ಸೋರಿಕೆಯಾದ ಅಮೆರಿಕದ ದಾಖಲೆಗಳಿಂದ ಹಲವು ದೇಶಗಳಿಗೆ ಕಳವಳ: ಬೇಹುಗಾರಿಕೆ ಮೇಲೆ ಗಂಭೀರ ಪರಿಣಾಮ..?

By Suvarna News  |  First Published Apr 11, 2023, 1:07 PM IST

ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಒಂದಷ್ಟು ದಾಖಲಾತಿಗಳು ಅತ್ಯುನ್ನತ ಸುರಕ್ಷತಾ ಅನುಮತಿ ಇದ್ದವರಿಗೆ ಮಾತ್ರವೇ ಮೀಸಲಾಗಿದ್ದವು. ಈ ಮಾಹಿತಿಗಳು ಹಲವು ವಿಚಾರಗಳಿಗೆ ಸಂಬಂಧಪಟ್ಟಿದ್ದು, ಉಕ್ರೇನ್ ಯುದ್ಧದ ಕುರಿತು ಅಮೆರಿಕಾದ ವಿಶ್ಲೇಷಣೆ ಮತ್ತು ರಾಜತಾಂತ್ರಿಕ ಸ್ನೇಹಿತರ ಕುರಿತು ಕಲೆಹಾಕಿದ ವಿಚಾರಗಳೂ ಅವುಗಳಲ್ಲಿ ಸೇರಿದ್ದವು.


(ಗಿರೀಶ್ ಲಿಂಗಣ್ಣ,ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಇತ್ತೀಚೆಗೆ ಅಮೆರಿಕದ ಅತಿದೊಡ್ಡ ಮಾಹಿತಿ ಸೋರಿಕೆ ಪ್ರಕರಣ ಒಂದರಲ್ಲಿ, ಅಮೆರಿಕದ ಪ್ರಮುಖ ಮಿಲಿಟರಿ ದಾಖಲೆಗಳು ಸೋರಿಕೆಯಾಗಿದ್ದು, ರಕ್ಷಣಾ ಇಲಾಖೆ ಅದರ ವಿಚಾರಣೆಯನ್ನು ಆರಂಭಿಸಿದೆ. ಈ ಮಾಹಿತಿ ಸೋರಿಕೆ ಉಕ್ರೇನಿಗೆ ಅಮೆರಿಕದ ಸಹಕಾರದ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆಗಳಿವೆ.

Tap to resize

Latest Videos

ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಒಂದಷ್ಟು ದಾಖಲಾತಿಗಳು ಅತ್ಯುನ್ನತ ಸುರಕ್ಷತಾ ಅನುಮತಿ ಇದ್ದವರಿಗೆ ಮಾತ್ರವೇ ಮೀಸಲಾಗಿದ್ದವು. ಈ ಮಾಹಿತಿಗಳು ಹಲವು ವಿಚಾರಗಳಿಗೆ ಸಂಬಂಧಪಟ್ಟಿದ್ದು, ಉಕ್ರೇನ್ ಯುದ್ಧದ ಕುರಿತು ಅಮೆರಿಕಾದ ವಿಶ್ಲೇಷಣೆ ಮತ್ತು ರಾಜತಾಂತ್ರಿಕ ಸ್ನೇಹಿತರ ಕುರಿತು ಕಲೆಹಾಕಿದ ವಿಚಾರಗಳೂ ಅವುಗಳಲ್ಲಿ ಸೇರಿದ್ದವು.

