ಬಲೂಚಿಸ್ತಾನದ ಶಾಲಾ ಬಸ್‌ ಮೇಲೆ ಬಾಂಬ್ ದಾಳಿಯಲ್ಲಿ 6 ಸಾವು; ಮತ್ತೆ ಹಸಿ ಸುಳ್ಳು ಹೇಳಿದ ಪಾಕ್

Published : May 22, 2025, 08:10 AM IST
ಬಲೂಚಿಸ್ತಾನದ ಶಾಲಾ ಬಸ್‌ ಮೇಲೆ ಬಾಂಬ್ ದಾಳಿಯಲ್ಲಿ 6 ಸಾವು; ಮತ್ತೆ ಹಸಿ ಸುಳ್ಳು ಹೇಳಿದ ಪಾಕ್

ಸಾರಾಂಶ

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಶಾಲಾ ಬಸ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.

ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನದ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟದ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದ್ದು, ಶಾಲಾ ಬಸ್‌ ಮೇಲೆ ಅತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ಸ್ಫೋಟದಲ್ಲಿ 3 ಮಕ್ಕಳು ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದು, ಸುಮಾರು 38 ಮಂದಿ ಗಾಯಗೊಂಡಿದ್ದಾರೆ.

ಇಲ್ಲಿನ ಖುಜ್ದಾರ್‌ ಜಿಲ್ಲೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಶಾಲಾ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ. ಸುಧಾರಿತ ಸ್ಫೋಟಕ ಬಳಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಾಹುತಿ ಬಾಂಬ್‌ನಿಂದ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯನ್ನು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಖಂಡಿಸಿದ್ದಾರೆ.

ಭಾರತದ ಕೈವಾಡ- ಪಾಕ್ ಆರೋಪ
ಬಲೂಚಿಸ್ತಾನದಲ್ಲಿ ನಡೆದ ಈ ಕೃತ್ಯದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್ ಆರೋಪಿಸಿದೆ. ಆದರೆ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಈ ಬಗ್ಗೆ ಸ್ಪಷ್ಟ ಪಡಿಸಿದ್ದು, ‘ಈ ದಾಳಿಯಲ್ಲಿ ಭಾರತದ ಕೈವಾಡವಿದೆ ಎನ್ನುವ ಆಧಾರರಹಿತ ಆರೋಪವನ್ನು ಭಾರತ ನಿರಾಕರಿಸುತ್ತದೆ. ಜಾಗತಿಕ ಭಯೋತ್ಪಾದನೆಯ ಕೇಂದ್ರ ಬಿಂದು ಎನ್ನುವ ಹಣೆಪಟ್ಟಿಯನ್ನು ಪಾಕಿಸ್ತಾನ ಬೇರೆಡೆಗೆ ತಿರುಗಿಸುವ ಪ್ರಯತ್ನವಿದು’ ಎಂದಿದ್ದಾರೆ.

ಚೀನಾ ಶಸ್ತ್ರಾಸ್ತ್ರ ಬೇಡಿಕೆ ಕುಸಿತ?
ಭಾರತವನ್ನು ಕಟ್ಟಿಹಾಕಲು ಪಾಕಿಸ್ತಾನಕ್ಕೆ ತನ್ನ ಅತ್ಯಾಧುನಿಕ ಕ್ಷಿಪಣಿ, ವಿಮಾನಗಳನ್ನು ನೀಡಿದ್ದ ಕಮ್ಯುನಿಸ್ಟ್‌ ದೇಶ ಚೀನಾ ಇದೀಗ ಅದೇ ಕಾರಣದಿಂದಾಗಿ ಪೇಚಿಗೀಡಾಗಿದೆ. ಏಕೆಂದರೆ ಪಾಕಿಸ್ತಾನವು ಬಳಸಿದ ಚೀನಾನಿರ್ಮಿತ ಕ್ಷಿಪಣಿ ಹಾಗೂ ಕೆಲವು ಶಸ್ತ್ರಾಸ್ತ್ರಗಳನ್ನು ಭಾರತ ಹೊಡೆದುರುಳಿಸಿದೆ. ಹೀಗಾಗಿ ವಿಶ್ವದಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಕುಸಿತದ ಭೀತಿ ಉಂಟಾಗಿದೆ.

