Uyghur Muslim In China: ಚೀನಾದಲ್ಲಿ ಎರಡೂವರೆ ಕೋಟಿ ಮುಸ್ಲಿಮರಿದ್ದಾರೆ. ಅದರಲ್ಲಿ ಒಂದು ಕೋಟಿಗೂ ಹೆಚ್ಚು ಉಯಿಘರ್ ಮುಸ್ಲಿಮರು ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿದ್ದಾರೆ.
ಸರ್ವಾಧಿಕಾರಿ ಹಿಟ್ಲರ್ ನ ನಾಜಿಗಳು ಲಕ್ಷಾಂತರ ಯಹೂದಿಗಳ ಮಾರಣಹೋಮ ನಡೆಸಿದಾಗ ಇಡೀ ಜಗತ್ತು, ಮತ್ತೆ ಇಂತಹ ನರಮೇಧ ನಡೆಯಬಾರದು ಅಂತ ಪ್ರಾರ್ಥಿಸಿತ್ತು. ಸಾಮೂಹಿಕ ನರಮೇಧಗಳು ನಡೆದಾಗ ಇಡೀ ಜಗತ್ತೇ ಒಟ್ಟಾಗಿ ನಿಂತು ಅದನ್ನ ಪ್ರತಿರೋಧಿಸಬೇಕು ಅನ್ನೋ ನಿರ್ಧಾರಕ್ಕೆ ಬಂದಿತ್ತು ಇಡೀ ಜಗತ್ತು. ಆದ್ರೆ ಇವತ್ತು ಚೀನಾದಲ್ಲಿ ನಿತ್ಯ ಉಯಿಘರ್ ಮುಸ್ಲಿಮರ ನರಮೇಧ ನಡೆಯುತ್ತಲೇ ಇದೆ. ಆದ್ರೆ ಇಡೀ ಜಗತ್ತು ಮೌನವಾಗಿದೆ.
ಕ್ಸಿನ್ ಜಿಯಾಂಗ್. ಇದು ಚೀನಾದ ಅತಿದೊಡ್ಡ ಪ್ರಾಂತ್ಯ. ಉಯಿಘರ್ ಮುಸ್ಲಿಮರ ತವರಿದು. ಅವರು ಚೀನಿಯರಂತೆ ಕಾಣುವುದಿಲ್ಲ, ಅವರ ಜತೆ ಗುರುತಿಸಿಕೊಳ್ಳಲೂ ಬಯಸುವುದಿಲ್ಲ. ಅವರದ್ದೇ ಆದ ಸಂಸ್ಕೃತಿ, ಭಾಷೆಯನ್ನ ಹೊಂದಿದ್ದಾರೆ. ಆದ್ರೆ ಅವರನ್ನ ಬಲವಂತವಾಗಿ ಚೀನಿಯರನ್ನಾಗಿಸುವ ಪ್ರಯತ್ನವನ್ನ ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ಮಾಡುತ್ತಿದೆ.
ಇರಾನ್ ದೇಶದಷ್ಟು ದೊಡ್ಡದಾದ ಪ್ರಾಂತ್ಯ ಇದು. ಪಾಕಿಸ್ತಾನದ ಒಂದೂವರೆ ಪಟ್ಟು ದೊಡ್ದದು. ಬಾಂಗ್ಲಾದೇಶಕ್ಕಿಂತ 12 ರಷ್ಟು ದೊಡ್ಡದು. ರಷ್ಯಾ ಮತ್ತು ಭಾರತವನ್ನ ಬಿಟ್ರೆ, ಬಹುಸಂಖ್ಯಾತ ಮುಸ್ಲಿಂ ಬಾಹುಳ್ಯದ ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ ಕ್ಸಿನ್ ಜಿಯಾಂಗ್.
