ಅಕ್ಷತಾ ಮೂರ್ತಿ ತೆರಿಗೆ ಸ್ಥಾನಮಾನ ಸೋರಿಕೆ: ತನಿಖೆಗೆ ಬ್ರಿಟನ್‌ ಆದೇಶ

By Anusha KbFirst Published Apr 11, 2022, 4:00 AM IST
Highlights
  • ಭಾರತದಲ್ಲಿ ಗಳಿಸಿದ್ದ ಆದಾಯಕ್ಕೆ ತೆರಿಗೆ ವಿನಾಯ್ತಿ ಪಡೆದಿದ್ದ ಅಕ್ಷತಾ
  • ತೆರಿಗೆ ವಿನಾಯಿತಿ ಪಡೆದಿರುವ ಮಾಹಿತಿ ಸೋರಿಕೆಯಾಗಿದ್ದು ಹೇಗೆ 
  • ಆಂತರಿಕ ತನಿಖೆಗೆ ಆದೇಶಿಸಿದ ಬ್ರಿಟನ್ ಸರ್ಕಾರ

ಲಂಡನ್‌: ಇಸ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಪುತ್ರಿ ಅಕ್ಷತಾ (Akshata) ಅವರು ಬ್ರಿಟನ್ನಿನಲ್ಲಿ ನಾನ್‌-ಡಾಮಿಸಿಲ್‌ (ನಿವಾಸೇತರ )ಸ್ಥಾನಮಾನ ಪಡೆಯುವ ಮೂಲಕ ವಿದೇಶದಲ್ಲಿ ಗಳಿಸುವ ಆಸ್ತಿಗೆ ತೆರಿಗೆ ವಿನಾಯಿತಿ ಪಡೆದಿರುವ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಬ್ರಿಟನ್‌ ಸರ್ಕಾರ (British government) ಆಂತರಿಕ ತನಿಖೆಗೆ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚಾನ್ಸಲರ್‌ ರಿಷಿ ಸುನಾಕ್‌ (Rishi Sunak) ಅವರ ಪತ್ನಿಯ ತೆರಿಗೆ ಸ್ಥಾನಮಾನದ ಕುರಿತ ಗೌಪ್ಯ ಮಾಹಿತಿ (confidential information) ಸೋರಿಕೆಯಾಗಿ ‘ದ ಇಂಡಿಪೆಂಡೆಂಟ್‌’ ದಿನಪತ್ರಿಕೆಗೆ ಲಭ್ಯವಾಗಿದ್ದು ಹೇಗೆ?, ಅಕ್ಷತಾ ಅವರ ತೆರಿಗೆ ಸ್ಥಾನಮಾನದ ಬಗ್ಗೆ ಯಾರಿಗೆ ಮಾಹಿತಿ ಇತ್ತು ಮತ್ತು ಯಾರಾದರೂ ಆ ಮಾಹಿತಿಯನ್ನು ಕೋರಿದ್ದರೇ ಎಂಬುದರ ಕುರಿತು ತನಿಖೆ ನಡೆಯಲಿದೆ. ವಿಪಕ್ಷ ಲೇಬರ್‌ ಪಕ್ಷವನ್ನು ಬೆಂಬಲಿಸುವ ಸರ್ಕಾರಿ ಅಧಿಕಾರಿಯಿಂದ ಮಾಹಿತಿ ಸೋರಿಕೆಯಾಗಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗೆ ರಿಷಿ ಸುನಾಕ್‌ ಬ್ರಿಟನ್‌ ನಾಗರಿಕರ ಆದಾಯ ತೆರಿಗೆಯನ್ನು (income tax) ಹೆಚ್ಚಿಸಿದ್ದರು. ಈ ನಡುವೆ ಪತ್ನಿ ಅಕ್ಷತಾ ಮೂರ್ತಿ ಅವರು ವಿದೇಶಿ ಗಳಿಕೆಗೆ ತೆರಿಗೆ ವಿನಾಯ್ತಿ ಪಡೆದಿರುವ ವಿಷಯ ಮಾಧ್ಯಮದ ಮೂಲಕ ಬಹಿರಂಗವಾಗಿತ್ತು. ಹೀಗಾಗಿ ಈ ಬಗ್ಗೆ ವಿವರಣೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಈ ಬೆನ್ನಲ್ಲೇ ತಮ್ಮ ತೆರಿಗೆ ಸ್ಥಾನಮಾನ ಪತಿಯ ರಾಜಕೀಯ ಜೀವನಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಕಾನೂನಿನ ಪ್ರಕಾರ ತೆರಿಗೆ ವಿನಾಯ್ತಿ ಇದ್ದರೂ ಭಾರತದಲ್ಲಿ ಗಳಿಸುವ ಆಸ್ತಿಗೆ ತೆರಿಗೆ ಪಾವತಿಸುವುದಾಗಿ ಅಕ್ಷತಾ ಘೋಷಿಸಿದ್ದಾರೆ.

