ಕಾಂಗ್ರೆಸ್‌ನಲ್ಲಿ 2.5 ವರ್ಷಕ್ಕೆ ಸಿಎಂ ಹುದ್ದೆ ಹಂಚಿಕೆ ಒಪ್ಪಂದದ ಗುಟ್ಟು ಬಿಚ್ಚಿಟ್ಟ ಡಿ.ಕೆ, ಶಿವಕುಮಾರ್

Dec 4, 2024, 2:50 PM IST

ಬೆಂಗಳೂರು (ಡಿ.04): ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡ ನಂತರ 135 ಸೀಟುಗಳನ್ನು ಪಡೆದ ಕಾಂಗ್ರೆಸ್‌ಗೆ ಇಬ್ಬರು ಪಕ್ಷೇತರರ ಬೆಂಬಲ ಸೇರಿ 137 ಶಾಸಕರ ಬೆಂಬಲ ಸಿಗುತ್ತದೆ. ಆದರೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಇಬ್ಬರೂ ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದು ಕುಳಿತುಕೊಂಡಿದ್ದರು.

ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರಾದವರೇ ಸಿಎಂ ಆಗಬೇಕು ಎಂಬ ನಿಯಮವಿತ್ತು. ಆದರೆ, 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದರೂ ಸ್ವತಃ ಪರಮೇಶ್ವರ ಅವರೇ ಸೋಲು ಅನುಭವಿಸಿದ್ದರು. ಹೀಗಾಗಿ, ಅಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದರು. ಇದಾದ ನಂತರ ಪುನಃ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷದೊಳಗೆ ಬಿದ್ದುಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಇದಾದ ನಂತರ 2023ರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದ್ದು ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿದ್ದರು. ಆದರೆ, ಸಿದ್ದರಾಮಯ್ಯ ನಾನು ಈಗಾಗಲೇ ಸಿಎಂ ಆಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದರೂ ಕೆಳ ಹಂತದಲ್ಲಿ ಸಚಿವನಾಗಿ ಕಾರ್ಯ ನಿರ್ವಹಿಸಲಾರೆ. ಹೀಗಾಗಿ, ಸಿಎಂ ಪಟ್ಟವನ್ನು ಕೊಡಲೇಬೇಕು ಎಂದು ಪಟ್ಟು ಹಿಡಿದರು. ಸುಮಾರು ಒಂದು ವಾರಗಳ ಕಾಲ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕುಳಿತುಕೊಂಡು ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಸಾಲು ಸಾಲು ಚರ್ಚೆಗಳನ್ನು ನಡೆಸಿ ಅಂತಿಮವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ತೀರ್ಮಾನಕ್ಕೆ ಬಂದರು. 

ಇದನ್ನೂ ಓದಿ: ಬಾಂಗ್ಲಾದೇಶಿ 'ಮುಸ್ಲಿಮರು ಅನ್ನ ತಿಂದ ಮನೆಗೆ ಕನ್ನ ಹಾಕುವವರು'; ಕೆ.ಎಸ್. ಈಶ್ವರಪ್ಪ!

ಆದರೆ, ಸಿದ್ದರಾಮಯ್ಯ ಸಿಎಂ ಆಗುವುದಾದರೆ, ನನಗೆ ಡಿಸಿಎಂ ಸ್ಥಾನ ಕೊಡಬೇಕು. ಜೊತೆಗೆ, ಬೇರೆ ಯಾರೊಬ್ಬರಿಗೂ ಡಿಸಿಎಂ ಸ್ಥಾನ ಕೊಡಬಾರದು ಎಂದು ಪಟ್ಟು ಹಿಡಿದು ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಜಲ ಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಇದೀಗ 2.5 ವರ್ಷಗಳ ಕಾಲ ಕಾದು ನೋಡುವ ತಂತ್ರವನ್ನು ಮಾಡಿದ್ದು, ಸಿಎಂ ಹುದ್ದೆ ಬೇರೆಯವರ ಪಾಲಾಗಲಿದೆಯೇ ಎಂಬ ಚರ್ಚೆಗಳು ಆರಂಭವಾಗಿವೆ. ಈಗ ಡಿಸಿಎಂ ನಮ್ಮ ನಡುವೆ ಕೆಲವು ಒಪ್ಪಂದ ಆಗಿವೆ.. ಆ ದಿನಕ್ಕೆ ಕಾಯ್ತಿದ್ದೇನೆ. ನನ್ನ ಬಲ, ನನ್ನ ದೌರ್ಬಲ್ಯ ಏನೆಂದು ನನಗೆ ಗೊತ್ತು. ನನ್ನ ನಿಷ್ಠೆ, ಪ್ರಾಮಾಣಿಕತೆ ನನಗೆ ಬೇಕಾದ್ದನ್ನು ತಂದು ಕೊಡುತ್ತದೆ ಎಂದು ಹೇಳುವ ಮೂಲಕ ತಾವು ಪರೋಕ್ಷವಾಗಿ ಸಿಎಂ ಆಗುವ ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ.