
ರಿಯಾದ್: ನಟ ಸಲ್ಮಾನ್ ಖಾನ್ ಬಲೂಚಿಸ್ತಾನ ಮತ್ತು ಪಾಕಿಸ್ತಾನಗಳನ್ನು ಪ್ರತ್ಯೇಕ ರಾಷ್ಟ್ರಗಳು ಎನ್ನುವ ಅರ್ಥದಲ್ಲಿ ನೀಡಿದ ಹೇಳಿಕೆ ಚರ್ಚೆಗೆ ನಾಂದಿ ಹಾಡಿದ್ದು, ಬಹುತೇಕ ಭಾರತೀಯರು ನಟನ ಹೇಳಿಕೆ ಬೆಂಬಲಿಸಿದ್ದಾರೆ. ಆದರೆ ಕೆಲವರು, ಸಲ್ಮಾನ್ ಅಚಾತುರ್ಯದಿಂದ ಹೇಳಿರಬಹುದು ಎಂದಿದ್ದಾರೆ.
ಸೌದಿ ಅರೇಬಿಯಾ ರಾಜಧಾನಿಯಲ್ಲಿ ನಡೆದ ‘ಜಾಯ್ ಫಾರಂ 2025’ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್, ‘ನಾನೀಗ ಹಿಂದಿ ಸಿನಿಮಾವೊಂದನ್ನು ಸೌದಿಯಲ್ಲಿ ಬಿಡುಗಡೆ ಮಾಡಿದರೆ ಅದು ಸೂಪರ್ ಹಿಟ್ ಆಗುತ್ತದೆ. ಅದೇ ತಮಿಳು, ತೆಲುಗು ಅಥವಾ ಮಲಯಾಳಂ ಚಿತ್ರ ಮಾಡಿದರೆ ಅದು ನೂರಾರು ಕೋಟಿ ಗಳಿಸುತ್ತದೆ. ಕಾರಣ, ಇಲ್ಲಿ ವಿದೇಶಗಳಿಂದ ಹಲವಾರು ಜನ ಬಂದಿದ್ದಾರೆ. ಬಲೂಚಿಸ್ತಾನ, ಪಾಕಿಸ್ತಾನ, ಅಫ್ಘಾನಿಸ್ತಾನ, ಹೀಗೆ ಹಲವು ರಾಷ್ಟ್ರದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದರು. ಇಲ್ಲಿ ಅವರು ಪಾಕ್ ಮತ್ತು ಬಲೂಚಿಸ್ತಾನದ ಹೆಸರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿರುವುದು ಗಮನ ಸೆಳೆದಿದೆ.
ತರಹೇವಾರಿ ಪ್ರತಿಕ್ರಿಯೆ:
ಸಲ್ಮಾನ್‌ರ ಹೇಳಿಕೆಗೆ ನೆಟ್ಟಿಗರು ಭಾರಿ ಪ್ರತಿಕ್ರಿಯೆ ನೀಡಿದ್ದಾರೆ. ‘ಅವರು ಬಾಯ್ತಪ್ಪಿ ಹಾಗೆ ಹೇಳಿದ್ದರೂ, ಅದ್ಭುತವಾದ ಮಾತನ್ನೇ ಹೇಳಿದರು. ಒಟ್ಟಿನಲ್ಲಿ, ಸಲ್ಮಾನ್‌ನಂತಹ ವ್ಯಕ್ತಿಯೇ ಬಲೂಚಿಸ್ತಾನ ಮತ್ತು ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರಗಳೆಂದು ಒಪ್ಪಿಕೊಂಡಿದ್ದಾರೆ’ ಎಂದು ಸಂಭ್ರಮಿಸಿದ್ದಾರೆ.ಅತ್ತ ಒಂದಿಷ್ಟು ಮಂದಿ, ಈ ವಿಷಯದ ಬಗೆಗಿನ ಸಲ್ಮಾನ್‌ಗೆ ಸಾಮಾನ್ಯ ಜ್ಞಾನವಿಲ್ಲ ಎಂದು ಟೀಕಿಸಿದ್ದಾರೆ. ಇನ್ನೊಂದಿಷ್ಟು ಮಂದಿ, ಅವರ ಹೇಳಿಕೆ ಉದ್ದೇಶಪೂರ್ವಕವಾಗಿರಲ್ಲವಾದ್ದರಿಂದ ಆ ಬಗೆಗಿನ ಚರ್ಚೆ ಅನವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಏನಿದು ಬಲೂಚ್ ವಿವಾದ?:
ಬಲೂಚಿಸ್ತಾನವು ಪಾಕಿಸ್ತಾನದಲ್ಲಿದ್ದರೂ ಅಲ್ಲಿನ ಜನರು ಪ್ರತ್ಯೇಕ ದೇಶಕ್ಕಾಗಿ ಅಥವಾ ಭಾರತದೊಂದಿಗೆ ಸೇರಬೇಕು ಎಂದು ಆಗ್ರಹಿಸಿ ಹೋರಾಡುತ್ತಿದ್ದಾರೆ. ಬಲೂಚ್ ಲಿಬರೇಶನ್ ಆರ್ಮಿ ಎಂಬ ಪ್ರತ್ಯೇಕ ಸಂಘಟನೆ ಇದಕ್ಕೆ ಹೋರಾಡುತ್ತಿದೆ. ಇಲ್ಲಿನ ಪ್ರತ್ಯೇಕತೆ ಹೋರಾಟ ಪಾಕಿಸ್ತಾನವನ್ನು ಕಂಗೆಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