ಮಂಗಳೂರಿನ ಮಂಗಳಾದೇವಿ, ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ, ಉಡುಪಿ ಜಿಲ್ಲೆ ಕಾಪುವಿನ ಮಾರಿಗುಡಿ ಜಾತ್ರೆಗಳಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಮಂಗಳೂರು (ಮಾ. 23): ಮಂಗಳಾದೇವಿ, ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ, ಉಡುಪಿ ಜಿಲ್ಲೆ ಕಾಪುವಿನ ಮಾರಿಗುಡಿ ಜಾತ್ರೆಗಳಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ನೆಲದ ಸಂವಿಧಾನ ಕಾನೂನುಗಳನ್ನು ಗೌರವಿಸದ, ನಾವು ಪೂಜಿಸುವ ಗೋವುಗಳನ್ನು ಅಮಾನುಷವಾಗಿ ಕೊಲ್ಲುವ, ಈ ದೇಶದ ಅಖಂಡತೆಗೆ ಸವಾಲು ಎಸೆಯುವ ಮತಾಂಧರ ಜೊತೆ ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ನಡೆಸುವುದಿಲ್ಲ ಮತ್ತು ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ ಎಂಬ ಒಕ್ಕಣೆಯಿರುವ ಬ್ಯಾನರ್‌ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳಾದೇವಿ, ಬಪ್ಪನಾಡು ದೇವಸ್ಥಾನಗಳಲ್ಲಿ ಹಿಂದೂಪರ ಸಂಘಟನೆಗಳು ಬಹಿರಂಗವಾಗಿ ಅಳವಡಿಸಲಾಗಿದೆ. ಪುತ್ತೂರು ದೇವಸ್ಥಾನದ ಆಡಳಿತ ಮಂಡಳಿಯು ಹಿಂದೂ ಬಾಂಧವರಿಗೆ ಮಾತ್ರ ಜಾತ್ರೆಯ ಸಂತೆ ಗುತ್ತಿಗೆಯಲ್ಲಿ ಭಾಗವಹಿಸಲು ಅವಕಾಶ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಹೈಕೋರ್ಟ್ ತೀರ್ಪಿನ ಹೊರತಾಗಿಯೂ ಹಿಜಾಬ್ ಧರಿಸುವುದನ್ನು ಬೆಂಬಲಿಸಿ ಕೆಲ ಮುಸ್ಲಿಂ ಪರ ಸಂಘಟನೆಗಳು ಇತ್ತೀಚೆಗೆ ರಾಜ್ಯಾದ್ಯಂತ ಅಂಗಡಿ ಬಂದ್ ನಡೆಸಿರುವ ಬಗ್ಗೆ ಉಂಟಾಗಿರುವ ಅಸಮಾಧಾನವೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗಿದೆ.