
ಇಸ್ಲಾಮಾಬಾದ್ (ಮೇ.22): ನೆರೆಯ ಪಾಕಿಸ್ತಾನದಲ್ಲಿ ಅನಾಮಿಕರ ಗುಂಡಿನ ಸದ್ದು ಜೋರಾಗಿದ್ದು, ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದ ಹಾಗೂ 2005ರ ಬೆಂಗಳೂರು ಐಐಎಸ್ಸಿ ದಾಳಿಯ ಸಂಚುಕೋರರಲ್ಲಿ ಒಬ್ಬನಾಗಿದ್ದ ಕುಖ್ಯಾತ ಉಗ್ರ ಆಮೀರ್ ಹಮ್ಜಾನನ್ನು ಅನಾಮಿಕ ವ್ಯಕ್ತಿಗಳು ದಾಳಿ ಮಾಡಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದಲ್ಲಿ ಹಿರಿಯ ಎಲ್‌ಇಟಿ ನೇಮಕಾತಿಗಾರ ಹಾಗೂ 2005ರ ಬೆಂಗಳೂರು ಐಐಎಸ್ಸಿ ದಾಳಿಯ ಪ್ರಮುಖ ಸಂಚುಕೋರ ಅಬು ಸೈಫುಲ್ಲಾ ಅವರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದ ಕೇವಲ 3 ದಿನಗಳ ನಂತರ ಈ ಘಟನೆ ಸಂಭವಿಸಿದೆ.
ಐಎಸ್‌ಐ ಸುಪರ್ದಿಯಲ್ಲಿ ಆಸ್ಪತ್ರೆಗೆ: ಅನಾಮಿಕ ವ್ಯಕ್ತಿಗಳು ಹಮ್ಜಾ ಮನೆಯ ಸಮೀಪದಲ್ಲಿಯೇ ದಾಳಿ ಮಾಡಿದ್ದಾರೆ. ಬಳಿಕ ಕೂಡಲೇ ಹಮ್ಜಾನನ್ನು ಲಾಹೋರ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ನಿಗಾದಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿದೆ.
ಐಐಎಸ್ಸಿ ಸಂಚುಕೋರ: ಈತ ಉಗ್ರ ಹಫೀಜ್ ಮತ್ತು ಅಬ್ದುಲ್ ರೆಹ್ಮಾನ್ ಮಕ್ಕಿ ಆಪ್ತನಾಗಿದ್ದು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಅದರ 17 ಸಹ ಸಂಸ್ಥಾಪಕರಲ್ಲಿ ಈತನೂ ಒಬ್ಬನಾಗಿದ್ದಾನೆ. 2012ರಲ್ಲಿ ಅಮೆರಿಕ ಹಾಗೂ ವಿಶ್ವಸಂಸ್ಥೆಗಳು ಹಮ್ಜಾನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದವು. ಈತ ಭಾರತ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ. 2000ರ ದಶಕದ ಆರಂಭದಿಂದ ಹಮ್ಜಾ ಭಾರತದಲ್ಲಿ ಭಯೋತ್ಪಾದಕ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ.
ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಜತೆ ಕಾಂಗ್ರೆಸ್ ವರಿಷ್ಠರ ಗುಪ್ತ ಮಾತುಕತೆ
ಸೈಫುಲ್ಲಾ ಜೊತೆಗೆ, 2005ರ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ದಾಳಿಗೆ ಕಾರಣವಾದ ಗುಂಪಿನ ಭಾಗವಾಗಿದ್ದ. ನಂತರ ಆತನನ್ನು ಲಷ್ಕರೆ ಪ್ರಚಾರ ವಿಭಾಗಕ್ಕೆ ಮರು ನಿಯೋಜಿಸಲಾಗಿತ್ತು. ಸಂಘಟನೆಯ ಪ್ರಮುಖ ವಿಚಾರವಾದಿಯಾಗಿ ಹಮ್ಜಾ ಕೆಲಸ ಮಾಡುತ್ತಿದ್ದ. ಜೊತೆಗೆ ಲಷ್ಕರ್ ಪತ್ರಿಕೆಯ ಸಂಪಾದಕನಾಗಿಯು ಕೆಲಸ ಮಾಡಿದ್ದ. ಜೊತೆಗೆ ಹಫೀಜ್ ಅಧ್ಯಕ್ಷತೆಯ ಲಷ್ಕರ್ ವಿಶ್ವ ವಿದ್ಯಾಲಯದ ಮಂಡಳಿಯಲ್ಲಿಯೂ ಸದಸ್ಯನಾಗಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