Apr 14, 2022, 11:37 AM IST
ಹಚ್ಚ ಹಸಿರ ರಾಶಿ..ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಸಾಲು ಸಾಲು ಬೆಟ್ಟ ಗುಡ್ಡಗಳು, ಕಡಿದಾದ ಪರ್ವತಗಳು...ಅದೇನು ಅಂದ ಅದೇನು ಚಂದ ಅಂತೀರಾ.. ಇದು ಕೊಡಗು (Kodagu) ಜಿಲ್ಲೆ ಮಡಿಕೇರಿ (Madikeri) ತಾಲೂಕಿನ ಭಾಗಮಂಡಲದಲ್ಲಿರೋ ನಿಶಾನಿ ಬೆಟ್ಟದ ಸೊಬಗು.
ಟ್ರೆಕ್ಕಿಂಗ್ (Trekking) ಹೋಗಬೇಕು ಅಂತ ಕೊಡಗು ಜಿಲ್ಲೆಗೆ ಆಗಮಿಸುವ ಚಾರಣಿಗರಿಗೇನೂ ಕೊರತೆ ಇಲ್ಲ. ಸಾಮಾನ್ಯವಾಗಿ ಹೀಗೆ ಬರುವವರು ಒಂದೋ ಮಾಂದಲಪಟ್ಟಿ, ಕೋಟೆಬೆಟ್ಟ,ಪುಷ್ಪಗಿರಿ ಅಥವಾ ತಡಿಯಂಡಮೋಳ್ ಬೆಟ್ಟ ಹತ್ತುವುದು ವಾಡಿಕೆ. ಆದ್ರೆ ಜೀವನದಿ ಕಾವೇರಿಯ ಜನ್ಮಸ್ಥಳ ತಲಕಾವೇರಿ ಮತ್ತು ಭಾಗಮಂಡಲ ಪ್ರದೇಶದಲ್ಲಿ ಮೈಚಾಚಿ ಮಲಗಿರೋ ನಿಶಾನಿ ಬೆಟ್ಟ ಸಾಲುಗಳು ಚಾರಣಿಗರ ಪಾಲಿಗೆ ನಿಜಕ್ಕೂ ಹಾಟ್ ಸ್ಪಾಟ್ ಆಗಿದೆ. ತಲಕಾವೇರಿಯಿಂದ ದಟ್ಟ ಕಾಡಿನ ಮಧ್ಯೆ ಸುಮಾರು 10 ಕಿಲೋ ಮೀಟರ್ ನಡೆದು ಸಾಗಬೇಕು.
ಈ ಸಂದರ್ಭ ಕಾಲುಗಳಿಗೆ ಮುತ್ತಿಕೊಳ್ಳುವ ತಿಗಣೆಗಳಿಂದ ಬಚಾವ್ ಆಗುವುದೇ ಬಹುದೊಡ್ಡ ಸಾಹಸ. ಇದರ ಜೊತೆಗೆ ಹೆಜ್ಜೆ ಹೆಜ್ಜೆಗೆ ಕಾಡಾನೆಗಳ ಲದ್ದಿಗಳು ಕಾಣಸಿಗುತ್ತವೆ. ಎಲ್ಲಿ ಕಾಡಾನೆಗಳು ಮೇಲೆರಗುತ್ತವೋ ಅನ್ನೋ ಭಯವೂ ಕಾಡುತ್ತದೆ. ಹೀಗೆ ಅರಣ್ಯದಲ್ಲಿ 10 ಕಿಮಿ ನಡಿಯ ಮೂಲಕ ಸಾಗಿದ ಬಳಿಕ ಪರ್ವತಸಾಲುಗಳು ಎದುರಾಗುತ್ತದೆ. ನಿಶಾನಿ ಮೊಟ್ಟೆ ಯಂಥ ಬೃಹತ್ ಗಾತ್ರದ ಪರ್ವತ ಚಾರಣಿಗರ ಎದುರು ಸವಾಲೊಡ್ಡಿ ನಿಂತಿತರುತ್ತದೆ. ಆದ್ರೆ ಇಷ್ಟು ದೂರ ಬಂದ ಮೇಲೆ ಇನ್ನು ಗುರಿ ಮುಟ್ಟದೆ ಹಿಂದಕ್ಕೆ ತೆರಳುವುದುಂಟೇ ಅಂತ ಭಾವಿಸಿ ಕಷ್ಟಪಟ್ಟು ನಿಶಾನಿ ಬೆಟ್ಟ ಹತ್ತಿಬಿಟ್ಟರಂತೂ ಕಣ್ಣೆದುರು ಸ್ವರ್ಗವೇ ಬಂದಂತೆ ಭಾಸವಾಗುತ್ತದೆ.
ಚಾರಣದುದ್ದಕ್ಕೂ ಹಲವು ಬಗೆಯ ಪ್ರಕೃತಿ ವಿಸ್ಮಯಗಳ ಗೋಚರಿಸುತ್ತದೆ. ನಿಶಾನಿ ಬೆಟ್ಟಕ್ಕೆ ಒಂದು ಕಡೆಯಿಂದ ಅಲೆ ಅಲೆಯಾಗಿ ಬಂದಪ್ಪಳಿಸೋ ಮಂಜಿನ ರಾಶಿಯನ್ನ ನೋಡ್ತಾ ಇದ್ರೆ ಮನಸ್ಸು ತುಂಬಿ ಬರುತ್ತದೆ. ಹಾಗೆಯೇ ಹಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಸಿಗೋ ಬಣ್ಣ ಬಣ್ಣದ ಬೆಟ್ಟದ ಹೂವುಗಳು ಕಣ್ಮನ ಸೆಳೆಯುತ್ತದೆ. ದಾರಿ ಮಧ್ಯೆ ಕಾಡು ಹಣ್ಣಗಳನ್ನ ಸವಿಯೋ ವಿಶೇಷಾವಕಾಶವೂ ಇದೆ. ಮಲೆನಾಡಿನ ಸಾಂಪ್ರದಾಯಿಕ ಹಣ್ಣುಗಳಾದ ಅಮ್ಮೆ ಹಣ್ಣು, ಎಲೆಂಜಿ ಹಣ್ಣು, ಚೂರಿ ಹಣ್ಣು ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನ ತಿನ್ನುತ್ತಾ ಎಂಜಾಯ್ ಮಾಡಬಹುದು. ಇವನ್ನ ಮೆಲ್ಲುತ್ತಾ ಪ್ರಕೃತಿಯನ್ನ ಆಸ್ವಾದಿಸುತ್ತಾ ನಿಶಾನಿ ಮೊಟ್ಟೆಯ ತುತ್ತ ತುದಿಗೇರಿದ್ರೆ ಖುಷಿಯೋ ಖುಷಿ. ಅದುವರೆಗಿನ ಎಲ್ಲಾ ಆಯಾಸಗಳನ್ನ ಅಲ್ಲಿನ ವಾತಾವರಣ ಮರೆಸಿಬಿಡುತ್ತದೆ.