ಅಲ್‌ ಜವಾಹಿರಿ ಯಾರೋ ಗೊತ್ತಿಲ್ಲ, ಇಂತಹ ಹೊಗಳಿಕೆ ಬೇಕಿರಲಿಲ್ಲ: ಮುಸ್ಕಾನ್‌ ಖಾನ್‌ ತಂದೆ ಆತಂಕ

By Suvarna NewsFirst Published Apr 7, 2022, 10:20 AM IST
Highlights

* ಹಿಂದೂ ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದಬ್ಬಾಳಿಕೆ
*‘ಅಲ್ಲಾ ಹು ಅಕ್ಬರ್‌’ ಎಂದ ಮಂಡ್ಯ ವಿದ್ಯಾರ್ಥಿನಿ ಬಗ್ಗೆ ಜವಾಹಿರಿ ಮೆಚ್ಚುಗೆ
*ಇಂತಹ ಹೊಗಳಿಕೆ ಬೇಕಿರಲಿಲ್ಲ: ಮುಸ್ಕಾನ್‌ ಖಾನ್‌ ತಂದೆ ಆತಂಕ

ಮಂಡ್ಯ (ಏ. 07): ‘ಅಲ್‌ ಜವಾಹಿರಿ ( Al Zawahiri) ಯಾರು ಅನ್ನುವುದೇ ನನಗೆ ಗೊತ್ತಿಲ್ಲ. ನನ್ನ ಮಗಳಿಗೆ ಇಂತಹ ಹೊಗಳಿಕೆ ಬೇಕಾಗಿರಲಿಲ್ಲ’ ಎಂದು ಹಿಜಾಬ್‌-ಕೇಸರಿ ವಿವಾದದ ವೇಳೆ ಮಂಡ್ಯದಲ್ಲಿ ಅಲ್ಲಾ ಹೋ ಅಕ್ಬರ್‌ ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್‌ ಖಾನ್‌ (Muskan Khan) ಅವರ ತಂದೆ ಮಹಮದ್‌ ಹುಸೇನ್‌ ಖಾನ್‌ ತಿಳಿಸಿದ್ದಾರೆ. ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಅಲ್‌ ಜವಾಹಿರಿ ತಮ್ಮ ಮಗಳನ್ನು ಹೊಗಳಿ ಕವಿತೆ ಬರೆದಿರುವ ಬಗ್ಗೆ ಬುಧವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಅಲ್‌ ಜವಾಹಿರಿ ಯಾರು ಅನ್ನುವುದೇ ನನಗೆ ಗೊತ್ತಿಲ್ಲ. ಮಾಧ್ಯಮಗಳ ಮುಖಾಂತರ ಈ ವಿಚಾರ ತಿಳಿಯಿತು. ಅರಬ್ಬೀ ಭಾಷೆಯಲ್ಲಿ ಮಗಳನ್ನು ಹೊಗಳಿದ್ದಾರೆ. ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಇದೆಲ್ಲಾ ತಪ್ಪು. ಗೊಂದಲ ಮಾಡಿ ನಮ್ಮ ನಮ್ಮಲ್ಲಿ ಜಗಳ ತಂದಿಡಲು ಮಾಡುತ್ತಿದ್ದಾರೆ. ನನ್ನ ಮಗಳಿಗೆ ಇಂತಹ ಹೊಗಳಿಕೆ ಬೇಕಾಗಿರಲಿಲ್ಲ ಎಂದು ಆತಂಕದಿಂದ ನುಡಿದರು.