undefined
20 ನೇ ಶತಮಾನದ ಆರಂಭದಲ್ಲಿ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿದ್ದ ಉಯಿಘರ್ ಗಳು ತಮ್ಮದು ಸ್ವತಂತ್ರ್ಯ ದೇಶ ಎಂದು ಘೋಷಿಸಿಕೊಂಡರು. ಚೀನಾದಲ್ಲಿ ಮಾವೋ ಜೆಡಾಂಗ್ ಅಧಿಕಾರದಲ್ಲಿದ್ದಾಗ ಸೋವಿಯತ್ ರಷ್ಯಾ ನಿಮ್ಮ ಮೇಲೆ ಆಕ್ರಮಣ ಮಾಡುತ್ತೆ, ನಾವು ನಿಮ್ಮನ್ನು ರಕ್ಷಣೆ ಮಾಡ್ತೀವಿ ಅಂತ ತನ್ನ ಸೇನೆಯನ್ನ ತಂದು ಈ ಪ್ರಾಂತ್ಯದಲ್ಲಿ ನಿಲ್ಲಿಸಿದ. ಅದಾದ ಮೇಲೆ ಇಡೀ ಪ್ರಾಂತ್ಯವನ್ನೇ ನುಂಗಿಹಾಕಿತು ಚೀನಾ. ಈ ಸಮಯದಲ್ಲಿ ಕ್ಸಿನ್ ಜಿಯಾಂಗ್ ಪ್ರಾಂತ್ಯದ ಒಟ್ಟು ಜನಸಂಖ್ಯೆಯಲ್ಲಿ 76 ಪರ್ಸೆಂಟ್ ನಷ್ಟು ಉಯಿಘರ್ ಮುಸ್ಲಿಮರಿದ್ದರು. ಕೇವಲ 6 ಪರ್ಸೆಂಟ್ ಅಷ್ಟೇ ಹಾನ್ ಚೀನಿಯರಿದ್ದರು. ಆದ್ರೆ ಇವತ್ತು ಇಲ್ಲಿ ಉಯಿಘರ್ ಗಳ ಪ್ರಮಾಣ 40 ಪರ್ಸೆಂಟ್ ಗೆ ಇಳಿದಿದ್ರೆ, ಹಾನ್ ಚೀನೀಯರ ಜನಸಂಖ್ಯೆ ಶೇ.42 ರಷ್ಟಿದೆ. ಇಲ್ಲಿ ಚೀನಾ ನಿರಂತರವಾಗಿ ಉಯಿಘರ್ ಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಮಾರಣಹೋಮ ನಡೆಸಿಕೊಂಡು ಬರುತ್ತಿದೆ. ಇಡೀ ಉಯಿಘರ್ ಜನಾಂಗ ಮತ್ತು ಸಂಸ್ಕೃತಿ ಎರಡನ್ನೂ ನಾಶ ಮಾಡುವ ಎಲ್ಲ ಪ್ರಯತ್ನಗಳನ್ನೂ ಚೀನಾ ಮಾಡುತ್ತಿದೆ.
ಚೀನಾದಲ್ಲಿ ಇಸ್ಲಾಂ ಚೈನೀಸ್ ಮಾದರಿಯಲ್ಲಿರಬೇಕು: ಕ್ಸಿ ಜಿನ್‌ಪಿಂಗ್
ಉಯಿಘರ್‌ಗಳು ಟರ್ಕಿಯಿಂದ ವಲಸೆ ಬಂದ ಜನಾಂಗ. ತಮ್ಮನ್ನು ಸಾಂಸ್ಕೃತಿಕವಾಗಿ ಮತ್ತು ಜನಾಂಗೀಯವಾಗಿ ಮಧ್ಯ ಏಷ್ಯಾದ ರಾಷ್ಟ್ರಗಳಿಗೆ ಹತ್ತಿರವೆಂದು ಗುರುತಿಸಿಕೊಳ್ಳುತ್ತಾರೆ. ಬಹುತೇಕ ಉಯಿಘರ್ ಮುಸ್ಲಿಮರು ಚೀನಾದ ಕ್ಸಿನ್ ಜಿಯಾಂಗ್ ನಲ್ಲೇ ವಾಸ ಮಾಡ್ತಾರೆ. ನೂರಾರು ವರ್ಷಗಳ ಹಿಂದೆ ಐತಿಹಾಸಿಕ ಸಿಲ್ಕ್ ರೋಡ್ ಮೂಲಕ ನಡೆಯುತ್ತಿದ್ದ ವ್ಯಾಪಾರ, ವ್ಯವಹಾರದಿಂದಾಗಿ ಈ ಉಯಿಘರ್ ಗಳು ಕ್ಸಿನ್ ಜಿಯಾಂಗ್ ಪ್ರಾಂತ್ಯಕ್ಕೆ ವಲಸೆ ಬಂದಿದ್ದಾರೆ. ಉಯಿಘರ್ ಸಮುದಾಯದ ಒಂದಷ್ಟು ಜನಸಂಖ್ಯೆ ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಕಝಾಕಿಸ್ತಾನದಲ್ಲೂ ಇದ್ದಾರೆ. ಹಲವು ಸಾವಿರ ಉಯಿಘರ್ ಗಳು ಆಸ್ಟ್ರೇಲಿಯಾದಲ್ಲಿಯೂ ಇದ್ದಾರೆ.
