ಅಲ್-ಖದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್‌ರನ್ನು ಬಂಧಿಸಿದಾಗ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಪಿಮ್ಸ್)ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿಯನ್ನು ಸಚಿವ ಅಬ್ದುಲ್ ಖಾದಿರ್ ಪಟೇಲ್ ಈಗ ಬಿಡುಗಡೆ ಮಾಡಿದ್ದಾರೆ.
ಇಸ್ಲಾಮಾಬಾದ್ (ಮೇ 28, 2023) : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿ ದೇಶಾದ್ಯಂತ ದಂಗೆ ನಡೆದ ಬಳಿಕ ಬಿಡುಗಡೆ ಮಾಡಿದ ಪ್ರಕರಣ ಅಲ್ಲಿಗೇ ಮುಕ್ತಾಯಗೊಳ್ಳದೆ ಇದೀಗ ಇನ್ನೊಂದು ವಿವಾದಕ್ಕೆ ಕಾರಣವಾಗಿದೆ. ಇಮ್ರಾನ್ ಖಾನ್ ಅವರ ಮೂತ್ರದಲ್ಲಿ ಕೊಕೇನ್, ಆಲ್ಕೋಹಾಲ್ ಮುಂತಾದ ವಿಷಕಾರಿ ರಾಸಾಯನಿಕಗಳು ಪತ್ತೆಯಾಗಿವೆ ಎಂದು ಪಾಕಿಸ್ತಾನದ ಆರೋಗ್ಯ ಸಚಿವ ಅಬ್ದುಲ್ ಖಾದಿರ್ ಪಟೇಲ್ ವೈದ್ಯಕೀಯ ಪರೀಕ್ಷಾ ವರದಿ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ‘ಇಮ್ರಾನ್ ಖಾನ್ ಮಾದಕ ದ್ರವ್ಯ ವ್ಯಸನಿಯಾಗಿದ್ದು, ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರನ್ನು ಮ್ಯೂಸಿಯಂನಲ್ಲಿ ಇರಿಸಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್-ಖದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್‌ರನ್ನು ಬಂಧಿಸಿದಾಗ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಪಿಮ್ಸ್)ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿಯನ್ನು ಸಚಿವ ಅಬ್ದುಲ್ ಖಾದಿರ್ ಪಟೇಲ್ ಈಗ ಬಿಡುಗಡೆ ಮಾಡಿದ್ದು, ಇದು ಮಾಜಿ ಪ್ರಧಾನಿಗೆ ಸಂಬಂಧಪಟ್ಟಿದ್ದರಿಂದ ಸಾರ್ವಜನಿಕ ದಾಖಲೆಯಾಗಿದೆ. ದೇಶದ ಜನರಿಗೆ ಇದನ್ನು ತೋರಿಸಬೇಕು ಎಂದು ಹೇಳಿದರು.
ಇದನ್ನು ಓದಿ: ಇಮ್ರಾನ್ ಖಾನ್ ಮನೆಯಲ್ಲಿ 40 ಉಗ್ರರು? ಪೊಲೀಸರಿಗೆ ಒಪ್ಪಿಸಲು 24 ಗಂಟೆ ಗಡುವು
ಇಮ್ರಾನ್ ಮಾನಸಿಕ ಅಸ್ವಸ್ಥ:
‘ಇದು ನಿಮ್ಮ ಪ್ರಧಾನಿಯ ವೈದ್ಯಕೀಯ ವರದಿ. ಐವರು ಹಿರಿಯ ವೈದ್ಯರ ಸಮಿತಿ ಸಿದ್ಧಪಡಿಸಿದ ಈ ವರದಿಯಲ್ಲಿ ಆತ ಮಾನಸಿಕವಾಗಿ ಸುಸ್ಥಿತಿಯಲ್ಲಿಲ್ಲ ಎಂದು ಹೇಳಲಾಗಿದೆ. ನಾವು ಇಮ್ರಾನ್ ಖಾನ್ ಜೊತೆ ಸುದೀರ್ಘವಾಗಿ ಮಾತುಕತೆ ನಡೆಸಿದಾಗ ಅಸಂಬದ್ಧ ನಡವಳಿಕೆ ತೋರಿದ್ದಾರೆ, ಅವರೊಬ್ಬ ಸುಸ್ಥಿತಿಯಲ್ಲಿರುವ ಮನುಷ್ಯ ಎಂದು ತೋರುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ’ ಎಂದು ಅಬ್ದುಲ್ ಖಾದಿರ್ ಪಟೇಲ್ ತಿಳಿಸಿದರು.
ಕಾಲೇ ಮುರಿದಿಲ್ಲ, ಬ್ಯಾಂಡೇಜ್ ಏಕೆ:
ಐದಾರು ತಿಂಗಳು ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಇಮ್ರಾನ್ ಖಾನ್ ಓಡಾಡುತ್ತಿದ್ದರು. ಆದರೆ ಅವರ ಕಾಲಿನಲ್ಲಿ ಮೂಳೆ ಮುರಿತ ಉಂಟಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಕೇವಲ ಚರ್ಮದ ಮೇಲಿನ ಗಾಯ ಅಥವಾ ಸ್ನಾಯು ಸಮಸ್ಯೆಗೆ ಯಾರಾದರೂ ಪ್ಲಾಸ್ಟರ್ ಹಾಕಿಕೊಂಡಿದ್ದನ್ನು ನೀವು ನೋಡಿದ್ದೀರಾ? ಅವರೊಬ್ಬ ನಾರ್ಸಿಸಿಸ್ಟ್ ಮನುಷ್ಯ. ಬರೀ ಸುಳ್ಳು ಹೇಳುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರನ್ನು ಮ್ಯೂಸಿಯಂನಲ್ಲಿ ಇರಿಸಬೇಕು ಎಂದೂ ಪಾಕಿಸ್ತಾನದ ಆರೋಗ್ಯ ಸಚಿವ ಅಬ್ದುಲ್ ಖಾದಿರ್ ಪಟೇಲ್ ಹೇಳಿದರು.
ಇದನ್ನೂ ಓದಿ: Breaking ಇಮ್ರಾನ್ ಖಾನ್ ಬಂಧನ ಕಾನೂನು ಬಾಹಿರ; ತಕ್ಷಣ ಬಿಡುಗಡೆ ಮಾಡಿ: ಪಾಕಿಸ್ತಾನ ಸುಪ್ರೀಂಕೋರ್ಟ್ ಆದೇಶ