ಇದನ್ನು ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

ಈಗ ಸೋರಿಕೆಯಾಗಿರುವ ದಾಖಲೆಗಳಲ್ಲಿ ಒಂದಷ್ಟು ಪ್ರಮುಖ ವಿಚಾರಗಳೂ ಸೇರಿರುವುದು ಸತ್ಯ. ನ್ಯೂಯಾರ್ಕ್ ಟೈಮ್ಸ್ ಹಾಗೂ ಇತರ ಅಮೆರಿಕದ ಮಾಧ್ಯಮಗಳ ಪ್ರಕಾರ, ಮೊದಲಿಗೆ ಸೋರಿಕೆಯಾದ ದಾಖಲಾತಿಗಳು ಉಕ್ರೇನ್ ಯುದ್ಧದ ಕುರಿತು ಅಮೆರಿಕದ ಲೆಕ್ಕಾಚಾರಗಳನ್ನು ಒಳಗೊಂಡಿದ್ದವು. ಈ ದಾಖಲಾತಿಯನ್ನು ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ರಚಿಸಲಾಗಿದ್ದು, ಎರಡೂ ಪಕ್ಷಗಳು ಯುದ್ಧದಲ್ಲಿ ಅನುಭವಿಸಿದ ಸಾವು ನೋವಿನ ಲೆಕ್ಕಾಚಾರಗಳನ್ನು ಒಳಗೊಂಡಿದ್ದವು. ಅವುಗಳಲ್ಲಿ ಕನಿಷ್ಠ ಒಂದು ದಾಖಲಾತಿಯನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಂಡು, ರಷ್ಯಾದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎನ್ನಲಾಗಿದೆ. ಈ ಆರೋಪಗಳು ಆ ದಾಖಲಾತಿಯ ನಂಬಿಕಾರ್ಹತೆಯನ್ನು ಪ್ರಶ್ನಿಸುತ್ತವೆ.

ಇತ್ತೀಚಿನ ಮಾಹಿತಿ ಸೋರಿಕೆಯ ಪ್ರಕಾರ, ದಕ್ಷಿಣ ಕೊರಿಯ, ಇಸ್ರೇಲ್, ಉಕ್ರೇನ್ ಸೇರಿದಂತೆ ತನ್ನ ರಾಜತಾಂತ್ರಿಕ ಮಿತ್ರ ರಾಷ್ಟ್ರಗಳ ಕುರಿತು ಅಮೆರಿಕ ಗುಪ್ತಚರ ಮಾಹಿತಿ ಕಲೆಹಾಕುತ್ತದೆ ಎನ್ನಲಾಗಿದೆ. ದಾಖಲೆಗಳ ಪ್ರಕಾರ, ಅಮೆರಿಕಗೆ ರಷ್ಯಾ ಸರ್ಕಾರದ ಒಳಗಿನಿಂದಲೇ ಗುಪ್ತಚರ ಮಾಹಿತಿ ಕಲೆ ಹಾಕಲು ಸಾಧ್ಯವಾಗುತ್ತಿದೆ. ಇದು ಅಮೆರಿಕದ ಬೇಹುಗಾರಿಕೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಇದನ್ನೂ ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

ದಾಖಲಾತಿಗಳು ಎಲ್ಲಿದ್ದವು?

ಕಳೆದ ಕೆಲ ವಾರಗಳ ಅವಧಿಯಲ್ಲಿ, ಸೋರಿಕೆಯಾದ ಮಾಹಿತಿಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದವು. ಬೆಲ್ಲಿಂಗ್ ಕ್ಯಾಟ್ ಎಂಬ ಸ್ವತಂತ್ರ ತನಿಖಾ ಮಾಧ್ಯಮ ಸಂಸ್ಥೆ ಈ ಕುರಿತು ತನಿಖಾ ವರದಿ ಪ್ರಕಟಿಸಿ, ಈ ದಾಖಲೆಗಳು ಮೊದಲಿಗೆ ಕಂಪ್ಯೂಟರ್ ಗೇಮ್‌ ಅಭಿಮಾನಿಗಳ ಮೆಸೇಜಿಂಗ್ ಅಪ್ಲಿಕೇಶನ್ ಸೇರಿದಂತೆ, ಹಲವು ಅಸ್ಪಷ್ಟ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದವು ಎಂದಿದೆ.