ಈ ಪ್ರಾಂತ್ಯವನ್ನ ಐತಿಹಾಸಿಕವಾಗಿ ಉಯಿಘರ್ ಹೆಸರಿನಿಂದಲೇ ಗುರುತಿಸಲಾಗ್ತಿತ್ತು. ಆದ್ರೆ ಚೀನಾ ಸರ್ಕಾರದ ದಾಖಲೆಗಳಲ್ಲಿ ಇದರ ಪ್ರಸ್ತಾಪವೇ ಇಲ್ಲ. ಈ ಪ್ರದೇಶಕ್ಕೆ ಕ್ಸಿನ್ ಜಿಯಾಂಗ್ ಎಂಬ ಹೆಸರಿಟ್ಟಿದೆ ಚೀನಾ. ಇಲ್ಲಿ ಚೀನಾದ ದಬ್ಬಾಳಿಕೆ ಹೇಗಿದೆ ಅಂದ್ರೆ, ಉಯಿಘರ್ ಮುಸ್ಲಿಮರ ಪ್ರತಿಯೊಂದು ನಡೆಯನ್ನೂ ಸರ್ಕಾರವೇ ನಿರ್ಧರಿಸುತ್ತೆ. ಇಲ್ಲಿ ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜ್ ಮಾಡುವಂತಿಲ್ಲ, ಇಲ್ಲಿನ ಮಸೀದಿಗಳಲ್ಲಿ ಆಜಾನ್ ಕೇಳಿಸುವುದಿಲ್ಲ. ಇಲ್ಲಿ ಮುಸ್ಲಿಂ ಮಹಿಳೆಯರು ಬುರ್ಕಾ ಹಾಕುವಂತಿಲ್ಲ. ಉಯಿಘರ್ ಮಹಿಳೆಯರು ಕೇವಲ ಒಂದು ಮಗುವನ್ನು ಹೆರುವುದಕ್ಕೆ ಮಾತ್ರ ಅವಕಾಶವಿದೆ. ಆ ನಂತರ ಬಲವಂತವಾಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತೆ. ರಂಜಾನ್ ತಿಂಗಳಿನಲ್ಲಿ ಇಲ್ಲಿನ ಮುಸ್ಲಿಮರು ಉಪವಾಸ ಮಾಡುವಂತಿಲ್ಲ. ಉಯಿಘರ್ ಮುಸ್ಲಿಮರ ಮೇಲೆ ಎಲ್ಲಿಯವರೆಗೂ ಸರ್ಕಾರದ ಹಸ್ತಕ್ಷೇಪ ಇದೆ ಅಂದ್ರೆ, ತಮ್ಮ ಧರ್ಮ ಗ್ರಂಥಗಳ ಸಂದೇಶವನ್ನೇ ಚೀನಾ ಸರ್ಕಾರದ ಮೂಗಿನ ನೇರಕ್ಕೆ ಬದಲಿಸಿಕೊಳ್ಳಬೇಕು. ಇಲ್ಲಿನ ಮಸೀದಿಗಳಲ್ಲಿ ಚೀನಾದ ಅಧ್ಯಕ್ಷರ ಪೋಟೋಗಳನ್ನ ಹಾಕಿಕೊಳ್ಬೇಕು. ವಾಕ್ ಸ್ವಾತಂತ್ರ್ಯ ಅನ್ನೋದು ಇಲ್ಲಿ ಕನಸಿನ ಮಾತು. ವಾಕ್ ಸ್ವಾತಂತ್ರ್ಯದ ವಿಚಾರ ಬಿಡಿ, ಉಯಿಘರ್ ಮುಸ್ಲಿಮರಿಗೆ ಇಲ್ಲಿ ಬದುಕುವ ಸ್ವಾತಂತ್ರ್ಯವೂ ಇಲ್ಲ.
ಚೀನಾದಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಚೀನೀ ಸೈನಿಕರ ಬಂದೂಕಿನ ಭಯದ ನೆರಳಲ್ಲಿ ಬದುಕುತ್ತಿದ್ದಾರೆ ಇಲ್ಲಿನ ಮುಸ್ಲಿಮರು. ಕಳೆದ ಕೆಲ ವರ್ಷಗಳಲ್ಲಿ ಚೀನಾದ ಕಮ್ಯುನಿಸ್ಟ್ ಸರ್ಕಾರ ಹತ್ತು ಲಕ್ಷಕ್ಕೂ ಹೆಚ್ಚು ಉಯಿಘರ್ ಮುಸ್ಲಿಮರನ್ನ ನಿರ್ದಯವಾಗಿ ಕೊಂದು ಹಾಕಿದೆ. ಚೀನಾದ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಧ್ವನಿಯೆತ್ತುವ ಉಯಿಘರ್ ಮುಸ್ಲಿಮರನ್ನ ಬಂಧಿಸಿ ಕ್ಯಾಂಪ್ ಗಳಲ್ಲಿ ಕೊಳೆಸಲಾಗುತ್ತೆ. ಇದಕ್ಕಾಗಿಯೇ ಚೀನಾ ಸರ್ಕಾರ ಕ್ಸಿನ್ ಜಿಯಾಂಗ್ ನಲ್ಲಿ ನೂರಾರು ಕ್ಯಾಂಪ್ ಗಳನ್ನ ನಿರ್ಮಾಣ ಮಾಡಿದೆ. ಈ ಕಾನ್ಸಂಟ್ರೇಷನ್ ಕ್ಯಾಂಪ್ ಗಳಲ್ಲಿ ಲಕ್ಷಾಂತರ ಉಯಿಘರ್ ಗಳನ್ನು ಅಕ್ರಮ ಬಂಧನದಲ್ಲಿಟ್ಟು ಅವರನ್ನು ಬಲವಂತವಾಗಿ ಚೀನಿಯರನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡ್ತಿದೆ. ಒಂದಿಡೀ ಜನಾಂಗ ಮತ್ತು ಸಂಸ್ಕೃತಿಯನ್ನೇ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಡ್ರ್ಯಾಗನ್ ಸರ್ಕಾರ. ಉಯಿಘರ್ ಗಳ ಪ್ರಾಬಲ್ಯವನ್ನ ಹತ್ತಿಕ್ಕಿ ಈ ಪ್ರಾಂತ್ಯದಲ್ಲಿ ಹಾನ್ ಚೀನೀಯರನ್ನ ಕರೆತಂದು ನೆಲೆಗೊಳಿಸುತ್ತಿದೆ.
ಮಸೀದಿ ಕೆಡವಿ ಅದೇ ಜಾಗದಲ್ಲಿ ಚೀನಾ ಪಬ್ಲಿಕ್ ಟಾಯ್ಲೆಟ್; ಪಾಕ್ ಬಾಯಿ ಬಂದ್!
