
ಮನುಷ್ಯರೇ ಆಗಲಿ ಪ್ರಾಣಿಗಳೇ ಆಗಲಿ ಸಾವು ಎಲ್ಲರನ್ನು ಬಹಳ ತೀವ್ರವಾಗಿ ಕಾಡುತ್ತದೆ. ಆತ್ಮೀಯರ ಆಗಲಿಕೆ ದುಃಖ ತೀವ್ರವಾದ ಮಾನಸಿಕ ಆಘಾತವನ್ನು ನೀಡುತ್ತದೆ. ಈ ಸಾವಿನ ನಷ್ಟ ನೋವಿನಿಂದ ಹೊರಬರಲು ಬಹಳ ಸಮಯ ಹಿಡಿಯುತ್ತದೆ. ಮನುಷ್ಯರೇನೋ ಈಗಿನ ಕಾಲಕ್ಕೆ ತಕ್ಕಂತೆ ಮೊಬೈಲ್ ಫೋನ್ ಟಿವಿ ಅಂತ ಈ ನೋವಿನಿಂದ ನಿಧಾನವಾಗಿ ಹೊರಬಹುದು ಆದರೆ ಪ್ರಾಣಿಗಳಿಗೆ ಅದು ಅಷ್ಟು ಸುಲಭವಲ್ಲ, ಇಲ್ಲೊಂದು ಕಡೆ ಆನೆಯೊಂದು ತನ್ನ 25 ಸುಧೀರ್ಘ ವರ್ಷಗಳ ಕಾಲ ಜತೆಗಿದ್ದ ಸ್ನೇಹಿತನನ್ನು ಕಳೆದುಕೊಂಡು ರೋದಿಸುತ್ತಿದ್ದು, ಆನೆಯ ಈ ವೀಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅಲ್ಲದೇ ನೋಡುಗರ ಕಣ್ಣಾಲಿಗಳನ್ನು ತೇವಗೊಳ್ಳುವಂತೆ ಮಾಡುತ್ತಿದೆ.
ಅಂದಹಾಗೆ ಇವು ರಷ್ಯಾದಲ್ಲಿ ಸರ್ಕಸ್‌ನಲ್ಲಿ ಸೇವೆ ಸಲ್ಲಿಸಿದ್ದ ಆನೆಗಳಾಗಿವೆ. ಜೆರ್ರಿ ಹಾಗೂ ಮಗ್ಡಾ ಹೆಸರಿನ ಈ ಆನೆಗಳು ಬರೋಬ್ಬರಿ 25 ವರ್ಷಗಳಿಂದ ಇಲ್ಲಿಯವೆಗೆ ಜೊತೆಯಾಗಿ ಕಾಲ ಕಳೆದಿವೆ. ಆದರೆ ಈ ವಾರದ ಆರಂಭದಲ್ಲಿ ಜೆರ್ರಿ ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದೆ. 25 ವರ್ಷಗಳ ಕಾಲ ತನ್ನ ಜೊತೆಗಿದ್ದ ಜೆರ್ರಿಯ ಸಾವನ್ನು ಸಹಿಸಿಕೊಳ್ಳಲಾಗದೇ ರೋದಿಸುತ್ತಿದೆ. ಅದು ಕುಸಿದು ಬಿದ್ದಲೇ ನಿಂತು ಅದನ್ನು ಸೊಂಡಿಲಿನಲ್ಲಿ ಏಳಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಆದರೆ ನಿರ್ಜೀವವಾಗಿ ಮಲಗಿದ ಜೆರ್ರಿ ಏಳೋದಾದರು ಹೇಗೆ? ಹೀಗಾಗಿ ಜೆರ್ರಿಯನ್ನು ಕಳೆದುಕೊಂಡ ಮಗ್ಡಾನ ಆಕ್ರಂದನ ನೋಡುವುದಕ್ಕೆ ಆಗುತ್ತಿಲ್ಲ,
Kodagu: ಗುಂಡೇಟಿನ ಗಾಯಗಳಿಂದ ನರಕಯಾತನೆ ಅನುಭವಿಸುತ್ತಿರುವ ಕಾಜೂರು ಕರ್ಣ ಕಾಡಾನೆ!
