ಮೈಸೂರು ನಂಟಿನ ವ್ಯಕ್ತಿಗೆ ಟ್ರಂಪ್‌ ಸರ್ಕಾರದಲ್ಲಿ ಹುದ್ದೆ; ಟಿವಿ ನಿರೂಪಕ ಈಗ ಅಮೆರಿಕ ರಕ್ಷಣಾ ಸಚಿವ

By Kannadaprabha News  |  First Published Nov 14, 2024, 9:11 AM IST

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ ಪ್ರಚಾರ ಮಾಡಿದ್ದ ಎಲಾನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರಿಗೆ ಟ್ರಂಪ್ ಸರ್ಕಾರದಲ್ಲಿ ಪ್ರಮುಖ ಹುದ್ದೆ ದೊರೆತಿವೆ. 


ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ತಮ್ಮ ಪರವಾಗಿ ಗಟ್ಟಿಯಾಗಿ ನಿಂತು ಪ್ರಚಾರ ಮಾಡಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಹಾಗೂ ಮೈಸೂರು ನಂಟು ಹೊಂದಿರುವ ಅಮೆರಿಕ ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರಿಗೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಸರ್ಕಾರದಲ್ಲಿ ಪ್ರಮುಖ ಹುದ್ದೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸಿದ್ಧ ಮಂತ್ರವಾಗಿರುವ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಮಾದರಿಯನ್ನು ಅಮೆರಿಕದಲ್ಲೂ ಜಾರಿಗೆ ತರಲು ಉದ್ದೇಶಿಸಿರುವ ಟ್ರಂಪ್‌ ಅವರು, ಆಡಳಿತ ಸುಧಾರಣಾ ಇಲಾಖೆಗೆ ಈ ಇಬ್ಬರನ್ನೂ ನೇಮಕ ಮಾಡಿದ್ದಾರೆ. 2026ರ ಜು.4ಕ್ಕೆ ಅಮೆರಿಕಕ್ಕೆ ಸ್ವಾತಂತ್ರ್ಯ ಲಭಿಸಿ 250 ವರ್ಷಗಳಾಗಲಿದ್ದು, ಅಷ್ಟರ ವೇಳೆ ಅಮೆರಿಕ ಸರ್ಕಾರದ ಸುಧಾರಣೆ ಹಾಗೂ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ಹೊಣೆಗಾರಿಕೆಯನ್ನು ಈ ಇಬ್ಬರಿಗೂ ಹಂಚಿಕೆ ಮಾಡಿದ್ದಾರೆ.

Latest Videos

undefined

ಗಮನಾರ್ಹ ಎಂದರೆ, ಟ್ರಂಪ್‌ ಅವರ 2ನೇ ಅವಧಿಯ ಸರ್ಕಾರದಲ್ಲಿ ಹುದ್ದೆ ಪಡೆದ ಮೊದಲ ಭಾರತೀಯ ಅಮೆರಿಕನ್‌ ವ್ಯಕ್ತಿ ವಿವೇಕ್‌ ರಾಮಸ್ವಾಮಿ (37) ಆಗಿದ್ದಾರೆ. ರಾಮಸ್ವಾಮಿ ಅವರ ತಂದೆ- ತಾಯಿ ಕೇರಳ ಮೂಲದ ತಮಿಳು ಭಾಷಿಕರು. ಅವರು ಬಹಳ ಹಿಂದೆಯೇ ಉದ್ಯೋಗ ಅರಸಿ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರು. ತಂದೆ ಗಣಪತಿ ವಿ. ರಾಮಸ್ವಾಮಿ ಅವರು ಕ್ಯಾಲಿಕಟ್‌ನಲ್ಲಿ ವ್ಯಾಸಂಗ ಮಾಡಿದ್ದರೆ, ವಿವೇಕ್‌ ಅವರ ತಾಯಿ ಗೀತಾ ರಾಮಸ್ವಾಮಿ ಅವರು ಮೈಸೂರು ವೈದ್ಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಪದವಿ ಗಳಿಸಿದ್ದವರು. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಹುದ್ದೆಗಾಗಿ ಸ್ಪರ್ಧಿಸಿದ್ದ ವಿವೇಕ್‌ ಕೊನೆಗೆ ಟ್ರಂಪ್‌ಗೆ ಬೆಂಬಲ ಸೂಚಿಸಿ ಕಣದಿಂದ ಹಿಂದಕ್ಕೆ ಸರಿದಿದ್ದರು.