ಈ ದಾಖಲೆಗಳು ಒಂದು ಬಾರಿ ಗುರುತಿಸಲ್ಪಟ್ಟ ಬಳಿಕ, ಅವುಗಳನ್ನು ಅಮೆರಿಕದ ಬಲಪಂಥೀಯ ನೋಟಿಸ್ ಬೋರ್ಡ್ 4ಚಾನ್ ಹಾಗೂ ಟೆಲಿಗ್ರಾಮ್ ಆ್ಯಪ್‌ನಲ್ಲಿನ ರಷ್ಯಾ ಬೆಂಬಲಿತ ಗ್ರೂಪ್‌ಗಳಲ್ಲಿ ವಿಸ್ತೃತವಾಗಿ ಹಂಚಲಾಯಿತು. ಆ ಬಳಿಕ ಅವುಗಳು ಹೆಚ್ಚು ಜನರ ಗಮನ ಸೆಳೆದವು. 

ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!

ಆದರೆ ಅವುಗಳ ಮೂಲ ಯಾವುದು? ಅವುಗಳು ಎಲ್ಲಿಂದ ಬಂದವು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ನ್ಯೂಯಾರ್ಕ್‌ ಟೈಮ್ಸ್‌ ಪ್ರಕಾರ, ಆ ದಾಖಲಾತಿಗಳನ್ನು ಪಡೆಯುವ ಮೊದಲು ಅವುಗಳನ್ನು ಮಡಚಿ ಇಡಲಾಗಿತ್ತು. ಆದ್ದರಿಂದ ಅವುಗಳನ್ನು ಯಾವುದೋ ಫೈಲ್ ಅಥವಾ ಬ್ರೀಫ್ ಕೇಸ್ ಒಳಗಿಂದ ತೆಗೆದಿರಬಹುದು ಎನ್ನಲಾಗಿದೆ.

ಒಂದು ವೇಳೆ ಈ ಮಾಹಿತಿಗಳು ನಿಜವೇ ಆಗಿದ್ದರೆ, ಅವುಗಳನ್ನು ಸೋರಿಕೆ ಮಾಡಿದ್ದು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ ಅವುಗಳು ಹಂಚಿಕೆಯಾಗಿರುವ ರೀತಿಯನ್ನು ಗಮನಿಸಿದರೆ, ಅವುಗಳನ್ನು ಯಾರೋ ಅಮೆರಿಕದ ವ್ಯಕ್ತಿಯೇ ತೆಗೆದುಕೊಂಡಿದ್ದಾರೆ ಎಂದು ಹೇಳಬಹುದು. ಈ ಮಾಹಿತಿಗಳ ಮೂಲದ ಕುರಿತು ಅಮೆರಿಕದ ನ್ಯಾಯ ಇಲಾಖೆ ಈಗಾಗಲೇ ಅಧಿಕೃತ ವಿಚಾರಣೆ ಆರಂಭಿಸಿದೆ.

ಇದನ್ನೂ ಓದಿ: ಕೊಡಗಿನ ವೀರ ಯೋಧರು: ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡವರಿಗೊಂಡು ನಮನ

ಈ ದಾಖಲೆಗಳು ಇನ್ನೂ ಅಂತರ್ಜಾಲದಲ್ಲಿ ಲಭ್ಯವಿದೆಯೇ?

ಒಂದು ಬಾರಿ ಆ ದಾಖಲೆಗಳನ್ನೆಲ್ಲ ಅಂತರ್ಜಾಲದಲ್ಲಿ ಹಂಚಿಕೆ ಮಾಡಿದ ಬಳಿಕ ಅವುಗಳನ್ನು ಸಂಪೂರ್ಣವಾಗಿ ಅಲ್ಲಿಂದ ತೆಗೆಯುವುದು ಬಹುತೇಕ ಅಸಾಧ್ಯ. ಆ ದಾಖಲಾತಿಗಳನ್ನು ಅಂತರ್ಜಾಲದಿಂದ ತೆಗೆಯಲು ಒಂದು ಸಾಮಾಜಿಕ ಜಾಲತಾಣ ಸಿದ್ಧವಿಲ್ಲ. ಅದರ ಕೋಟ್ಯಧಿಪತಿ ಮಾಲೀಕ ಆ ದಾಖಲೆಗಳನ್ನು ಅಂತರ್ಜಾಲದಿಂದ ಕಿತ್ತು ಹಾಕುವ ಯೋಚನೆಯನ್ನೇ ವ್ಯಂಗ್ಯವಾಡಿದ್ದಾರೆ. ಆದರೆ ಅವುಗಳನ್ನು ಅಂತರ್ಜಾಲದಿಂದ ತೆಗೆದು ಹಾಕಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ.