ಜೆರ್ರಿಯ ಸುತ್ತಲೂ ತನ್ನ ಸೊಂಡಿಲನ್ನು ತಂದು ಅದನ್ನು ಏಳಿಸುವುದಕ್ಕೆ ಪ್ರಯತ್ನಿಸುತ್ತಿದೆ ಮಗ್ಡಾ, ಜೊತೆಗೆ ಅದರ ಸೊಂಡಿಲನ್ನು ಎಳೆದು ಎಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿ ಸೋತು ಕೈ ಚೆಲ್ಲಿದೆ. ಸಾವಿನ ಮುಂದೆ ಗೆದ್ದವರುಂಟೇ! ಕೆಲ ಮಾಧ್ಯಮಗಳ ವರದಿಯ ಪ್ರಕಾರ ಮಗ್ಡಾ ಜೆರ್ರಿಯ ಬಳಿ ಗಂಟೆಗಳ ಕಾಲ ನಿಂತು ಚಡಪಡಿಸಿದೆ ಪಶು ವೈದ್ಯರನ್ನು ಕೂಡ ಅದರ ಬಳಿ ಹೋಗಲು ಬಿಟ್ಟಿಲ್ಲ, ಮಗ್ಡಾನ ರೋದನೆ ಭರಿತ ಭಾವುಕ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಎರಡು ಆನೆಗಳು ಹಿಂದೊಮ್ಮೆ ಅಂದರೆ 2021ರಲ್ಲಿ ರಷ್ಯಾದ ಕಜನ್‌ನಲ್ಲಿ ಸರ್ಕಸ್ ವೇಳೆ ಹೊಡೆದಾಡಿಕೊಂಡಿದ್ದವಂತೆ. ಈಗ ಜೆರ್ರಿಯ ಸಾವಿನೊಂದಿಗೆ ನೆಟ್ಟಿಗರೊಬ್ಬರು ಈ ವಿಚಾರವನ್ನು ಸ್ಮರಿಸಿಕೊಂಡಿದ್ದಾರೆ. ಜೊತೆಗೆ ಆ ಘಟನೆಗಳ ವೀಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಮಗ್ಡಾನ ಸಂಕಟಭರಿತ ವೀಡಿಯೋ ನೋಡಿದ ಅನೇಕರು ಭಾವುಕರಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದು ಹೃದಯ ಹಿಂಡುವ ಘಟನೆ. ಆನೆಗಳು ಆಳವಾದ ಭಾವನಾತ್ಮಕ ಬಂಧಗಳನ್ನು ಹೊಂದಿವೆ, ಮತ್ತು ಜೆನ್ನಿಯನ್ನು ಬಿಡಲು ಮ್ಯಾಗ್ಡಾ ನಿರಾಕರಿಸಿದ್ದು ಅವುಗಳ ಸಂಪರ್ಕ ಎಷ್ಟು ಬಲವಾಗಿತ್ತು ಎಂಬುದನ್ನು ತೋರಿಸುತ್ತದೆ. ಪ್ರಾಣಿ ಸಾಮ್ರಾಜ್ಯದಲ್ಲಿ ನಿಜವಾದ ಪ್ರೀತಿ ಮತ್ತು ದುಃಖ ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಜೆಸಿಬಿ ಜೊತೆ ಗಜರಾಜನ ಕಾಳಗ; ರಣರೋಚಕ ಸಂಘರ್ಷ ಕ್ಯಾಮೆರಾದಲ್ಲಿ ಸೆರೆ, ಇರ್ವರಲ್ಲಿ ಗೆದ್ದಿದ್ಯಾರು?
ಮನುಷ್ಯರ ಹೊರತಾಗಿ ಅಂತ್ಯಕ್ರಿಯೆ ನಡೆಸುವ ಕೆಲವೇ ಕೆಲವು ಸಸ್ತನಿಗಳಲ್ಲಿ ಆನೆಗಳು ಕೂಡ ಒಂದು. ಅವುಗಳು ನಿಜವಾಗಿಯೂ ತಮ್ಮ ಅಗಲಿದ ಪ್ರೀತಿಪಾತ್ರರ ದೇಹಗಳನ್ನು ಮರದ ಕೊಂಬೆಗಳಿಂದ ಮುಚ್ಚುತ್ತವೆ ಎಂದು ಮತ್ತೊಬ್ಬ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವಳನ್ನು ನೋಡುವುದಕ್ಕೆ ಹೃದಯ ಭಾರವೆನಿಸುತ್ತಿದೆ. ಒಟ್ಟಿಗೆ 25 ವರ್ಷಗಳು ಬಹಳ ಸಮಯ. ನನ್ನ ಪತಿಯೊಂದಿಗೆ 45 ವರ್ಷ ಕಳೆದಿದೆ, ಈ ಸಹಾನುಭೂತಿಯನ್ನು ನೋಡಿದಾಗ ನಾವು ಒಟ್ಟಿಗೆ ಅನುಭವಿಸಿದ ಅನೇಕ ವಿಷಯಗಳನ್ನು ಯೋಚಿಸಲು ನನಗೆ ಸಾಧ್ಯವಾಗುತ್ತದೆ ಎಂದು ಬಳಕೆದಾರರಲ್ಲಿ ಒಬ್ಬರು ಕಾಮೆಂಟ್ ಮಾಡಿದ್ದಾರೆ.
ನೋಡಿದ್ರಲ್ಲ, ಆನೆಯ ಪ್ರೀತಿ ಸಂಬಂಧ ರೋದನೆ ಎಂಥಾ ಭಾವುಕವಾದುದು ಎಂಥದ್ದು ಅಂತ. ಮನುಷ್ಯ ಮನುಷ್ಯರ ನಡುವೆ ಇಂತಹ ಪ್ರೀತಿ ಕಾಣಸಿಗುವುದು ತುಂಬಾ ಅಪರೂಪ. ಈ ವೀಡಿಯೋ ನೋಡಿ ನಿಮಗೇನನಿಸಿತು. ಕಾಮೆಂಟ್ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