Dec 21, 2021, 5:57 PM IST
ಬೆಳಗಾವಿ, (ಡಿ.21): ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮತಾಂತರ ನಿಷೇಧ ಕಾಯ್ದೆಯನ್ನ ಇಂದು(ಮಂಗಳವಾರ) ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು ಇದಕ್ಕೆ ವಿಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆಯಾಗಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪೂರಕ ಅಜೆಂಡಾ ಮಂಡಿಸಿದರು. ವಿಪಕ್ಷದ ಗಮನಕ್ಕೆ ಬರುವ ಮುನ್ನವೇ ಓದಿ ಮುಗಿಸಿದರು. ವಿಧೇಯಕ ಮಂಡನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ಸದಸ್ಯರು, ತರಾತುರಿಯಲ್ಲಿ ವಿಧೇಯಕ ಮಂಡನೆ ಮಾಡಲಾಗಿದೆ.
ವಿಧೇಯಕ ಪ್ರತಿ ನೀಡಿಲ್ಲ. ಬಿಎಸಿಯಲ್ಲಿ ಚರ್ಚೆಯಾಗಿಲ್ಲವೆಂದು ಆರೋಪಿಸಿದರು. ಹಾಗೆಯೇ ಕದ್ದುಮುಚ್ಚಿ ಯಾಕೆ ಮಂಡನೆ ಮಾಡುತ್ತಿದ್ದೀರಿ ಸರ್ಕಾರ ಕಳ್ಳತನದಿಂದ ವಿಧೇಯಕ ಮಂಡಿಸಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.