ಆದಿಚುಂಚನಗಿರಿ ಶ್ರೀಗಳ ಎಚ್ಚರಿಕೆಗೂ ಮಣಿಯದ ಬಿಜೆಪಿ ನಾಯಕರು! ದಾಖಲೆ ಸಂಗ್ರಹಿಸಲು ಮುಂದಾದ ಸಿ.ಟಿ.ರವಿ!

Mar 21, 2023, 6:52 PM IST

ಬೆಂಗಳೂರು (ಮಾ.21): ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಪಾತ್ರಗಳಾದ ನಂಜೇಗೌಡ ಮತ್ತು ಉರಿಗೌಡ ವಿಚಾರದ ಬಗ್ಗೆ ಯಾರೊಬ್ಬರೂ ಮಾತನಾಡಬಾರದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದರು. ಆದರೆ, ಇದಕ್ಕೂ ಬಗ್ಗದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಉರಿಗೌಡ ಮತ್ತು ನಂಜೇಗೌಡರ ಪಾತ್ರಗಳು ಕಾಲ್ಪನಿಕ ಪಾತ್ರಗಳಲ್ಲ, ಸತ್ಯದ ಪಾತ್ರಗಳು ಆಗಿವೆ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಟಿ ರವಿ ಅವರು, ಸಾಹಿತಿ ಜವರೇಗೌಡರು ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡರ ಇತಿಹಾಸವನ್ನು ದಾಖಲಿಸಿದ್ದಾರೆ. ಸುಳ್ಳು ಅಂತ ಹೇಳಿದೋರು, ಕಾಲ್ಪನಿಕ ಅನ್ನೋರು ಕ್ಷಮೆ ಯಾಚಿಸಬೇಕು.ಆದರೆ, ಇತಿಹಾಸದ ಬಗ್ಗೆ ದಾಖಲೆಗಳಿಲ್ಲ ಎಂದು ಸ್ವಾಮೀಜಿಗಳು ಸಲಹೆ ಕೊಟ್ಟಿದ್ದು, ಅವರ ಮಾತನ್ನು ಗೌರವಿಸುತ್ತೇವೆ. ಒಕ್ಕಲಿಗ ವೀರರ ಇತಿಹಾಸದ ಬಗ್ಗೆ ಸಂಶೋಧನೆ ಮಾಡಿಸುತ್ತೇವೆ. ಜೊತೆಗೆ, ಈ ಬಗ್ಗೆ ಸ್ವಾಮೀಜಿಗಳೊಂದಿಗೆ ಮಾತನಾಡಿ, ಸಂಶೋಧನೆ ಮಾಡಲು ಸಹಕಾರ ನೀಡುವಂತೆ ಮನವಿ ಮಾಡಲಾಗುವುದು ಎಂದು ಸಿಟಿ ರವಿ ಹೇಳಿದ್ದಾರೆ.

ಆದಿಚುಂಚನಗರಿ ಶ್ರೀಗಳಿಂದ ಬಿಜೆಪಿ ಒಕ್ಕಲಿಗ ಸಚಿವರಿಗೆ ತರಾಟೆ: ಉರಿಗೌಡ, ನಂಜೇಗೌಡರ ಬಗ್ಗೆ ಚರ್ಚಿಸದಂತೆ ಎಚ್ಚರಿಕೆ

ಆದಿಚುಂಚನಗಿರಿ ಸ್ವಾಮೀಜಿ ನನ್ನ ಜೊತೆ ಮಾತಾಡಿದ್ದಾರೆ. ಗುರುಗಳ ಮಾತಿಗೆ ನಾವು ಗೌರವ ಕೊಡ್ತಿವಿ. ಟಿಪ್ಪು ಮತಾಂಧ ಅನ್ನೊದು ವಿವಾದ. ಅವನನ್ನ ವೈಭವಿಕರಿಸಲಾಗಿದೆ ಇತಿಹಾಸದಲ್ಲಿ ತಿಳಿಸಬೇಕಾದ್ದನ್ನ ತಿಳಿಸಿಲ್ಲ. ಬ್ರಿಟಿಷರು, ಪರ್ಶಿಯನ್ನರು ಎಲ್ಲರು ಸಹ ನಮ್ಮ ಆಕ್ರಮಣಕಾರರೇ. ಬ್ರಿಟಿಷರು ಬಂದ ತಕ್ಷಣ ಪರ್ಶಿಯನ್ನರು, ಡಚ್ಚರು ನಮ್ಮ ನೆಂಟ್ರು ಆಗಲ್ಲ. ಎಲ್ಲರೂ ಲೂಟಿ ಮಾಡಿದ್ದಾರೆ. ನಾವು ಮಕ್ಕಳಿಗೆ ಅಕ್ಬರ್‌ ನ ದಿ ಗ್ರೇಟ್ ಅಂತ ಪಾಠ ಹೇಳಿ‌ ಕೊಟ್ಟಿದ್ದೇವೆ. ಆದರೆ, ರಾಣಪ್ರತಾಪ್ ಸಿಂಗ್‌ ನನ್ನ ದಿ ಗ್ರೇಟ್ ಅಂತ ಹೇಳಿಕೊಡಲಿಲ್ಲ‌ ಎಂದು ಕಿಡಿಕಾರಿದ್ದಾರೆ.