Tumakuru Bus accident: ಸಾವಿನ ಸವಾರಿಯಾದ ಬಸ್, ಕಾಲೇಜಿಗೆ ಹೋಗಿ ಬರ್ತೀನಿ ಅಂದವರು ಮಸಣ ಸೇರಿದರು

Mar 20, 2022, 11:39 AM IST

ಪಾವಗಡ (ಮಾ. 20): ಅಮ್ಮ ಕೆಲಸಕ್ಕೆ ಹೋಗಿ ಬರ್ತೀನಿ.. ಅಂತಾ ಹೇಳಿ ಬೆಳಗ್ಗೆಯೇ ಮನೆಯಿಂದ ಹೊರಟು ಬಸ್‌ ಹತ್ತಿದವರು. ಆದರೆ, ಕಾಲೇಜಿಗೆ ಹೋಗಿ ಬರುತ್ತೇವೆಂದಿದ್ದ ಮಕ್ಕಳು ಕಾಲೇಜಿಗೆ ಹೋಗಿ ಮನೆ ಸೇರದೇ ಮಸಣ ಸೇರಿದ್ದಾರೆ. ಕೆಲಸಕ್ಕೆ ಹೋಗಿ ಬರ್ತೀವಿ ಎಂದವರು, ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ.

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಬಳಿ ಶನಿವಾರ ಬೆಳಗ್ಗೆ ಖಾಸಗಿ ಬಸ್ಸೊಂದು ಉರುಳಿ ಬಿದ್ದು ಸ್ಥಳದಲ್ಲೇ ನಾಲ್ವರು ವಿದ್ಯಾರ್ಥಿಗಳು ಸೇರಿ ಐದು ಜನರು ಸಾವನ್ನಪ್ಪಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪಾವಗಡ ಹಾಗೂ ವೈ.ಎನ್‌. ಹೊಸಕೋಟೆ ಮಾರ್ಗವಾಗಿ ಸರ್ಕಾರಿ ಬಸ್‌ಗಳ ಕೊರತೆಯಿಂದಾಗಿ ಖಾಸಗಿ ಬಸ್‌ಗಳ ಓಡಾಟ ಹೆಚ್ಚಿದ್ದು ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಮತ್ತು ಪದವಿಯ ವಾರ್ಷಿಕ ಪರೀಕ್ಷೆಗಳ ಸಮಯದ ಕಾರಣ ಪಾವಗಡ ಪಟ್ಟಣದ, ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಖಾಸಗಿ ಬಸ್‌ಗಳನ್ನು ಅವಲಂಬಿಸಿದ್ದಾರೆ.ಈ ಹಿನ್ನೆಲೆಯ ಸರ್ಕಾರಿ ಬಸ್‌ ಗಳ ಅಭಾವದಿಂದ ಖಾಸಗಿ ಬಸ್‌ಗಳು ಒಳ ಮತ್ತು ಟಾಪ್‌ಗಳ ಮೇಲೆ ಪ್ರಯಾಣಿಕರನ್ನು ಕಿಕ್ಕಿರಿದು ತುಂಬಿಸಿಕೊಂಡು ಪಾವಗಡಕ್ಕೆ ಬರುವುದು ಸಾಮಾನ್ಯವಾಗಿದ್ದು ಹೆಚ್ಚು ಮಂದಿ ಪ್ರಯಾಣಿಕರನ್ನು ತುಂಬಿಸಿಕೊಂಡು ವೇಗವಾಗಿ ಬರುತ್ತಿರುವ ವೇಳೆ,ಕೆರೆ ಕಟ್ಟೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.