Oct 18, 2023, 8:45 PM IST
ಬೆಂಗಳೂರು (ಅ.18): ರಾಜ್ಯ ಸರ್ಕಾರದಿಂದ ನೀಡುವ ಪರಿಹಾರಕ್ಕಾಗಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಇತ್ತೀಚೆಗೆ ಹೈದರಾಬಾದ್ ರೆಸಾರ್ಟ್‌ನಲ್ಲಿ ನಡೆದ ತಮ್ಮ ಪರಿಚಯಸ್ಥರ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಅವರ ಮೇಲೆ ಹಣದ ಮಳೆಯನ್ನೇ ಹರಿಸಲಾಗಿದೆ. ಸಚಿವ ಶಿವಾನಂದ ಪಾಟೀಲ್ ಕಾಲಡಿಯಲ್ಲಿ ನೋಟಿನ ರಾಶಿಗಳೇ ಬಿದ್ದಿದ್ದವು. ಸಚಿವರ ನಡೆಯ ವಿರುದ್ಧ ರೈತರು, ಸಾರ್ವಜನಿಕರು ಹಾಗೂ ವಿಪಕ್ಷಗಳಿಂದ ಭಾರಿ ಟೀಕೆ ಎದುರಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಉಡಾಫೆಯಿಂದ ಉತ್ತರಿಸಿದ್ದಾರೆ. ನಾನು ಲಗ್ನಕ್ಕೆ ಹೋಗಬಾರದಾ? ಹಣ ಚೆಲ್ಲುವುದು ಅಲ್ಲಿಯವರ ಸಂಸ್ಕೃತಿಯಾಗಿದೆ. ಅದಕ್ಕೆ ನಾನೇನು ಮಾಡೋಕಾಗತ್ತೆ? ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು, ಹೈದರಾಬಾದ್ ನಲ್ಲಿ ಬರ ಇದೆಯಾ? ಅಲ್ಲಿಯ ಗೃಹ ಸಚಿವರೇ ಕಾರ್ಯಕ್ರಮಕ್ಕೆ ಬಂದಿದ್ರು. ಇದನ್ನೂ ಈಗ ವೈರಲ್ ಮಾಡ್ತೀರಾ ನೀವು? ಯಾರೋ ಮಾಡಿದ್ದಕ್ಕೆ ನಾನು ಮದುವೆಗೆ ಹೋಗಬಾರಾದಾ? ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ ಅಷ್ಟೇ, ನಾನು ಹೋಗಿ ಅವರ ಸಂಸ್ಕೃತಿ ನಿಲ್ಲಿಸೋದಕ್ಕಾಗತ್ತಾ? ಎಂದು ಪ್ರಶ್ನಿಸಿದ್ದಾರೆ.