Jun 29, 2023, 11:03 PM IST
ಬಳ್ಳಾರಿ (ಜೂ.29): ರಾಜ್ಯ ಸರ್ಕಾರದ ಗ್ಯಾರಂಟಿ ಗಲಾಟೆ ರಾಜ್ಯದ ರಾಜಧಾನಿಯಿಂದ ಇದೀಗ ಗಲ್ಲಿಗೆ ಬಂದಿದೆ. ಸರ್ಕಾರದ ಯೋಜನೆ ಲಾಭ ಪಡೆಯೋ ಧಾವಂತ ಸಾರ್ವಜನಿಕರದ್ದಾಗಿದೆ. ಇದರ ದುರುಪಯೋಗ ಪಡೆದು ಕೊಂಡು ಒಂದಷ್ಟು ಹಣ ಮಾಡಲು ಖಾಸಗಿ ಏಜೆನ್ಸಿಯವರು ಮುಂದಾಗಿದ್ದಾರೆ. ಈ ಮಧ್ಯೆ ಏನು ಗೊತ್ತಾಗದ ಜನರು ಹಣವನ್ನು ಕಳೆದುಕೊಂಡು ಪರದಾಡ್ತಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಗಳಾದ ಗೃಹಲಕ್ಣ್ಮೀ ಯೋಜನೆ ಅಪ್ಲಿಕೇಶನ್ ಇನ್ನೂ ಬಿಟ್ಟಿಲ್ಲ. ಆದ್ರೇ, ಅಷ್ಟರಲ್ಲಾಗಲೇ ಖಾಸಗಿ ಏಜೆನ್ಸಿಯವರು ಅಪ್ಲಿಕೇಶನ್ ತುಂಬುತ್ತೇವೆಂದು ಮನೆ ಮನೆಗೆ ತೆರಳಿ 150 ರೂಪಾಯಿ ಹಣ ಪಡೆಯುತ್ತಿದ್ದಾರಂತೆ. ಹೀಗೆ ಬಂದ ಜನರನ್ನು ಬಳ್ಳಾರಿಯಲ್ಲಿ ಜನರು ಪ್ರಶ್ನಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ದಿಶಾ ಒನ್ ಹೆಸರಲ್ಲಿ ಖಾಸಗಿ ಏಜೆನ್ಸಿಯವರು ಸರ್ಕಾರದ ಯೋಜನೆಗಳಾದ ಗೃಹ ಲಕ್ಷ್ಮೀ, ಗೃಹ ಜ್ಯೋತಿ ಸೇರಿದಂತೆ ಇತರೆ ಸ್ಕೀಂ ಫಾರಂ ತುಂಬುತ್ತೇವೆಂದು ಹಣ ಸಂಗ್ರಹ ಮಾಡಿದ್ದಾರೆ. ಒಂದು ಫಾರಂ ತುಂಬಿಕೊಡಲು 150 ರೂಪಾಯಿ ಹಣ ಕಲೆಕ್ಟ್ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ಕೆಲವರು ಪ್ರಶ್ನಿಸೊದ್ರ ಜೊತೆ ಗಲಾಟೆ ಮಾಡಿದ್ದಾರೆ. ಆದ್ರೇ ಖಾಸಗಿ ಏಜೆನ್ಸಿಯವರು ಮಾತ್ರ ಇದು ನಮ್ಮ ವೃತ್ತಿ ಜನಸೇವೆ ಮಾಡೋದ್ರ ಜೊತೆಗೆ ಒಂದಷ್ಟು ಫೀಸ್ ನಿಗದಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಆದರೆ ಜನರು ಮಾತ್ರ ಉಚಿತ ಘೋಷಣೆಗೆ ಹಣ ಯಾಕೆ ಎನ್ನುತ್ತಿದ್ದಾರೆ. ಗಲಾಟೆ ಜೋರಾದ ಬಳಿಕ ಖಾಸಗಿ ಏಜೆನ್ಸಿಯವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ.