Nov 27, 2021, 5:21 PM IST
ಬೆಂಗಳೂರು (ನ. 27): ಕೊರೋನಾ 2 ನೇ (Corona 2 nd Wave) ಅಲೆ ಕಡಿಮೆಯಾಗಿದೆ, ಸ್ವಲ್ಪ ಮಟ್ಟಿಗೆ ನಿರಾಳವಾಗಿದೆ ಅಂದುಕೊಳ್ಳುವಾಗ ಇದೀಗ ಹೊಸ ರೂಪಾಂತರಿ ತಳಿ ಬಿ.1.1.529 ಪತ್ತೆಯಾಗಿದೆ. ಅತ್ಯಂತ ವೇಗವಾಗಿ ಹಬ್ಬುವ, ಲಸಿಕೆಗೂ ಬಗ್ಗದ, ಡೆಲ್ಟಾಗಿಂತಲೂ (Delta) ಅಪಾಯಕಾರಿ ಎಂದು ಬಣ್ಣಿತವಾದ ಕೋವಿಡ್‌ನ ಹೊಸ ರೂಪಾಂತರಿಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. ಇನ್ನೂ ಡೆಲ್ಟಾವೈರಸ್‌ನ ಆಘಾತದಿಂದಲೇ ಚೇತರಿಸಿಕೊಳ್ಳದ ಆಫ್ರಿಕಾ ಮತ್ತು ಯುರೋಪ್ ದೇಶಗಳಲ್ಲೇ ಈ ಹೊಸ ತಳಿ ಕಾಣಿಸಿಕೊಂಡಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ವಿಶ್ವದ ಹಲವಾರು ದೇಶಗಳು ಸೋಂಕು ಪತ್ತೆಯಾದ ದೇಶಗಳಿಗೆ ತೆರಳುವ ಮತ್ತು ಆ ದೇಶಗಳಿಂದ ಆಗಮಿಸುವ ವಿಮಾನಗಳ ಸಂಚಾರ ನಿಷೇಧಿಸುವ ನಿರ್ಧಾರ ಕೈಗೊಂಡಿವೆ. ಜೊತೆಗೆ ಆ ದೇಶಗಳಿಂದ ಜನರ ಆಗಮನಕ್ಕೂ ನಿಷೇಧ ಹೇರಿವೆ. ಕೆಲ ದೇಶಗಳು ಆಫ್ರಿಕಾ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿವೆಯಾದರೂ 10 ದಿನಗಳ ಕ್ವಾರಂಟೈನ್ ಸೇರಿದಂತೆ ತಾವು ವಿಧಿಸುವ ನಿಯಮಾವಳಿಗಳನ್ನು ಪಾಲಿಸುವಂತೆ ಕಠಿಣ ಸೂಚನೆ ನೀಡಿವೆ. ಈ ನಡುವೆ ಹೊಸ ರೂಪಾಂತರಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತುರ್ತು ಸಭೆ ನಡೆಸಿದೆ.