
ಬಡ ರೋಗಿಗಳ ಶುಶ್ರೂಷೆಗೆ ಜೀವನ ಮುಡುಪಿಟ್ಟ ವೈದ್ಯರು, ಅಕ್ಷರ ಜ್ಞಾನ ಉಣಬಡಿಸಿದ ಅಧ್ಯಾಪಕರು ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜ್ಯದ 27 ಸಾಧಕರಿಗೆ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ‘ಸುವರ್ಣ ಕನ್ನಡಿಗ- 2025 ಪ್ರಶಸ್ತಿ’ ನೀಡಿ ಗೌರವಿಸಿದೆ.
ಬೆಂಗಳೂರು (ಮಾ.14): ಬಡ ರೋಗಿಗಳ ಶುಶ್ರೂಷೆಗೆ ಜೀವನ ಮುಡುಪಿಟ್ಟ ವೈದ್ಯರು, ಅಕ್ಷರ ಜ್ಞಾನ ಉಣಬಡಿಸಿದ ಅಧ್ಯಾಪಕರು ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜ್ಯದ 27 ಸಾಧಕರಿಗೆ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ‘ಸುವರ್ಣ ಕನ್ನಡಿಗ- 2025 ಪ್ರಶಸ್ತಿ’ ನೀಡಿ ಗೌರವಿಸಿದೆ. ಮೂವರು ಸಾಧಕರಿಗೆ ಜೀವಮಾನ ಪ್ರಶಸ್ತಿ ಅರ್ಪಿಸುವ ಮೂಲಕ ಮತ್ತೊಮ್ಮೆ ತನ್ನ ಸಾಮಾಜಿಕ ಜವಾಬ್ದಾರಿ ಸಾಬೀತು ಮಾಡಿದೆ. ನಾಡಿನ ಪ್ರತಿಷ್ಠಿತ ಸುದ್ದಿಸಂಸ್ಥೆಯಾಗಿರುವ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುರ್ಣನ್ಯೂಸ್ ಮೂರನೇ ಬಾರಿಗೆ ಸುವರ್ಣ ಕನ್ನಡಿಗ ಪ್ರಶಸ್ತಿ ಕೊಡುವ ಮೂಲಕ ಪ್ರಚಾರದ ಹಂಗಿಲ್ಲದೆ, ತಮ್ಮ ಜವಾಬ್ದಾರಿ ಅರಿತು ತೆರೆಮರೆಯಲ್ಲಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಸಾಧಕರ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸುವ ಮಹತ್ತರ ಕೆಲಸ ಮಾಡಿವೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಖ್ಯಾತ ಕಲಾವಿದರ ನೃತ್ಯ, ಸಂಗೀತ ಪ್ರದರ್ಶನದೊಂದಿಗೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಗಣ್ಯರು, ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ‘ಸುವರ್ಣ ಕನ್ನಡಿಗ’ ಪ್ರಶಸ್ತಿ ಸ್ವೀಕರಿಸಿದ ಸಾಧಕರು ಸಂತಸ ಪಟ್ಟರು. ಜೊತೆಗೆ ಸಾಧಕರ ಕುಟುಂಬದ ಸದಸ್ಯರು, ಸ್ನೇಹಿತರು, ಹಿತೈಷಿಗಳು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಮಾಡಿದ ‘ಸುವರ್ಣ ಕನ್ನಡಿಗ 2025’ ಪ್ರಶಸ್ತಿ, ಉಡುಗೊರೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಹೆಮ್ಮೆಪಟ್ಟರು. ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಖ್ಯಾತ ನಟಿ, ಕಿರುತೆರೆ ನಿರ್ಮಾಪಕಿ ಶೃತಿ ನಾಯ್ಡು, ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.