ್ತ ಎಂದು ಬ್ಯಾಂಕ್ ಅಧಿಕಾರಿ ಕೇಳಿದ್ದಾರೆ. ಆಗಲೇ ಆಮಿರ್ ಗೋಪಾಂಗ್‌ಗೂ ತಮ್ಮ ಖಾತೆಗೆ ಅಷ್ಟು ದುಡ್ಡು ಬಂದಿದೆ ಎಂಬ ವಿಚಾರ ತಿಳಿದಿದ್ದು. ಪಾಕಿಸ್ತಾನದ ಕರಾಚಿ ಪೊಲೀಸ್ ಠಾಣೆಯಲ್ಲಿ ಆಮಿರ್ ಗೋಪಾಂಗ್ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಸಾವಿರಗಳನ್ನು ಮಾತ್ರ ನೋಡಿದ್ದ ಆಮಿರ್‌ಗೂ ಒಂದು ಕ್ಷಣ ಇದನ್ನು ನಂಬಲು ಸಾಧ್ಯವಾಗಿಲ್ಲ. ಇದಾದ ನಂತರ ಬ್ಯಾಂಕ್ ಅಧಿಕಾರಿಗಳು ಎಟಿಎಂ ಕಾರ್ಡ್ ಬ್ಲಾಕ್ ಮಾಡಿ ಖಾತೆಯನ್ನೂ ಫ್ರೀಕ್ ಮಾಡಿದ್ದಾರೆ.
"ಅಷ್ಟೆಲ್ಲಾ ಹಣ ನನ್ನ ಖಾತೆಗೆ ಬಂದಿದೆ ಎಂದಾಗ ನನಗೆ ಆಘಾತವಾಯಿತು. ಕೆಲ ಸಾವಿರಗಳನ್ನು ಬಿಟ್ಟರೆ ನನ್ನ ಖಾತೆಯಲ್ಲಿ ಇಷ್ಟು ದೊಡ್ಡ ಮಟ್ಟದ ಹಣವನ್ನು ಎಂದೂ ನೋಡಿಲ್ಲ," ಎಂದು ಗೋಪಾಂಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಈ ಹಸುವಿಗೆ ಇದೆಂಥಾ ಅದೃಷ್ಟ, 1 ಕೋಟಿಯ ಕೊಟ್ಟಿಗೆಯಲ್ಲಿ ವಾಸಿಸುವ 'ರಾಧಾ'!
ಖಾತೆಗೆ 10 ಕೋಟಿ ಬಂದಿರುವುದನ್ನು ಆಮಿರ್ ನೋಡಿರಲಿಲ್ಲ. "ನನಗೆ ಈ ವಿಚಾರ ಗೊತ್ತೇ ಇರಲಿಲ್ಲ. ಬ್ಯಾಂಕ್‌ನವರು ಕರೆ ಮಾಡಿದ ನಂತರ ತಿಳಿಯಿತು," ಎಂದಿ ಪಿಟಿಐಗೆ ಆಮಿರ್ ಮಾಹಿತಿ ನೀಡಿದ್ದಾರೆ. ಇದಾದ ನಂತರ ಆಮಿರ್ ದುಡ್ಡು ಡ್ರಾ ಅಥವಾ ವರ್ಗಾವಣೆ ಮಾಡುವುದರೊಳಗೆ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿದೆ. ಈಗಾಗಲೇ ಘಟನೆ ಸಂಬಂಧ ತನಿಖೆ ಆರಂಭವಾಗಿದ್ದು, ಎಲ್ಲಿಂದ ಇಷ್ಟೊಂದು ಹಣ ಆಮಿರ್ ಖಾತೆಗೆ ಬಂತು ಎಂಬುದರ ಮೂಲ ಹುಡುಕಲಾಗುತ್ತಿದೆ. ಸಂಬಂಧವೇ ಇಲ್ಲದೇ 10 ಕೋಟಿ ರೂಪಾಯಿ ಇವರ ಖಾತೆಗೆ ಬಂದು ತಲುಪಿದ್ದು ಹೇಗೆ. ತಪ್ಪಿನಿಂದ ಇಷ್ಟೊಂದು ದೊಡ್ಡ ಹಣವನ್ನು ಯಾರಾದರೂ ಟ್ರಾನ್ಸ್‌ಫರ್ ಮಾಡಿದ್ದಾರ. ಅಥವಾ ಬೇಕೆಂದೇ ಹಾಕಲಾಗಿದೆಯಾ. ಯಾವುದಾದರೂ ಪ್ರಕರಣದಲ್ಲಿ ಆರೋಪಿಗೆ ಸಹಾಯ ಮಾಡಿದ್ದಕ್ಕಾಗಿ ಕಿಕ್‌ಬ್ಯಾಕ್ ಕೊಡಲಾಗಿದೆಯಾ, ಎಂಬೆಲ್ಲಾ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ.
ಪಾಕಿಸ್ತಾನದ ಲರ್ಕಾನಾ ಮತ್ತು ಸುಕ್ಕೂರ್‌ನಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳ ಖಾತೆಗೆ ಇದ್ದಕ್ಕಿದ್ದಂತೆ ಕೋಟ್ಯಾಂತರ ರೂಪಾಯಿ ಜಮೆಯಾಗಿದೆ. ಲರ್ಕಾನದಲ್ಲಿ ಮೂವರು ಪೊಲೀಸ್ ಅಧಿಕಾರಿಗಳಿಗೆ ತಲಾ ಐದು ಕೋಟಿ ರೂಪಾಯಿ ಹಾಕಲಾಗಿದ್ದು, ಸುಕ್ಕೂರ್‌ನಲ್ಲಿ ಮತ್ತೊಬ್ಬ ಅಧಿಕಾರಿಗೆ ಐದು ಕೋಟಿ ರೂಪಾಯಿ ಜಮೆಮಾಡಲಾಗಿದೆ. ಇವುಗಳಲ್ಲೂ ಯಾವುದೇ ಅಧಿಕಾರಿಗೆ ಯಾರು ಹಾಕಿದ್ದಾರೆ ಎಂಬುದು ತಿಳಿದಿಲ್ಲ. ಈ ಎಲ್ಲವನ್ನೂ ಸಮಗ್ರವಾಗಿ ತನಿಖೆ ಮಾಡಲಾಗುತ್ತಿದೆ.
ಇದನ್ನೂ ಓದಿ: 'ಪಾಕಿಸ್ತಾನದ ಮೊಗ್ಗಿನ ಮನಸು..' 52 ವರ್ಷದ ಶಿಕ್ಷಕನಿಗೆ ಮನಸ್ಸು ಕೊಟ್ಟ 20 ವರ್ಷದ ವಿದ್ಯಾರ್ಥಿನಿ!
ಆದರೆ ಈ ಅಧಿಕಾರಿಗಳ ಸ್ಥಿತಿ ನೋಡಿದರೆ ಪಾಪ ಅನಿಸುತ್ತಿದೆ. ಕೋಟಿ ಕೋಟಿ ಹಣ ಬಂದ ನಂತರ ಖಾತೆಯೇ ಫ್ರೀಜ್ ಆಗಿದೆ. ಅವರು ಕೂಡಿಟ್ಟ ಅಷ್ಟೋ ಇಷ್ಟೋ ದುಡ್ಡನ್ನೂ ಅವರು ಬಳಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.