ಇನ್ಫಿ ನಾರಾಯಣದ ಮೂರ್ತಿ ಮಗಳು ಬ್ರಿಟನ್‌ ರಾಣಿಗಿಂತ ಶ್ರೀಮಂತೆ! ಆಸ್ತಿ ಬಚ್ಚಿಟ್ಟ ವಿವಾದ

ಬ್ರಿಟನ್‌ ಹಾಗೂ 15 ಕಾಮನ್‌ವೆಲ್ತ್‌ ರಾಷ್ಟ್ರಗಳಿಗೆ ರಾಣಿಯಾಗಿರುವ ಕ್ವೀನ್‌ ಎಲಿಜಬೆತ್‌ ಅವರಿಗಿಂತ ಬೆಂಗಳೂರಿನ ಇಸ್ಫೋಸಿಸ್‌ ಕಂಪನಿ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಪುತ್ರಿ, ಬ್ರಿಟನ್‌ನ ಹಣಕಾಸು ಸಚಿವ ರಿಶಿ ಸುನಾಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಅಧಿಕ ಆಸ್ತಿ ಹೊಂದಿರುವ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆದರೆ ಪತ್ನಿಯ ಹೆಸರಿನಲ್ಲಿರುವ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳದ ಕಾರಣ ರಿಶಿ ಸುನಾಕ್‌ ಅವರು ಬ್ರಿಟನ್‌ನಲ್ಲಿ ವಿವಾದಕ್ಕೆ ಸಿಲುಕಿದ್ದಾರೆ.

ಬೆಂಗಳೂರಿನ ಇಸ್ಫೋಸಿಸ್‌ ಕಂಪನಿಯಲ್ಲಿ ಅಕ್ಷತಾ ಮೂರ್ತಿ ಅವರು ಶೇ.0.91ರಷ್ಟು ಷೇರು ಹೊಂದಿದ್ದು, ಅದರ ಮೌಲ್ಯ 4200 ಕೋಟಿ ರೂ. ಆಗಿದೆ. ಆದರೆ ಬ್ರಿಟನ್‌ ರಾಣಿ ಅವರ ಒಟ್ಟಾರೆ ಆಸ್ತಿ 3444 ಕೋಟಿ ರೂ. ಎಂದು ವರದಿಗಳು ತಿಳಿಸಿವೆ. ಬ್ರಿಟನ್‌ನ ಹಣಕಾಸು ಸಚಿವರಾಗಿರುವ ಹಿನ್ನೆಲೆಯಲ್ಲಿ ಸೋದರರು, ಪೋಷಕರು, ಪತ್ನಿ, ಪತ್ನಿಯ ಪೋಷಕರ ಆಸ್ತಿಯ ವಿವರವನ್ನು ರಿಶಿ ಸುನಾಕ್‌ ಅವರು ಘೋಷಣೆ ಮಾಡಿಕೊಳ್ಳಬೇಕಿತ್ತು. ಆದರೆ ಅವರು ಅದನ್ನು ಮಾಡಿಲ್ಲ. ಹೀಗಾಗಿ ಅವರ ವಿರುದ್ಧ ಪಾರದರ್ಶಕತೆಯ ಪ್ರಶ್ನೆ ಎದ್ದಿದೆ. ಆಸ್ತಿ ವಿವರದಲ್ಲಿ ಪತ್ನಿಯ ಹೆಸರನ್ನು ರಿಶಿ ಅವರು ನಮೂದಿಸಿದರಾದರೂ ಬ್ರಿಟನ್‌ ಮೂಲದ ಸಣ್ಣ ವೆಂಚರ್‌ ಕ್ಯಾಪಿಟಲ್‌ ಕಂಪನಿಯನ್ನು ಹೊಂದಿದ್ದಾರೆ ಎಂದಷ್ಟೇ ಪ್ರಸ್ತಾಪಿಸಿದ್ದಾರೆ. ಆದರೆ ಇಸ್ಫೋಸಿಸ್‌ ಹಾಗೂ ಮತ್ತಿತರ ಸಂಸ್ಥೆಗಳಲ್ಲಿ ಅವರು ಹೊಂದಿರುವ ಷೇರಿನ ಕುರಿತು ಮಾಹಿತಿ ನೀಡಿಲ್ಲ.

ಇನ್ಫಿ ಮೂರ್ತಿ ಮಗಳು ಅಕ್ಷತಾ, ಕ್ವೀನ್ ಎಲಿಜಬೆತ್‌ಗಿಂತ ಶ್ರೀಮಂತೆ! ಈ ಪರಿ ಆಸ್ತಿ ಹೆಚ್ಚಾಗಿದ್ದು ಹೇಗಂತೆ?
 

2009ರಲ್ಲಿ ಅಕ್ಷತಾ ಅವರನ್ನು ವಿವಾಹವಾಗಿರುವ ರಿಶಿ ಸುನಾಕ್‌ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಲು ಕನಿಷ್ಠ ಪ್ರಯತ್ನ ಪಡಬೇಕಿತ್ತು ಎಂಬ ಟೀಕೆಗಳು ವ್ಯಕ್ತವಾಗಿವೆ. ಬೆಂಗಳೂರು ಮೂಲದ ಇಸ್ಫೋಸಿಸ್‌ನಲ್ಲಿ ನಾರಾಯಣಮೂರ್ತಿ ಅವರ ಕುಟುಂಬ 16 ಸಾವಿರ ಕೋಟಿ ರೂ. ಆಸ್ತಿಯನ್ನು ಹೊಂದಿದೆ.

click me!