ಇದನ್ನೂ ಓದಿ: ಉಕ್ರೇನ್‌ ಯುದ್ಧ ನಿಲ್ಲಿಸುವ ಬಗ್ಗೆ ಟ್ರಂಪ್‌- ಪುಟಿನ್‌ ಮಾತುಕತೆ?

ಈ ಇಬ್ಬರೂ ಅದ್ಭುತ ಅಮೆರಿಕನ್ನರು ಸರ್ಕಾರಿ ಅಧಿಕಾರಶಾಹಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಿ, ಹೆಚ್ಚುವರಿ ನಿಯಂತ್ರಣಗಳನ್ನು ಕಡಿತಗೊಳಿಸಿ, ಅನಗತ್ಯ ಖರ್ಚುಗಳನ್ನು ತಗ್ಗಿಸಿ, ಸರ್ಕಾರಿ ಸಂಸ್ಥೆಗಳ ಪುನಾರಚನೆ ಮಾಡಬೇಕು ಎಂದು ಟ್ರಂಪ್‌ ಅವರು ಸೂಚಿಸಿದ್ದಾರೆ.

ಟಿವಿ ನಿರೂಪಕ ಈಗ ಅಮೆರಿಕ ರಕ್ಷಣಾ ಸಚಿವ
ಕಳೆದ 8 ವರ್ಷಗಳಿಂದ ಅಮೆರಿಕದ ಪ್ರಸಿದ್ಧ ಫಾಕ್ಸ್‌ ನ್ಯೂಸ್‌ ಟಿವಿ ವಾಹಿನಿಯಲ್ಲಿ ನಿರೂಪಕರಾಗಿರುವ ನಿವೃತ್ತ ಸೇನಾಧಿಕಾರಿ ಪೀಟ್‌ ಹೆಗ್‌ಸೇಥ್‌ (44) ಅವರನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರಕ್ಷಣಾ ಸಚಿವರಾಗಿ ನೇಮಕ ಮಾಡಿದ್ದಾರೆ. ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಪದವೀಧರರಾಗಿರುವ ಪೀಟ್, ಯೋಧರಾಗಿ ಕೆಲಸ ಮಾಡಿದ್ದಾರೆ. ಗ್ವಾಂಟನಾಮೋ ಬೇ, ಇರಾಕ್‌ ಹಾಗೂ ಅಪಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ್ದಾರೆ. 2 ಕಂಚಿನ ಪದಕ ಗಳಿಸಿದ್ದಾರೆ. ಕಳೆದ 8 ವರ್ಷಗಳಿಂದ ಫಾಕ್ಸ್‌ ನ್ಯೂಸ್‌ ನಿರೂಪಕರಾಗಿರುವ ಅವರು, ಸೇನೆ ಹಾಗೂ ನಿವೃತ್ತ ಸೇನಾಧಿಕಾರಿಗಳ ಹೋರಾಟವನ್ನು ಬಿಂಬಿಸುತ್ತಿದ್ದಾರೆ. ಪೀಟ್‌ ಅವರು ಲೇಖಕರು ಹೌದು.

ಇದನ್ನೂ ಓದಿ: ಟ್ರಂಪ್ ವಿರುದ್ಧ 'ಮಾರಿ’ಯಾದ ಅಮೆರಿಕನ್ 'ನಾರಿ’; ಪುರುಷರ ವಿರುದ್ಧ ಪ್ರತೀಕಾರದ ಪ್ರತಿಜ್ಞೆ

click me!