ಹಿಜಾಬ್‌ ಇರುವ ಕಾಲೇಜಿಗೆ ಮುಸ್ಕಾನ್‌:  ಹಿಜಾಬ್‌ ಕಾರಣಕ್ಕಾಗಿಯೇ ಮಗಳ ಕಾಲೇಜು ಬದಲಿಸುತ್ತಿದ್ದೇವೆ ಎಂದು ಮುಸ್ಕಾನ್‌ ಖಾನ್‌ ಅವರ ತಂದೆ ಮಹಮದ್‌ ಹುಸೇನ್‌ ಖಾನ್‌ ತಿಳಿಸಿದರು. ಹಿಜಾಬ್‌ಗೆ ಅವಕಾಶವಿರುವ ಕಾಲೇಜು ಮೈಸೂರಿನಲ್ಲಿದ್ದು ಮುಸ್ಕಾನ್‌ಳನ್ನು ಅಲ್ಲಿಗೆ ದಾಖಲಿಸುತ್ತೇವೆ. ಹಿಜಾಬ್‌ ಅಥವಾ ವೇಲ್‌ ಹಾಕಿಕೊಳ್ಳಲು ಅವಕಾಶ ನೀಡಿದರೆ ಮಂಡ್ಯದಲ್ಲೇ ದಾಖಲಿಸುತ್ತೇವೆ ಎಂದು ಹೇಳಿದರು. 

ಇದನ್ನೂ ಓದಿ: ಹಿಜಾಬ್‌ ವಿವಾದಕ್ಕೆ ಈಗ ಅಲ್‌ಖೈದಾ ಉಗ್ರ ಬೆಂಕಿ: 'ಅಲ್ಲಾ ಹು ಅಕ್ಬರ್‌’ ಎಂದ ಮಂಡ್ಯ ವಿದ್ಯಾರ್ಥಿನಿ ಮಂಡ್ಯ ಭೇಷ್‌ ಎಂದ ಜವಾಹಿರಿ

ಪಿಇಎಸ್‌ ಕಾಲೇಜಿನವರು ಹಿಜಾಬ್‌ಗೆ ಅವಕಾಶ ಕೊಡಲ್ಲ ಎಂದಿದ್ದಕ್ಕೆ ನಾನು ಬೇರೆ ಕಾಲೇಜಿಗೆ ಮಗಳನ್ನ ಸೇರಿಸುವ ನಿರ್ಧಾರ ಮಾಡಿದೆ. ಪರೀಕ್ಷೆ ಬರೆಯದೆ ಒಂದು ವರ್ಷ ವ್ಯರ್ಥವಾಗಿದ್ದಕ್ಕೆ ನನ್ನ ಮಗಳು ಈಗ ‘ಎಲ್‌ಕೆಜಿ ಫೇಲ್‌’ ಆಗಿದ್ದಾಳೆಂದು ತಿಳಿದಿದ್ದೇನೆ. ನಾನು ಓದಿಸುವವನು, ಅವಳು ಓದುವವಳು, ನಾನು ಮಗಳನ್ನು ಓದಿಸಿಕೊಳ್ಳುತ್ತೇನೆ ಎಂದು ಉತ್ತರಿಸಿದರು.

ಹೊಗಳಿಕೆ ಬೇಕಿರಲಿಲ್ಲ: ನಮಗೆ ಯಾರ ಹೊಗಳಿಕೆ, ಉಡುಗೊರೆ ಬೇಡ. ನಾವು ಎಲ್ಲರ ಜೊತೆ ಅಣ್ಣ-ತಮ್ಮಂದಿರ ಹಾಗೇ ಇದ್ದೇವೆ. ಕರ್ನಾಟಕದ ಜನ ಯಾರ ಮಾತನ್ನು ನಂಬಬೇಡಿ. ಉಗ್ರ ಸಂಘಟನೆ ಮುಖ್ಯಸ್ಥನ ಹೊಗಳಿಕೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು.