ತನ್ನ ಕ್ಷಿಪಣಿ, ವಿಮಾನ ಧ್ವಂಸ ಆಗಿದ್ದು ಮಾತ್ರವೇ ವಿಷಯವಾಗಿದ್ದರೆ ಚೀನಾ ಅಷ್ಟು ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಆದರೆ ಇದರಿಂದ ತನ್ನ ರಕ್ಷಣಾ ವ್ಯಾಪಾರಕ್ಕೆ ಭಾರೀ ಹೊಡೆತ ಬೀಳಬಹುದು ಎಂಬ ಆತಂಕ ಅದನ್ನು ಕಾಡುತ್ತಿದೆ. ಹೀಗಾಗಿಯೇ ಭಾರತದ ಮೇಲಿನ ದಾಳಿಗೆ ತನ್ನ ಶಸ್ತ್ರಾಸ್ತ್ರ ಬಳಸಬೇಡಿ ಎಂದು ಸೂಚಿಸಿದ್ದರೂ ಅದನ್ನು ಬಳಸಿದ್ದು ಏಕೆ ಎಂದು ಕಾರಣ ಕೇಳಿ ಪಾಕಿಸ್ತಾನದ ರಾಯಭಾರ ಸಿಬ್ಬಂದಿಗಳಿಗೆ ಚೀನಾ ಸಮನ್ಸ್‌ ಜಾರಿ ಮಾಡಿದೆ.

ಇದನ್ನೂ ಓದಿ: Suvarna Focus: ಪಾಕ್ ಸಹವಾಸವೇ ಬೇಡ ಅಂತಿದೆ ಬಲೂಚ್ ಪಡೆ, ಚೀನಾಗೆ ಶುರುವಾಯ್ತು ನಡುಕ!

ಚೀನಾಗೆ ಮುಖಭಂಗ
ಭಾರತದ ಮೇಲಿನ ದಾಳಿಗೆ ಪಾಕ್‌ ಬಳಸಿದ್ದ ಚೀನಾ ನಿರ್ಮಿತ ಪಿಎಸ್‌15 ಕ್ಷಿಪಣಿ, ಜೆ17 ಯುದ್ಧ ವಿಮಾನಗಳನ್ನು ಭಾರತ ಹೊಡೆದುರುಳಿಸಿದೆ. ಇದರಿಂದ ಪಾಕ್‌ಗೆ ನಷ್ಟವಾಗಿದೆಯಾದರೂ, ಅಲ್ಲಿ ಮುಖಭಂಗವಾಗಿರುವುದು ಮಾತ್ರ ಚೀನಾಗೆ. ಭಾರತದಿಂದ ಪೆಟ್ಟು ತಿಂದು, ಜಾಗತಿಕ ಮಟ್ಟದಲ್ಲಿ ಚೀನಾದ ಶಸ್ತ್ರಾಸ್ತ್ರಗಳ ಘನತೆಗೆ ಧಕ್ಕೆಯುಂಟಾಗಿದೆ.

ವಹಿವಾಟು ಆತಂಕ
ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಮುಂಚೂಣಿ ದೇಶಗಳ ಪೈಕಿ ಗುರುತಿಸಿಕೊಳ್ಳುವ ಚೀನಾಗೆ, ತನ್ನೊಂದಿಗೆ ಈಗಾಗಲೇ ಖರೀದಿ ಒಪ್ಪಂದ ಮಾಡಿಕೊಂಡಿರುವ ಆಫ್ರಿಕಾ ದೇಶಗಳು ಅದರಿಂದ ಹಿಂದೆ ಸರಿಯಬಹುದು ಎಂಬ ಆತಂಕ ಶುರುವಾಗಿದೆ. ಜೊತೆಗೆ ಭವಿಷ್ಯಲ್ಲಿ ತನ್ನ ರಕ್ಷಣಾ ಉತ್ಪನ್ನಗಳ ಬೇಡಿಕೆ ಕುಸಿಯಬಹುದು ಎಂಬ ಭೀತಿಯೂ ಆರಂಭವಾಗಿದೆ ಎನ್ನಲಾಗಿದೆ. ಚೀನಾದಿಂದ ಬಾಂಗ್ಲಾದೇಶ, ಮ್ಯಾನ್ಮಾರ್, ಅಲ್ಜೀರಿಯಾ ಮತ್ತು ಆಫ್ರಿಕಾದ ಹಲವು ದೇಶಗಳು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತವೆ. ಇನ್ನೊಂದು ಕಡೆ, ಭಾರತದ ಸ್ವದೇಶಿ ಅಸ್ತ್ರಗಳಿಂದ ಪ್ರಭಾವಿತವಾಗಿರುವ ಕೆಲ ದೇಶಗಳು ಅವುಗಳನ್ನು ಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತಿರುವುದು ಗಮನಾರ್ಹ.

ಇದನ್ನೂ ಓದಿ: ಬಲೂಚಿಸ್ತಾನದ ಸ್ವಾತಂತ್ರ್ಯದ ಕನಸು ಮತ್ತು ಭಾರತದ ಜಾಗರೂಕ ನಡೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ
ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