402 ಪಿಎಸ್ಐ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ಪಿಎಸ್ಐ ಹುದ್ದೆಗೆ ಎಬಿವಿಪಿ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳುವ ಪ್ಲ್ಯಾನ್ ಮಾಡಲಾಗಿತ್ತು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ.
ಬೆಂಗಳೂರು (ಏ.23): ಪಿಎಸ್ಐ ನೇಮಕಾತಿ ಹಗರಣದ ವಿಚಾರದಲ್ಲಿ(PSI Recruitment Scam) ದಿನಕ್ಕೊಂದರಂತೆ ಹೊಸ ಸುದ್ದಿಗಳು ಹೊರಗಡೆ ಬರುತ್ತಿವೆ. ರಾಜ್ಯದಲ್ಲಿ 402 ಪಿಎಸ್ಐ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ಎಬಿವಿಪಿ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರನ್ನು ಈ ಹುದ್ದೆಗೆ ನೇಮಿಸಿಕೊಳ್ಳಲು ಸರ್ಕಾರ ಬಯಸಿತ್ತು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Congress MLA Priyank Kharge) ಗಂಭೀರ ಆರೋಪ ಮಾಡಿದ್ದಾರೆ.
ಇದಲ್ಲದೆ, ಮುಂದೆ ಆಗಬೇಕಾಗಿರುವ ನೇಮಕಾತಿಗಳು ಕೂಡ ಇದಾಗಲೇ ಬುಕ್ ಆಗಿದೆ. ಎಬಿವಿಪಿ (ABVP), ಶ್ರೀರಾಮಸೇನೆ (Sri Rama Sene) ಕಾರ್ಯಕರ್ತರನ್ನೇ ನೇಮಕ ಮಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಮಟ್ಟದಲ್ಲೂ ಪ್ಲ್ಯಾನ್ ಮಾಡಿತ್ತು. ಚೇತನ್ ನಂದಗಾಂವ್ ಎನ್ನುವ ವ್ಯಕ್ತಿ ಶ್ರೀರಾಮಸೇನೆ ಕಾರ್ಯಕರ್ತ, ಅರುಣ್ ಕುಮಾರ್ ಎನ್ನುವ ವ್ಯಕ್ತಿ ಎಬಿವಿಪಿ ಕಾರ್ಯಕರ್ತ ಹಾಗೂ ಪ್ರವೀಣ್ ಕುಮಾರ್ ಎನ್ನುವ ವ್ಯಕ್ತಿ ಈಗಾಗಲೇ ಪಿಎಸ್ಐ ಅಗಿ ನೇಮಕವಾಗಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
PSI ನೇಮಕಾತಿ ಹರಗಣದ ಸೂತ್ರಧಾರ ಕಾಂಗ್ರೆಸ್‌ನ ಆರ್‌ಡಿ ಪಾಟೀಲ್‌ಗಾಗಿ ಹುಡುಕಾಟ
ಬಿಜೆಪಿ ತನಗೆ ಬೇಕಾದವರನ್ನು ಪೊಲೀಸ್ ಇಲಾಖೆಯಲ್ಲಿ ನೇಮಕ ಮಾಡುತ್ತಿದೆ. ಪಿಎಸ್ಐ ನೇಮಕಾತಿಯಲ್ಲಿ ಈಗಾಗಲೇ ಆಯ್ಕೆಯಾಗಿರುವವರು ಬಿಜೆಪಿಗೆ ಬೇಕಾದಂಥ ವ್ಯಕ್ತಿಗಳಾಗಿದ್ದಾರೆ. 545 ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಮಾತ್ರವಲ್ಲ ಮುಂದೆ ನಡೆಯಬೇಕಾಗಿರುವ 402 ನೇಮಕಾತಿಯಲ್ಲೂ ಅಕ್ರಮದ ಪ್ಲ್ಯಾನ್ ಆಗಿತ್ತು ಎಂದು ಹೇಳಿದ್ದಾರೆ.