ಈ ಮಾಹಿತಿ ಸೋರಿಕೆಯ ಕುರಿತು ಜಾಗತಿಕ ಪ್ರತಿಕ್ರಿಯೆಗಳೇನು?

ಉಕ್ರೇನ್ ಅಧ್ಯಕ್ಷರ ಸಲಹೆಗಾರರೊಬ್ಬರು ನ್ಯೂಯಾರ್ಕ್ ಟೈಮ್ಸ್ ಜೊತೆ ಮಾತನಾಡುತ್ತಾ, ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ದಾಖಲೆಗಳು ಕೇವಲ ಕಲ್ಪನೆಗಳಷ್ಟೇ, ಅವುಗಳು ಸತ್ಯಕ್ಕೆ ದೂರವಾದವು ಎಂದಿದ್ದಾರೆ. ಇನ್ನು, ರಷ್ಯಾದ ಸರ್ಕಾರಿ ಮಾಧ್ಯಮ ಸ್ಪುಟ್ನಿಕ್ ಈ ಮಾಹಿತಿ ಸೋರಿಕೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರ ಉಕ್ರೇನ್ ನೀತಿಯಲ್ಲಿನ ಒಡಕನ್ನು ಪ್ರದರ್ಶಿಸುತ್ತಿದೆ ಎಂದಿದೆ. ಸರ್ಕಾರಿ ವಕ್ತಾರರೊಬ್ಬರು ಈ ದಾಖಲೆ ಉಕ್ರೇನ್ ಯುದ್ಧದಲ್ಲಿ ಅಮೆರಿಕದ ಪಾತ್ರವನ್ನು ಪ್ರದರ್ಶಿಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!

ಈ ರೀತಿಯ ಮಾಹಿತಿ ಸೋರಿಕೆಯ ಸುದ್ದಿ ಈಗಾಗಲೇ ಅಮೆರಿಕದ ಮಿತ್ರ ರಾಷ್ಟ್ರಗಳಲ್ಲಿ ಕಳವಳ ಮೂಡಿಸಿವೆ. ಆದರೆ ಅವುಗಳು ಈ ಕುರಿತ ವಿಚಾರಣೆ ನಡೆಸುವಲ್ಲಿ ಅಮೆರಿಕದ ಅಧಿಕಾರಿಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮಾಹಿತಿ ಸೋರಿಕೆಯಲ್ಲಿ ದಕ್ಷಿಣ ಕೊರಿಯಾದ ಹೆಸರೂ ಉಲ್ಲೇಖಿಸಲಾಗಿದ್ದು, ದಕ್ಷಿಣ ಕೊರಿಯಾ ಸರ್ಕಾರ ತಾನು ಅಮೆರಿಕದೊಡನೆ ಈ ವಿಚಾರದ ಕುರಿತಾಗಿ ಮಾತುಕತೆ ನಡೆಸುವುದಾಗಿ ಅಧಿಕೃತ ಹೇಳಿಕೆ ನೀಡಿದೆ.

ಇದನ್ನೂ ಓದಿ: ವರ್ಷ ಪೂರೈಸಿದ ಹತ್ಯಾಕಾಂಡ: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಯುದ್ಧದ ಪರಿಣಾಮವೇನು?

 

 

click me!