ಕ್ಸಿನ್ ಜಿಯಾಂಗ್ ನಲ್ಲಿ ಪ್ರತಿ ಉಯಿಘರ್ ಗಳ ಮೇಲೂ ಕಣ್ಣಿಟ್ಟಿದೆ ಚೀನಾ. ಉಯಿಘರ್ ಗಳ ಚಲನ ವಲನಗಳ ಮೇಲೆ ಕಣ್ಣಿಡಲು ಇಡೀ ಪ್ರಾಂತ್ಯದಲ್ಲಿ ಸಿಸಿಟಿವಿಗಳನ್ನ ಅಳವಡಿಸಿದೆ. ಉಯಿಘರ್ ಗಳು ಓಡಾಡುವ ವಾಹನಗಳ ನಂಬರ್ ಪ್ಲೇಟ್ ಗಳನ್ನ ಟ್ರಾಕ್ ಮಾಡಲಾಗುತ್ತೆ. ಯಾರ ಮೇಲಾದರೂ ಅನುಮಾನ ಬಂದ್ರೆ ತಕ್ಷಣ ವಶಕ್ಕೆ ಪಡೆದು ಕ್ಯಾಂಪ್ ಗಳಲ್ಲಿ ದೂಡಲಾಗುತ್ತೆ. ಇನ್ನು ಚೀನಾದಲ್ಲಿ ಇಸ್ಲಾಂ ಅನ್ನ ಅಳಿಸಿ ಹಾಕಿಬಿಡುವ ಎಲ್ಲ ಪ್ರಯತ್ನಗಳನ್ನೂ ಅಲ್ಲಿನ ಸರ್ಕಾರ ಮಾಡುತ್ತಿದೆ. ಕ್ಸಿನ್ ಜಿಯಾಂಗ್ ನಲ್ಲಿದ್ದ ನೂರಾರು ಮಸೀದಿಗಳನ್ನ ಧ್ವಂಸ ಮಾಡಿ, ಅಲ್ಲಿ ಸಾರ್ವಜನಿಕ ಕಟ್ಟಡಗಳನ್ನ ನಿರ್ಮಿಸುತ್ತಿದೆ. ಇತ್ತೀಚೆಗೆ ಮಸೀದಿಯೊಂದನ್ನ ಶೌಚಾಲಯವಾಗಿ ಬದಲಿಸಿದ್ದು ಸಾಕಷ್ಟು ಸುದ್ದಿಗೆ ಕಾರಣವಾಗಿತ್ತು. ಕ್ಸಿನ್ ಜಿಯಾಂಗ್ ನಲ್ಲಿನ ಉಯಿಘರ್ ಮುಸ್ಲಿಮರು ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಉಸಿರೆತ್ತುವಂತಿಲ್ಲ. ಚೀನಾದ ದಬ್ಬಾಳಿಕೆ ಸಹಿಸಲಾಗದೇ ಬೇರೆ ದೇಶಗಳಿಗೆ ವಲಸೆ ಹೋಗಿರುವ ಒಂದಷ್ಟು ಹೋರಾಟಗಾರರು ಚೀನಾದ ದಮನಕಾರಿ ನೀತಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಚೀನಾ, ತನ್ನ ನೆಲದಲ್ಲಿ ಯಾವುದೇ ಅನ್ಯಾಯ ನಡೆಯುತ್ತಿಲ್ಲ ಅಂತಲೇ ವಾದಿಸುತ್ತೆ.