ಬಿಕಾಂ ಪರೀಕ್ಷೆ ಬಿಟ್ಟು ಪಾಸ್‌ಪೋರ್ಟ್ ಪರಿಶೀಲನೆಗೆ ತೆರಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪರೀಕ್ಷೆ ಹಿಂದಿನ ದಿನ ಮಗಳ ಪಾಸ್‌ಪೋರ್ಟ್ ಪರಿಶೀಲನೆಗೆ ಹೋಗಿದ್ದೆವು. ರಂಜಾನ್‌ ತಿಂಗಳಲ್ಲಿ ಉಮ್ರಾ ಮಾಡಲು 3-4 ವರ್ಷಗಳ ಹಿಂದೆ ನಿರ್ಧರಿಸಿದ್ದೆವು. ಇದಕ್ಕಾಗಿ ಮುಸ್ಕಾನ್‌ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದೆವು. ಅದರ ಪರಿಶೀಲನೆಗೆ ಹೋಗಿದ್ದೆವು. ಈಗ ಆಕೆಯ ಪಾಸ್‌ಪೋರ್ಟ್ ಕೂಡ ಬಂದಿದೆ. ದೇವರ ಕೆಲಸಕ್ಕೆ ನಾವು ಉಮ್ರಾಗೆ ತೆರಳಲಿದ್ದೇವೆ ಎಂದರು.

ಜವಾಹಿರಿ ಹೇಳಿದ್ದೇನು?: ವಿಶ್ವದ ಹಲವು ದೇಶಗಳಲ್ಲಿ ಕೆಲ ಇಸ್ಲಾಂ ಆಚರಣೆಗಳಿಗೆ ಎದುರಾಗಿರುವ ತೊಡಕಿನ ಕುರಿತು ಅಲ್‌ಖೈದಾ ಮುಖ್ಯಸ್ಥ ಅಲ್‌ ಜವಾಹಿರಿ 8.43 ನಿಮಿಷಗಳ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಅದನ್ನು ಅಲ್‌ಖೈದಾದ ಅಧಿಕೃತ ಮಾಧ್ಯಮವಾದ ‘ಶಬಾಬ್‌ ಮೀಡಿಯಾ’ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ತರಗತಿ ಒಳಗಡೆ ನಮಾಜ್ ಮಾಡಿ ವಿವಾದ ಸೃಷ್ಟಿಸಿದ ವಿದ್ಯಾರ್ಥಿನಿಯಿಂದ ಕ್ಷಮಾಪಣಾ ಪತ್ರ!

‘ಹಿಜಾಬ್‌ ವಿವಾದವು ‘ಹಿಂದೂ ಭಾರತ’ದ(Hindu India) ನಿಜ ಬಣ್ಣ ಬಯಲು ಮಾಡಿದೆ. ಆದರೆ ಇಂಥ ಸಂದರ್ಭದಲ್ಲಿ ಹಿಜಾಬ್‌ ಧರಿಸಿ ಬಂದ ತನ್ನನ್ನು ವಿರೋಧಿಸಿದ ವ್ಯಕ್ತಿಗಳನ್ನು ಮುಸ್ಕಾನ್‌ ಖಾನ್‌ (ಮಂಡ್ಯದ ವಿದ್ಯಾರ್ಥಿನಿ) ದಿಟ್ಟತನದಿಂದ ಎದುರಿಸಿದ್ದಾಳೆ. ಆಕೆ ‘ಅಲ್ಲಾ ಹು ಅಕ್ಬರ್‌’ ಎಂದು ಕೂಗಿದ್ದು ಶ್ಲಾಘನೀಯ. ಈ ಮೂಲಕ ಮುಸ್ಲಿಂ ಧರ್ಮದಲ್ಲಿ ಕೀಳರಿಮೆ ಹೊಂದಿರುವ ಇತರ ಮಹಿಳೆಯರಿಗೆ ಮುಸ್ಕಾನ್‌ ಖಾನ್‌ ನೈತಿಕ ಪಾಠ ಕಲಿಸಿದ್ದಾಳೆ. ಹಿಂದೂ ಬಹುದೇವತಾ ಆರಾಧಕರ ವಿರುದ್ಧ ಆಕೆ ತೋರಿದ ಧೈರ್ಯವು ಮುಸ್ಲಿಂ ಸಮುದಾಯವನ್ನು ಬಡಿದೆಬ್ಬಿಸಿದೆ ಹಾಗೂ ಧರ್ಮಯುದ್ಧಕ್ಕೆ (Jihad) ಪ್ರೇರೇಪಣೆ ನೀಡಿದೆ’ ಎಂದು ಆತ ಹೇಳಿದ್ದಾನೆ.

click me!