
ರಾವಲ್ಪಿಂಡಿ: ಪಾಕಿಸ್ತಾನ ಸಂಸತ್ ಚುನಾವಣೆಯ ಫಲಿತಾಂಶ ಅತಂತ್ರ ಪರಿಸ್ಥಿತಿಯ ಸ್ಪಷ್ಟ ಸುಳಿವು ನೀಡಿರುವ ಬೆನ್ನಲ್ಲೇ, ಎಂದಿನಂತೆ ಸೇನೆ ಮಧ್ಯಪ್ರವೇಶ ಮಾಡಿದ್ದು ಸಮ್ಮಿಶ್ರ ಸರ್ಕಾರ ರಚನೆಗೆ ಸೂಚಿಸಿದೆ. ಈ ಮೂಲಕ ತನಗೆ ಆಪ್ತನಾಗಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಸರ್ಕಾರ ರಚನೆಯ ಪರ ಬ್ಯಾಟಿಂಗ್ ನಡೆಸಿದೆ. ಸರ್ಕಾರ ರಚನೆಯ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ್ ಮುನೀರ್, ರಾಜಕೀಯ ಪಕ್ಷಗಳು ಸ್ವ ಹಿತಾಸಕ್ತಿಯನ್ನು ಮರೆತು ಒಂದಾಗಬೇಕು. ಜನ ಸೇವೆ ಮಾಡುವುದಕ್ಕಾಗಿ ಸರ್ಕಾರ ರಚನೆ ಮಾಡಬೇಕು ಎಂದು ಹೇಳಿದ್ದಾರೆ.
ಅತಂತ್ರ ಪರಿಸ್ಥಿತಿ:
ಸಂಸತ್ತಿನ 265 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 255 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತ ಅಭ್ಯರ್ಥಿಗಳು 101 ಸ್ಥಾನ ಗೆದ್ದಿದ್ದಾರೆ. ನವಾಜ್ ಷರೀಫ್ ಅವರ ಪಿಎಂಎಲ್‌ಎನ್ ಪಕ್ಷ 73 ಸ್ಥಾನಗಳನ್ನು ಗೆದ್ದಿದೆ. ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಕ್ಷ 54 ಸ್ಥಾನಗಳಲ್ಲಿ ಹಾಗೂ ಮುತ್ತೆಹಿದಾ ಕ್ವಾಮಿ ಮೂವ್‌ಮೆಂಟ್ 17 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಬಹುಮತಕ್ಕೆ 133 ಸ್ಥಾನಗಳ ಅವಶ್ಯಕತೆ ಇದೆ.
ಬಹುಮತವಿಲ್ಲದೆ ಚುನಾವಣೆಯಲ್ಲಿ ವಿಜಯ ಘೋಷಿಸಿದ ನವಾಜ್ ಷರೀಫ್!
ಈ ನಡುವೆ ಇಮ್ರಾನ್ ಖಾನ್ ಮತ್ತು ನವಾಜ್ ಷರೀಫ್ ಇಬ್ಬರೂ ತಾವೇ ಚುನಾವಣೆ ಗೆದ್ದಿದ್ದಾಗಿ ಘೋಷಿಸಿಕೊಂಡಿದ್ದಾರೆ. ಆದರೆ ಇಮ್ರಾನ್ ಬೆಂಬಲಿತ ಅಭ್ಯರ್ಥಿಗಳಿಗೆ ಯಾವುದೇ ಪಕ್ಷವಿಲ್ಲದ ಕಾರಣ ನವಾಜ್ ಷರೀಫ್ ಪಕ್ಷ ರಚನೆಯ ಹಕ್ಕು ಪಡೆಯಲಿದ್ದಾರೆ ಎನ್ನಲಾಗಿದೆ. ಆದರೆ ಇಮ್ರಾನ್ ಬೆಂಬಲಿತರು ಬೆಂಬಲ ಘೋಷಿಸದ ಹೊರತೂ ಸರ್ಕಾರ ರಚನೆ ಸಾಧ್ಯವಿಲ್ಲ. ಹೀಗಾಗಿ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.
ಈ ನಡುವೆ ಮತ ಎಣಿಕೆಯಲ್ಲಿ ಅಕ್ರಮ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಇಮ್ರಾನ್ ಖಾನ್, ಶನಿವಾರ ಮಧ್ಯರಾತ್ರಿಯೊಳಗೆ ಪೂರ್ಣ ಫಲಿತಾಂಶ ಪ್ರಕಟಿಸದೇ ಹೋದಲ್ಲಿ ಭಾನುವಾರದಿಂದ ತಮ್ಮ ಬೆಂಬಲಿಗರು ಬೀದಿಗಿಳಿದು ಹೋರಾಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಪಾಕಿಸ್ತಾನ ಫಲಿತಾಂಶ ಅತಂತ್ರ: ಜೈಲಲ್ಲಿರುವ ಇಮ್ರಾನ್ ಬೆಂಬಲಿಗರ ಅಚ್ಚರಿಯ ಗೆಲುವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