ಇಷ್ಟಕ್ಕೂ ಚೀನಾ ಯಾಕೆ ಉಯಿಘರ್ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಿ ನಾಶ ಮಾಡುವ ಪ್ರಯತ್ನ ಮಾಡ್ತಿದೆ ಅನ್ನೋ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರವಿದೆ. ಚೀನಾ ಈ ಪ್ರದೇಶವನ್ನ ಆಕ್ರಮಿಸಿಕೊಂಡಿದೆ. ಇಡೀ ಪ್ರಾಂತ್ಯ ಚೀನಾದ ಪಾಲಿಗೆ ಅಕ್ಷಯ ಪಾತ್ರೆ. ಪರ್ವತ ಪ್ರದೇಶಗಳಿಂದ ಕೂಡಿರೋ ಇಲ್ಲಿ ಹೇರಳವಾದ ಸಂಪತ್ತಿದೆ. ಇದರ ಜತೆಗೆ ಯೋರೋಪ್ ಅನ್ನ ಸಂಪರ್ಕಿಸೋ ಐತಿಹಾಸಿಕ ಸಿಲ್ಕ್ ರೋಡ್ ಹಾದು ಹೋಗುವ ಪ್ರದೇಶ ಇದು. ಉಯಿಘರ್ ಗಳು ಸ್ವತಂತ್ರ್ಯ ದೇಶಕ್ಕಾಗಿ ಪ್ರತ್ಯೇಕತಾವಾದಿ ಹೋರಾಟ ನಡೆಸಿಕೊಂಡು ಬರುತ್ತಲೇ ಇದ್ದಾರೆ. ಇಲ್ಲಿನ ಮೂಲ ಸಂಸ್ಕೃತಿ, ಮೂಲ ಧರ್ಮವನ್ನ ನಾಶ ಮಾಡಿ ಎಲ್ಲರನ್ನೂ ಅಪ್ಪಟ ಚೀನಿಯರನ್ನಾಗಿ ಮಾಡಿಬಿಟ್ಟರೆ ತನ್ನ ನೆಲದಲ್ಲಿ ಯಾವುದೇ ಪ್ರತಿರೋಧ ಇರೋದಿಲ್ಲ ಅನ್ನೋದು ಚೀನಾದ ತಂತ್ರ. ಅದಕ್ಕಾಗಿಯೇ ಇಲ್ಲಿ ನಿತ್ಯ ಉಯಿಘರ್ ಮುಸ್ಲಿಮರ ಮಾರಣ ಹೋಮ ನಡೆಯುತ್ತಲೇ ಇರುತ್ತದೆ.
ಜಗತ್ತಿನಲ್ಲಿ ಎಲ್ಲೇ ಮುಸ್ಲಿಮರ ವಿರುದ್ಧ ಒಂದು ಸಣ್ಣ ದೌರ್ಜನ್ಯ ನಡೆದುಬಿಟ್ಟರೂ ಆಕಾಶವೇ ತಲೆ ಮೇಲೆ ಬಿದ್ದಂತೆ ಆಡುವ ಪಾಕಿಸ್ತಾನ, ಸೌದಿ ಅರೇಬಿಯಾ, ಇರಾನ್, ಮಲೇಷಿಯಾದಂತಹ ದೇಶಗಳು ಚೀನಾದ ವಿರುದ್ಧ ಅಪ್ಪಿ ತಪ್ಪಿಯೂ ಮಾತನಾಡುವುದಿಲ್ಲ. ಯಾಕಂದ್ರೆ ಈ ಎಲ್ಲ ದೇಶಗಳೂ ಚೀನಾ ಕೊಟ್ಟ ಸಾಲದ ಮುಲಾಜಿನಲ್ಲಿ ಬಿದ್ದಿವೆ. ಚೀನಾದ ಮಹತ್ವಾಕಾಂಕ್ಷಿ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಲ್ಲಿ ಬಹುಪಾಲು ಮುಸ್ಲಿಂ ರಾಷ್ಟ್ರಗಳೇ ಪಾಲುದಾರರು. ಹಾಗಾಗಿ ಚೀನಾದಲ್ಲಿ ಮುಸ್ಲಿಮರ ಮಾರಣಹೋಮವೇ ನಡೆಯುತ್ತಿದ್ದರೂ ಜಗತ್ತಿನ ಯಾವ ಮುಸ್ಲಿಂ ದೇಶವೂ ಇದರ ವಿರುದ್ಧ ಚಕಾರವೆತ್ತುತ್ತಿಲ್ಲ.