- ಅಕಾಲಿಕ ಮಳೆಗೆ ಬೆಳೆ ನಷ್ಟ: ಈವರೆಗೆ 7 ರೈತರ ಆತ್ಮಹತ್ಯೆ
- ಈರುಳ್ಳಿ, ಟೊಮೆಟೋ, ಹೂಕೋಸು, ಜೋಳ ಹಾಳು
- ಸಾಲಸೋಲ ಮಾಡಿ ಬೆಳೆ ಬೆಳೆದ ರೈತರ ನಿರೀಕ್ಷೆಗಳಿಗೆ ಮಳೆರಾಯ ತಣ್ಣೀರೆರಚಿದ್ದಾನೆ
ಬೆಂಗಳೂರು (ನ. 26): ಅಕಾಲಿಕ ಮಳೆಯಿಂದ (Untimely Rain) ರೈತರು ಹೈರಾಣಾಗಿದ್ದಾರೆ. ಬೆಳೆದ ಬೆಳೆ ಕಣ್ಣೆದುರೇ ಹಾಳಾಗುವುದನ್ನು ಕಂಡು ನೊಂದಿದ್ದಾರೆ. ಮಳೆರಾಯನಿಗೆ ಶಾಪ ಹಾಕಿದ್ದಾರೆ. ರಾಜ್ಯದಲ್ಲಿ ಒಂದು ವಾರದಲ್ಲಿ 7 ಮಂದಿ ರೈತರು (farmers) ಆತ್ಮಹತ್ಯೆಗೆ(Suicide) ಶರಣಾಗಿದ್ಧಾರೆ.
ಬೇಸಿಗೆಯಲ್ಲಿ ಬರ, ಬಳಿಕ ಸುರಿದ ಮುಂಗಾರು ಮಳೆ, (Monsoon) ನಂತರ ನೆರೆಯ ಹೊಡೆತಕ್ಕೆ ಸಿಲುಕಿ ನಲುಗಿದ್ದ ರೈತರು ಈಗಲಾದರೂ ಬೆಳೆ ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅಕಾಲಿಕವಾಗಿ ಸುರಿದ ಮಳೆ ವಿವಿಧೆಡೆ ಸಾಲಸೋಲ ಮಾಡಿ ಬೆಳೆ ಬೆಳೆದ ರೈತರ ನಿರೀಕ್ಷೆಗಳಿಗೆ ತಣ್ಣೀರೆರಚಿದೆ. ಕಷ್ಟಪಟ್ಟು ಬೆಳೆದ ಭತ್ತ, ತೊಗರಿ, ಶುಂಠಿ, ಗೋವಿನಜೋಳ, ಈರುಳ್ಳಿ ಮೊದಲಾದ ಬೆಳೆಗಳು ನೀರುಪಾಲಾಗಿವೆ. ಸಾಲ ಮಾಡಿ ಬೆಳೆದ ಬೆಳೆ ನೀರು ಪಾಲಾಗಿದ್ದರಿಂದ ದಿಕ್ಕು ತೋಚದೇ ಆತ್ಮಹತ್ಯೆಗೆ ಶರಣಾಗಿದ್ದಾರೆ.