ವಿದ್ಯುತ್‌, ಮದ್ಯ, ಹಾಲಷ್ಟೇ ಅಲ್ಲ, ನೀರಿನ ದರವೂ ಹೆಚ್ಚಳ?

Jun 8, 2023, 10:20 AM IST

ಬೆಂಗಳೂರು (ಜೂ.08): ವಿದ್ಯುತ್‌, ಮದ್ಯ, ಹಾಲಿನ ದರಗಳು ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾವನೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ನೀರಿನ ದರವೂ ಹೆಚ್ಚಳ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಏರಿಕೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಶೀಘ್ರದಲ್ಲಿ ಈ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರು ಜಲಮಂಡಳಿ ಅಧಿಕಾರಿಗಳೊಂದಿಗೆ ಮಂಗಳವಾರ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ಬೆಂಗಳೂರು ಜಲಮಂಡಳಿಯ ಸ್ಥಿತಿ ಚಿಂತಾಜನಕವಾಗಿದೆ. 2014ರಿಂದ ಈವರೆಗೆ ನೀರು ಬಳಕೆ ಶುಲ್ಕ ಹೆಚ್ಚಳ ಮಾಡಿಲ್ಲ. 

ಹೀಗಾಗಿ ಜಲಮಂಡಳಿ ಆದಾಯ ತೀರಾ ಕಡಿಮೆಯಿದ್ದು, ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹೀಗಾಗಿ ನೀರಿನ ಶುಲ್ಕ ಹೆಚ್ಚಳ ಸೇರಿ ಜಲಮಂಡಳಿಯನ್ನು ಆರ್ಥಿಕವಾಗಿ ಸಬಲಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಜಲಮಂಡಳಿ ಬಳಿ ಸಿಬ್ಬಂದಿ, ಅಧಿಕಾರಿಗಳಿಗೆ ವೇತನ ನೀಡಲೂ ಹಣವಿಲ್ಲದಂತಾಗಿದೆ. ಜಲಮಂಡಳಿ ಕಾರ್ಯದ ಬಗ್ಗೆ ಸೂಚನೆ ನೀಡಲು ಬಂದಿದ್ದ ನನಗೆ ಅವರ ಗೋಳು ಕೇಳುವಂತಾಯಿತು. ಬೆಸ್ಕಾಂನಿಂದ ರಿಯಾಯಿತಿ ದರದಲ್ಲಿ ಜಲಮಂಡಳಿಗೆ ವಿದ್ಯುತ್‌ ಪೂರೈಸಲಾಗುತ್ತಿದೆ. ಆದರೆ, ಜಲಮಂಡಳಿಗೆ ವಾರ್ಷಿಕ 104 ಕೋಟಿ ಆದಾಯ ಬಂದರೆ 95 ಕೋಟಿ ವಿದ್ಯುತ್‌ ಬಿಲ್‌ ಪಾವತಿಗೇ ವ್ಯಯಿಸಬೇಕಾದ ಪರಿಸ್ಥಿತಿಯಿದೆ. ಇದರಿಂದಾಗಿ ಬೃಹತ್‌ ಯೋಜನೆಗಳೆಲ್ಲವನ್ನೂ ಸಾಲ ಪಡೆದೇ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.